ನವದೆಹಲಿ: 1901ರಲ್ಲಿ ಸ್ವಾಮಿ ವಿವೇಕಾನಂದ (Swami Vivekananda) ಅವರು ತಂಗಿದ್ದ ಉತ್ತರಾಖಂಡದ (Uttarakhand) ಚಂಪಾವತ್ ಜಿಲ್ಲೆಯ (Champawat district) ಲೋಹಾಘಾಟ್ ಪ್ರದೇಶದ ಅದ್ವೈತ ಆಶ್ರಮದ (Advaita Ashram) ಮುಖ್ಯ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಂಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಕ್ಟೋಬರ್ 11 ಮತ್ತು 12ರಂದು ಪ್ರಧಾನಿ ಮೋದಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ, ಈ ವೇಳೆ ಅವರು ಅಕ್ಟೋಬರ್ 12ರ ರಾತ್ರಿ ಈ ಆಶ್ರಮದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತದೆ.
ಮಾಯಾವತಿ ಆಶ್ರಮ ಎಂದು ಸಾಮಾನ್ಯವಾಗಿ ಕರೆಯಲಾಗುವ ಅದ್ವೈತ ಆಶ್ರಮವನ್ನು 1899ರಲ್ಲಿ ಅದ್ವೈತ ವೇದಾಂತದ ಅಭ್ಯಾಸ ಮತ್ತು ಬೋಧನೆಗಾಗಿ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಸ್ಥಾಪಿಸಲಾಯಿತು. ಚಂಪಾವತ್ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಆಶ್ರಮವು 6,400 ಅಡಿ ಎತ್ತರದಲ್ಲಿದೆ ಮತ್ತು ಹಚ್ಚ ಹಸಿರಿನ ಕಾಡುಗಳಿಂದ ಆವೃತವಾಗಿದೆ. ಸ್ವಾಮಿ ವಿವೇಕಾನಂದರು 1901ರಲ್ಲಿ ಇಲ್ಲಿಗೆ ಭೇಟಿ ನೀಡಿ, ಹದಿನೈದು ದಿನಗಳ ಕಾಲ ಇಲ್ಲಿಯೇ ತಂಗಿದ್ದರು.
ಪ್ರಧಾನಿ ಮೋದಿ ಅಕ್ಟೋಬರ್ 11ರಿಂದ ಎರಡು ದಿನಗಳ ಕಾಲ ಪಿಥೋರಗಢ್ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರ ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ, ಅವರು ಪಿಥೋರಗಢ ಜಿಲ್ಲೆಯಲ್ಲಿ ಮೊದಲ ದಿನ ಚೀನಾ ಗಡಿಯ ಸಮೀಪವಿರುವ ನಾರಾಯಣ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಆ ರಾತ್ರಿ ಆಶ್ರಮದಲ್ಲಿ ತಂಗಲಿರುವ ಪ್ರಧಾನಿ ಮೋದಿ, ಮರುದಿನ ಅವರು ಕೈಲಾಸ ಪರ್ವತದ ದರ್ಶನಕ್ಕಾಗಿ ಪಿಥೋರಗಢ್‌ನಲ್ಲಿರುವ ಜೋಲಿಂಗ್‌ಕಾಂಗ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಕೈಲಾಸ ದರ್ಶನದ ನಂತರ ಪಿಥೋರಗಢ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಚಂಪಾವತ್ ಜಿಲ್ಲೆಯ ಮಾಯಾವತಿ ಆಶ್ರಮಕ್ಕೆ ಭೇಟಿ ನೀಡಿ ಅಕ್ಟೋಬರ್ 12ರಂದು ರಾತ್ರಿ ಅಲ್ಲಿಯೇ ತಂಗಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: PM Narendra Modi: ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
ಜಿಲ್ಲಾಧಿಕಾರಿ ನವನೀದ್ ಪಾಂಡೆ ಅವರು ಈಗಾಗಲೇ ಎರಡು ಬಾರಿ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮಾಯಾವತಿ ಆಶ್ರಮದ ಸ್ವಾಮಿ ಶುದ್ಧಿದಾನಂದ, “ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ನಮ್ಮ ಮುಖ್ಯ ಆಶ್ರಮದಲ್ಲಿ ಉಳಿದುಕೊಳ್ಳಲಿದ್ದಾರೆ. 1901ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ನಮ್ಮ ಮುಖ್ಯ ಆಶ್ರಮ ಕಟ್ಟಡದಲ್ಲಿ ನಾವು ಆತಿಥ್ಯ ನೀಡುತ್ತಿರುವ ಮೊದಲ ಅತಿ ಪ್ರಮುಖ ಗಣ್ಯ ವ್ಯಕ್ತಿಯಾಗಿದ್ದಾರೆ. ನಮ್ಮ ಆಶ್ರಮಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಅವರು ಆದ್ದರಿಂದ ಆಶ್ರಮದ ಆಡಳಿತವು ಅವರಿಗೆ ಈ ಗೌರವವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಶಾಸಕ ಕುಶಾಲ್ ಶಿಂಗ್ ಅಧಿಕಾರಿ ಅವರು ಪ್ರಧಾನಿ ಭೇಟಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ನಮ್ಮ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ನಮ್ಮ ಅದೃಷ್ಟ. ಅವರು ದೇಶದ ಪ್ರಧಾನಿಯಾಗಿರುವುದರಿಂದ ನಾವು ಅವರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಮೋದಿ ಇಲ್ಲಿಗೆ ಬಂದರೆ ಖಂಡಿತ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಣೆಕೆ ಕೊಡುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.