ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್‌ನಲ್ಲಿ ಭದ್ರತಾ ವೈಫಲ್ಯ (Modi Security Lapse) ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರವು ಭಟಿಂಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುರುಬಿಂದರ್ ಸಿಂಗ್ (Bathinda SP Gurbinder Singh) ಅವರನ್ನು ಅಮಾನತುಗೊಳಿಸಿದೆ. 2022ರ ಜನವರಿ 5ರಂದು ನರೇಂದ್ರ ಮೋದಿ ಅವರು ಪಂಜಾಬ್‌ಗೆ ತೆರಳಿದ್ದಾಗ ಭದ್ರತಾ ವೈಫಲ್ಯ ಉಂಟಾದ ಕಾರಣ ಗುರುಬಿಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.
ಗುರುಬಿಂದರ್ ಸಿಂಗ್ ಅವರನ್ನು ನರೇಂದ್ರ ಮೋದಿ ಭೇಟಿ ವೇಳೆ ಅವರ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಇದೇ ವೇಳೆ ಭದ್ರತಾ ಲೋಪವುಂಟಾದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. “ನರೇಂದ್ರ ಮೋದಿ ಅವರ ಭೇಟಿ ವೇಳೆ ಗುರುಬಿಂದರ್ ಸಿಂಗ್ ಅವರು ದಕ್ಷವಾಗಿ ಕಾರ್ಯನಿರ್ವಹಿಸಿಲ್ಲ. ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂಬುದಾಗಿ 2023ರ ಅಕ್ಟೋಬರ್ 18ರಂದು ಡಿಜಿಪಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಗುರುಬಿಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ” ಎಂದು ಪಂಜಾಬ್ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
Bathinda SP, Gurbinder Singh has been suspended in the case involving PM Narendra Modi's security lapse in the state on January 5, 2022. He has been accused of dereliction of duty: Punjab Home Ministry
— ANI (@ANI) November 25, 2023
ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಭಟಿಂಡಾದಿಂದ ಫಿರೋಜಪುರ್‌ಗೆ ಚುನಾವಣಾ ರಾಲಿಯಲ್ಲಿ ಪಾಲ್ಗೊಳ್ಳಲು ಮತ್ತು ನವದೆಹಲಿ -ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್ ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಹೊರಟಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜಪುರ್‌ಗೆ ರಸ್ತೆ ಮಾರ್ಗದ ಮೂಲಕ ಹೊರಟ್ಟಿದ್ದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಸಿಬ್ಬಂದಿ ಇದ್ದ ವಾಹನಗಳನ್ನು ದಾರಿ ಮಧ್ಯೆ ತಡೆದಿದ್ದರು. ಇದರಿಂದಾಗಿ ಪ್ರಧಾನಿ ದಾರಿ ಮಧ್ಯೆಯೇ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಉಳಿಯಬೇಕಾಯಿತು.
ಇದನ್ನೂ ಓದಿ: Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ
ಪ್ರತಿಕೂಲ ಹವಾಮಾನ ಪರಿಣಾಮದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಫಿರೋಜ್‌ಪುರಗೆ ತೆರಳಲು ಸಾಧ್ಯವಾಗಿರಲಿಲ್ಲ. ಪ್ರಧಾನಿಯ ಪಂಜಾಬ್ ಪ್ರವಾಸದ ವೇಳೆ ಭಾರಿ ಭದ್ರತಾ ವೈಫಲ್ಯ ಸಂಭವಿಸಿತು. ಇದರಿಂದಾಗಿ ಪ್ರಧಾನಿ ಬೆಂಗಾವಲು ಪಡೆಯು ಫಿರೋಜ್‌ಪುರ ಪ್ರವಾಸವನ್ನು ರದ್ದು ಮಾಡಿ, ವಾಪಸ್ ಬರುವ ಬಗ್ಗೆ ನಿರ್ಧರಿಸಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು. ಇದಾದ ಬಳಿಕ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು. ರಾಜಕೀಯ ಮೇಲಾಟಕ್ಕೂ ಇದು ಕಾರಣವಾಗಿತ್ತು.
ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ