ನವದೆಹಲಿ: ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ದರವನ್ನು ಕಡಿಮೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ(Cabinet Decision). ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬಹುಪಾಲು ಹೊಸ ಬೆಲೆ ಕಾರ್ಯವಿಧಾನ(APM) ಜಾರಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಭಾರತದ ಕಚ್ಚಾ ತೈಲದ ಮಾಸಿಕ ಸರಾಸರಿ ಆಮದು ಬೆಲೆಯ ಶೇ.10ರಷ್ಟು ಪ್ರತಿ ಯೂನಿಟ್‌ಗೆ 4 ಡಾಲರ್ ಇದ್ದು, ಮತ್ತು ಅದನ್ನು 6.5 ಡಾಲರ್‌ಗೆ ಮಿತಿಗೊಳಿಸಲಾಗಿದೆ. ಈ ಕ್ರಮವು ಅಡುಗೆಮನೆಗಳಿಗೆ ಸರಬರಾಜು ಮಾಡುವ ಪೈಪ್ಡ್ ನೈಸರ್ಗಿಕ ಅನಿಲ ಮತ್ತು ವಾಹನಗಳಿಗೆ ಪೂರೈಸಲಾಗುವ ಕಂಪ್ರೆಸ್ಡ್ ನೈಸರ್ಗಿಕ ಅನಿಲ ವೆಚ್ಚದಲ್ಲಿ ಶೇ.11ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಶನಿವಾರದಿಂದ ಈ ಹೊಸ ದರ ಚಾಲ್ತಿಗೆ ಬರಲಿದೆ(CNG PNG Price).
ಸಚಿವ ಸಂಪುಟದ ನಿರ್ಣಯದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ಬಿಜೆಪಿಯ ಸಂಸ್ಥಾಪನಾ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು, ಪಿಎನ್‌ಜಿ ಮತ್ತು ಸಿಎನ್‌ಜಿ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಕೋಟ್ಯಂತರ ಭಾರತೀಯರಿಗೆ ಗಿಫ್ಟ್ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅಡುಗೆ, ಕೈಗಾರಿಕಾ ಮತ್ತು ರೈತರಿಗೆ ಸೇರಿ ಎಲ್ಲರಿಗೂ ಲಾಭವಾಗಲಿದೆ ಎಂದು ಅವರು ತಿಳಿಸಿದರು.
ಎಪಿಎಂ (administered price mechanism) ಗ್ಯಾಸ್‌ನಲ್ಲಿನ ಬೆಲೆ ಕಡಿತದ ತಾತ್ಕಾಲಿಕ ಪರಿಣಾಮವು ಪಿಎನ್‌ಜಿ ಮತ್ತು ಸಿಎನ್‌ಜಿ ಗ್ರಾಹಕರಿಗೆ ನೆರವು ಒದಗಿಸುತ್ತದೆ. ಪುಣೆಯಲ್ಲಿ ಸಿಎನ್‌ಜಿ ಪ್ರತಿ ಕೆ.ಜಿಗೆ 92 ರೂ. ಇದ್ದರೆ, ಅದು 87 ರೂ.ಗೆ ಇಳಿಕೆಯಾಗಲಿದೆ. ಅದೇ ರೀತಿ ಪಿಎನ್‌ಜಿಗೆ 57 ರೂ. ಇದ್ದರೆ ಅದು 52ಕ್ಕೆ ಇಳಿಕೆಯಾಗಲಿದೆ. ಮುಂಬೈನಲ್ಲಿ 54 ರೂ. ಇದ್ದರೆ 52 ರೂ. ಆಗುತ್ತದೆ. ಹಾಗೆಯೇ, ದೆಹಲಿಯಲ್ಲಿ 53.49 ರೂ. ಇದ್ದದ್ದು 47.49 ರೂ. ಆಗಲಿದೆ. ಬೆಂಗಳೂರಿನಲ್ಲಿ ಇದು 58.5 ರಿಂದ 52 ರೂ.ಗೆ ಇಳಿಕೆಯಾಗಲಿದೆ ಎಂಬ ಅಂದಾಜು ಲಿಕ್ಕಾಚಾರವನ್ನು ಸಚಿವರು ಮಾಧ್ಯಮಗಳಿಗೆ ತಿಳಿಸಿದರು.
ಸ್ಪರ್ಧಾತ್ಮಕ ಬಿಡ್ಡಿಂಗ್ ಇಲ್ಲದೇ ನಾಮನಿರ್ದೇಶನದ ಆಧಾರದ ಮೇಲೆ ಬ್ಲಾಕ್‌ಗಳನ್ನು ಪಡೆದುಕೊಂಡಿರುವ ಸರ್ಕಾರ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ(ONGC) ಕಂಪನಿ ಹಾಗೂ ಆಯಿಲ್ ಇಂಡಿಯಾ ಲಿ.(OIL) ಕಂಪನಿಗಳಿಗೆ ಈ ಎಪಿಎಂ ಅನ್ವಯವಾಗಲಿದೆ ಎಂದು ಅವರು ತಿಳಿಸಿದರು.
ಆರ್ಥಿಕ ತಜ್ಞ ಕಿರೀಟ್ ಪಾರೀಖ್ ನೇತೃತ್ವದ ತಜ್ಞರ ಸಮಿತಿಯ ಶಿಫಾರಸಿನ ಅನುಸಾರ ಸಚಿವ ಸಂಪುಟ ಈ ನಿರ್ಧಾರವನ್ನು ಕೈಗೊಂಡಿದೆ. ಈ ಸಮಿತಿಯನ್ನು ತನ್ನ ವರದಿಯನ್ನು 2022ರ ನವೆಂಬರ್ 30ರಂದು ಸರ್ಕಾರಕ್ಕೆ ಸಲ್ಲಿಸಿತ್ತು.
ಇದನ್ನೂ ಓದಿ: LPG Price: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 92 ರೂ. ಇಳಿಕೆ
ಸರ್ಕಾರ ಜಾರಿಗೆ ತರುತ್ತಿರುವ ಹೊಸ ಸೂತ್ರವು ಗ್ರಾಹಕರು ಮತ್ತು ಉತ್ಪಾದಕರ ಹಿತಾಸಕ್ತಿಗಳ ನಡುವೆ ಸಮತೋಲನವನ್ನು ಉಂಟು ಮಾಡುತ್ತದೆ ಎಂದು ಠಾಕೂರ್ ಹೇಳಿದರು. ಭಾರತವು ಇಂಧನ ಆಮದನ್ನು ಹೆಚ್ಚು ಅವಲಂಬಿಸಿದೆ. ಇದು ಸಂಸ್ಕರಿಸುವ 85% ಕಚ್ಚಾ ತೈಲ ಮತ್ತು 55% ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ದೇಶೀಯ ಕ್ಷೇತ್ರಗಳಿಂದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೊಸ ಶೋಧ ಮಾಡಲು ತೈಲ ಮತ್ತು ಅನಿಲ ಉತ್ಪಾದಕರನ್ನು ಉತ್ತೇಜಿಸುವುದು ದೇಶದ ಹಿತಾಸಕ್ತಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.