ಬಿಹಾರ: ಇಬ್ಬರು ಮಹಿಳಾ ಪೊಲೀಸರು ವೃದ್ಧರೊಬ್ಬರಿಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಅಮಾನವೀಯ ದೃಶ್ಯವನ್ನು ಪತ್ರಕರ್ತ ಮುಕೇಶ್ ಸಿಂಗ್ ಎಂಬುವರು ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಘಟನೆ ನಡೆದಿದ್ದು ಯಾವಾಗ ಎಂಬುದಿನ್ನೂ ಖಚಿತವಾಗಿಲ್ಲ.
ಅಲ್ಲೊಂದು ಆಟೋ ನಿಂತಿದೆ. ಆಟೋ ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರಿಗೆ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳು ಹೊಡೆಯುತ್ತಿದ್ದಾರೆ. ಅವರ ಕಾಲುಗಳ ಮೇಲೆಲ್ಲ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಕೊನೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ಅಲ್ಲಿಯೇ ಬಿದ್ದಿದ್ದ ಸೈಕಲ್ನ್ನು ಕಾಲಿನಿಂದ ಒದೆಯುವುದೂ ವಿಡಿಯೊದಲ್ಲಿ ನೋಡಬಹುದು.
ಇನ್ನು ವಿಡಿಯೊ ಶೇರ್ ಮಾಡಿಕೊಂಡ ಮುಕೇಶ್ ಅವರು ‘ಈ ವಯಸ್ಸಾದ ವ್ಯಕ್ತಿ ಹೆಸರು ಪಾಂಡೆ ಜೀ.. ಬಿಹಾರದ ಕೈಮೂರ್ ಎಂಬಲ್ಲಿ ಖಾಸಗಿ ಶಾಲೆಯೊಂದರಲ್ಲಿ ಹಲವು ದಶಕಗಳಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸೈಕಲ್ನಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದರು. ಅದೇ ಅವರು ಮಾಡಿದ ತಪ್ಪಾಗಿ ಹೋಯಿತು. ಅಷ್ಟಕ್ಕೇ ಮಹಿಳಾ ಪೊಲೀಸರು ಹೀಗೆ ಥಳಿಸಿದ್ದಾರೆ. ಈ ವ್ಯಕ್ತಿ ಬಿದ್ದು ಹೋಗಿದ್ದು ಅವರ ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಬಿಹಾರ ಪೊಲೀಸರನ್ನು ಟ್ಯಾಗ್ ಮಾಡಿರುವ ಅವರು ‘ಹೀಗೆ 70 ವರ್ಷದ ವೃದ್ಧನನ್ನು, ಪ್ರಾಣಿಗಳಿಗೆ ಹೊಡೆದಂತೆ ಥಳಿಸುವುದು ಯಾವ ಸೀಮೆಯ ಶಿಸ್ತು? ಇವರೆಲ್ಲ ಯಾವ ಸ್ವರೂಪದ ಪೊಲೀಸರು? ಇದ್ಯಾವ ಸೀಮೆಯ ಉತ್ತಮ ಆಡಳಿತ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ವಿಡಿಯೊ ನೋಡಿದ ನೆಟ್ಟಿಗರೂ ಪೊಲೀಸ್ ಮಹಿಳಾ ಸಿಬ್ಬಂದಿ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿಡಿಯೊ ವೈರಲ್ ಆದ ಬೆನ್ನಲ್ಲೇ ಆ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Viral Video | ವೆಡ್ನಸ್‌ಡೇ ಹಾಡಿಗೆ ಬಾಲಕಿಯ ನೃತ್ಯ; ಇದು ನಿಜಕ್ಕೂ ಸೂಪರ್ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು