ಲಖನೌ: ಕಂಡ ಕಂಡದ್ದನ್ನೆಲ್ಲ ಕಡಿದು ಹಾಕುವ ಇಲಿ ಕಣ್ಣಿಗೆ ಬಿದ್ದರೆ ಬಡಿದು ಕೊಲ್ಲುವುದು (Rat Killer) ಮಾಮೂಲಿ. ಧೈರ್ಯ ಇಲ್ಲದಿದ್ದರೆ ಟ್ರ್ಯಾಪ್ ಗ್ಲೂ ಹಾಕಿ ಹಿಡಿದು ಕೊಲ್ಲುದಂತೂ ಪಕ್ಕಾ. ಯಾಕೆಂದರೆ ಹಾಗೆಯೇ ಬಿಟ್ಟರೆ ಮನೆಯಲ್ಲಿರುವ ಅಷ್ಟೂ ವಸ್ತುಗಳನ್ನು ನಿರ್ನಾಮ ಮಾಡುವುದು ಗ್ಯಾರಂಟಿ. ಹೀಗಾಗಿ ಇಲಿ ಹಿಡಿಯುವುದು ಅಥವಾ ಕೊಲ್ಲುವುದು ಮಹಾಪರಾಧ. ಆದರೆ, ಉತ್ತರ ಪ್ರದೇಶದ ಯುವಕನೊಬ್ಬ ಇಲಿಯನ್ನು ಕೊಂದು ಪೊಲೀಸ್ ಕೇಸ್ ಹಾಕಿಸಿಕೊಂಡಿದ್ದಾನೆ. ಪೊಲೀಸರು ಕೂಡ ಕೂಲಂಕಷ ತನಿಖೆ ನಡೆಸಿ 30 ಪುಟಗಳ ಜಾರ್ಚ್ಶೀಟ್ ಅನ್ನು ಕೋರ್ಟ್ಗೆ ಸಲ್ಲಿಸಿದ್ದಾರೆ. ಇನ್ನೀಗ ವಿಚಾರಣೆ ನಡೆಯಬೇಕು. ತೀರ್ಪು ಏನು ಬರುತ್ತದೋ ಕಾದು ನೋಡಬೇಕು. ಆದರೆ, ಯುವಕ ಕೇಸ್ ಹಾಕಿಸಿಕೊಂಡಿದ್ದು ಅಪರೂಪದ ಪ್ರಕರಣವೇ ಸರಿ.
ಕೇಸ್ ಹಾಕಿಸಿಕೊಂಡಿರುವ ಯುವಕನ ಹೆಸರು ಮನೋಜ್ ಕುಮಾರ್ ಶರ್ಮಾ. ಈತ ಯುವಕ ಕೇಸ್ ಹಾಕಿಸಿಕೊಂಡಿದ್ದು ಯಾಕೆ ಅಂಥ ಕೇಳಿದರೆ ಆಶ್ಚರ್ಯವಾಗುವುದು ಗ್ಯಾರಂಟಿ. ಆತ ಇಲಿ ಕೊಂದಿದ್ದು ತಪ್ಪು ಎನ್ನುವುದಕ್ಕಿಂತ ಆತ ಇಲಿ ಕೊಂದ ರೀತಿ ತಪ್ಪು ಎಂಬುದು ದೂರುದಾರರ ಆರೋಪ.
ಮನೋಜ್ ಕುಮಾರ್ ಇಲಿ ಹಿಡಿದು ಗೋಣಿ ಚೀಲದೊಳಗೆ ಹಾಕಿ ಬಡಿದು ಕೊಲ್ಲುವುದನ್ನು ಬಿಟ್ಟು ದಾರದಲ್ಲಿ ಅದರ ಬಾಲವನ್ನು ಕಟ್ಟಿ ಇಟ್ಟಿಗೆಯೊಂದಕ್ಕೆ ನೇತು ಹಾಕಿ ಚರಂಡಿಗೆ ಇಳಿ ಬಿಟ್ಟಿದ್ದ. ಇಲಿ ನೇತಾಡಿ ನೇತಾಡಿ ಕೊನೆ ಉಸಿರು ಬಿಟ್ಟಿತ್ತು. ಮನೋಜನ ಕೃತ್ಯ ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರಾಗಿರುವ ವಿಕೇಂದ್ರ ಶರ್ಮಾ ಅವರ ಕಣ್ಣಿಗೆ ಬಿದ್ದಿದೆ. ಓಡೋಡಿ ಹೋಗಿ ಪೊಲೀಸರ ಬಳಿ ಒಂದು ಕೊಲೆಯಾಗಿದೆ ಎಂದು ದೂರು ನೀಡಲು ಮುಂದಾಗಿದ್ದಾರೆ!. ಪೊಲೀಸರು ಯಾರ ಕೊಲೆ ಎಂದು ಕೇಳಿದಾಗ ಇಲಿಯದ್ದು ಎಂದಿದ್ದಾರೆ ವಿಕೇಂದ್ರ ಶರ್ಮಾ. ಇಲಿಯಲ್ವಾ ಹೋಗ್ಲಿ ಬಿಡಿ ಸ್ವಾಮಿ ಎಂದು ಪೊಲೀಸರು ಹೇಳಿದರೂ ಕೇಳದ ಅವರು, ಅವರ ದಾರಕ್ಕೆ ಬಾಲವನ್ನು ಕಟ್ಟಿ ಹಿಂಸೆ ಕೊಟ್ಟು ಕೊಂದಿದ್ದಾರೆ. ಅದಕ್ಕೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮೊದಲೇ ಪ್ರಾಣಿಗಳ ಹಕ್ಕುಗಳು ಹೋರಾಟಗಾರ. ಕೋರ್ಟ್ ಮೆಟ್ಟಿಲು ಹತ್ತಿದರೆ ಸಮಸ್ಯೆ ಎಂದುಕೊಂಡ ಕೇಸ್ ದಾಖಲಿಸಿದ್ದಾರೆ. ಬಳಿಕ ಆರೋಪಿಯನ್ನು ಹಿಡಿಯಲು ಮುಂದಾದಾಗ ಆತ ನಿರೀಕ್ಷಣಾ ಜಾಮೀನು ಪಡೆದುಕೊಂಡು ಬಚಾವಾಗಿದ್ದಾನೆ.
ಪೋಸ್ಟ್ ಮಾರ್ಟಮ್ ರಿಪೋರ್ಟ್!
ಒಂದು ಬಾರಿ ಎಫ್ಐಆರ್ ಆದ ಮೇಲೆ ಕಾನೂನು ಪ್ರಕ್ರಿಯೆಗಳು ನಡೆಯಲೇಬೇಕು. ಪೊಲೀಸರು ಬರೇಲಿಯ ಇಲಿಯ ಡೆಡ್ ಬಾಡಿಯನ್ನು ತೆಗೆದುಕೊಂಡು ಇಂಡಿಯನ್ ವೆಟರ್ನರಿ ರೀಸರ್ಚ್ ಇನ್ಸ್ಟಿಟ್ಯೂಟ್ಗೆ ತೆಗೆದುಕೊಂಡು ಹೋಗಿ ಪೋಸ್ಟ್ ಮಾರ್ಟಮ್ ಮಾಡಿಸಿದ್ದಾರೆ. ಇಲಿ ಸತ್ತಿರುವುದು ಉಸಿರುಗಟ್ಟಿ ಎಂಬುದು ವರದಿಯಲ್ಲಿ ಗೊತ್ತಾಗಿದೆ. ಜತೆಗೆ ಇಲಿಯ ಶ್ವಾಸಕೋಶ ಊದಿಕೊಂಡಿತ್ತು ಹಾಗೂ ಲಿವರ್ ಕೂಡ ಡ್ಯಾಮೇಜ್ ಆಗಿತ್ತು ಎಂಬುದಾಗಿ ವರದಿಯಲ್ಲಿದೆ.
ಇದೀಗ ಪೊಲೀಸರು 30 ಪುಟಗಳ ಚಾರ್ಜ್ ಶೀಟ್ ಸಿದ್ದಪಡಿಸಿದ್ದಾರೆ. ಮೊದಲು ಘಟನೆ ನಡೆದ ಸ್ಥಳವನ್ನ ಮಹಜರು ಮಾಡಿ ಕೃತ್ಯ ನಡೆಸಿದ್ದ ಹೇಗೆ ಎಂಬುದನ್ನು ಜಾರ್ಜ್ ಶೀಟ್ನಲ್ಲಿ ಸೇರಿಸಿದ್ದಾರೆ. ಬಳಿಕ ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ ಎಂಬುದನ್ನು ಬರೆದಿದ್ದಾರೆ. ಬದ್ವಾನ್ನ ಪೊಲೀಸ್ ವೃತ್ತ ನಿರೀಕ್ಷಕರಾಗಿರುವ ಅಲೋಕ್ ಮಿಶ್ರಾ ಅವರು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಐಪಿಸಿ ಸೆಕ್ಷನ್ 11 (ಕ್ರೌರ್ಯ ಮೆರೆಯುವುದು) ಹಾಗೂ ಸೆಕ್ಷನ್ 429 (ಪ್ರಾಣಿಗಳ ವಧೆ) ಅಡಿ ಮನೋಜ್ ಮೇಲೆ ಕೇಸ್ ಹಾಕಿದ್ದೇವೆ ಎಂದರು.
ಇದನ್ನೂ ಓದಿ : Parrot witness case: ಕೊಲೆಗಾರರ ಹೆಸರು ಹೇಳಿದ ಗಿಳಿ! ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಬದ್ವಾನ್ ಡಿಎಫ್ಓ ಕೂಡ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಲಿಗಳನ್ನು ಕೊಲ್ಲುವುದು ದೊಡ್ಡ ತಪ್ಪು ಅಲ್ಲ. ಆದರೆ, ಹಿಂಸಿಸಿ ಕೊಲ್ಲುವುದು ತಪ್ಪು ಎಂದಿದ್ದಾರೆ.
ಶಿಕ್ಷೆ ಏನಿರಬಹುದು?
ಒಂದು ವೇಳೆ ಮನೋಜ್ ಕೋರ್ಟ್ನಲ್ಲಿ ಅಪರಾಧಿ ಎಂದು ಸಾಬೀತಾದರೆ ಆತನಿಗೆ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ಆಗಬಹುದು. ಅಥವಾ ರೂಪಾಯಿ 10ರಿಂದ 2000 ತನಕ ದಂಡ ವಿಧಿಸಬಹುದು. ಅಥವಾ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸಬಹುದು.