ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿ 10ನೇ ತರಗತಿ ಹುಡುಗಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಗೀಡಾಗಿದ್ದಾಳೆ. ಈ ಪ್ರಕರಣವೀಗ ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ನಾಂದಿಯಾಗಿದೆ. ಬಾಲಕಿಯ ಮೃತದೇಹವನ್ನು ಪೊಲೀಸರು ಸಂವೇದನಾಶೀಲರಹಿತರಂತೆ ಹಿಡಿದುಕೊಂಡು ರಸ್ತೆ ಮೇಲೆ ಓಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ಇದು ಟೀಕೆಗೆ ಗುರಿಯಾಗಿದೆ.
10ನೇ ತರಗತಿ ವಿದ್ಯಾರ್ಥಿ ಗುರುವಾರ ಸಂಜೆ ಟ್ಯೂಷನ್ಗೆಂದು ಹೋದವಳು ವಾಪಸ್ ಮನೆಗೆ ಬಂದಿರಲಿಲ್ಲ. ಮೊದಲು ಕುಟುಂಬದವರೇ ಹುಡುಕಿದರು. ಆದರೆ ಆಕೆ ಸಿಗದೆ ಇದ್ದಾಗ ಶುಕ್ರವಾರ ಬೆಳಗ್ಗೆ ಪೊಲೀಸರಿಗೆ ದೂರು ನೀಡಿದರು. ಆದರೆ ಪೊಲೀಸರಿಗೂ ಅವಳು ಪತ್ತೆಯಾಗಲಿಲ್ಲ. ಭಾನುವಾರ ಬೆಳಗ್ಗೆ ಒಂದು ಕಾಲುವೆಯಲ್ಲಿ ಸ್ಥಳೀಯರಿಗೇ ಹುಡುಗಿಯ ದೇಹ ಸಿಕ್ಕಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿಗೆ ಸ್ಥಳೀಯರು ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ. ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ. ಆರೋಪಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ರಸ್ತೆ ತಡೆ ಮಾಡಿ, ಟೈಯರ್ಗಳನ್ನು ಸುಟ್ಟು ಹಿಂಸಾತ್ಮಕವಾಗಿಯೇ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ವೈರಲ್ ವಿಡಿಯೊ
ಇನ್ನು ಸ್ಥಳೀಯರ ಪ್ರತಿಭಟನೆ, ಗಲಾಟೆ ಮಧ್ಯೆ ಪೊಲೀಸರು ಮಾಡಿದ ಕೆಲಸವೊಂದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯ ಮೃತದೇಹವನ್ನು ಇಬ್ಬರು ಪೊಲೀಸರು ಎರಡೂ ಕಡೆ ಹಿಡಿದುಕೊಂಡು ರಸ್ತೆ ಮೇಲೆ ಓಡಿದ್ದಾರೆ. ಕಲ್ಲುತೂರಾಟ ಮಾಡುತ್ತಿರುವ ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರು ಹೀಗೆ ಮಾಡಿದ್ದರೂ ಆ ಶವವನ್ನು ಅಷ್ಟು ಅಸೂಕ್ಷ್ಮವಾಗಿ ಹಿಡಿದುಕೊಂಡು ಓಡಬಾರದಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರು ಶವವನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ಆಕೆಯ ದೇಹದ ಮೈಮೇಲೆ ಇದ್ದ ಬಟ್ಟೆಯೆಲ್ಲ ಕೆಳಗೆ ಬಿದ್ದಿದೆ. ಅದನ್ನು ಇನ್ನೊಬ್ಬ ಪೊಲೀಸ್ ಅಧಿಕಾರಿ ತೆಗೆದು, ಮತ್ತೆ ಅವಳ ಮೈಮೇಲೆ ಹಾಕುವ ಪ್ರಯತ್ನ ಮಾಡಿದ್ದನ್ನೂ ವಿಡಿಯೊದಲ್ಲಿ ನೋಡಬಹುದು.
ವಿಡಿಯೊ ವೈರಲ್ ಆಗುತ್ತಿದ್ದಂತೆ ಪಶ್ಚಿಮ ಬಂಗಾಳದ ಪ್ರತಿಪಕ್ಷ ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ. ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ, ಅಮಿತ್ ಮಾಳವಿಯಾ ಮತ್ತಿತರರು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಟ್ವೀಟ್ ಮಾಡಿರುವ ಅಮಿತ್ ಮಾಳವಿಯಾ ‘ದಿನಾಜ್ಪುರದ ಕಾಳಿಯಾಗಂಜ್ ಏರಿಯಾದ ರಾಜ್ಬೊಂಗಾಂಶಿ ಸಮುದಾಯಕ್ಕೆ ಸೇರಿದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವಾಗಿ, ಆಕೆಯನ್ನು ಹತ್ಯೆ ಮಾಡಲಾಗಿದೆ. ಆದರೆ ಅವಳ ಶವವನ್ನು ಪೊಲೀಸರು ಅತ್ಯಂತ ಕೆಟ್ಟದಾಗಿ ಹಿಡಿದುಕೊಂಡು ಓಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರಾದ ಸತ್ಯೇಂದ್ರ ನಾಥ್ ರಾಯ್ (ಶಾಸಕ) ಮತ್ತು ಬುಧಾರಿ ಟುಡು ಅವರು ಸಂತ್ರಸ್ತೆಯ ಮನೆಗೆ ಭೇಟಿ ಕೊಡಲು ಮುಂದಾದರೂ ಕೂಡ ಅವರನ್ನು ತಡೆಯಲಾಗಿದೆ. ಅದೇ ಟಿಎಂಸಿಯ ಉತ್ತರ ದಿನಾಜ್ಪುರ ಅಧ್ಯಕ್ಷ ಕನ್ನಯ್ಯಾ ಲಾಲ್ ಅಗರ್ವಾಲ್ ಅವರು ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟಿದ್ದಾರೆ, ಇಲ್ಲಿ ಯಾರು? ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.
ಪೊಲೀಸರು ಹೇಳೋದೇನು?
ಇನ್ನೊಂದೆಡೆ ಪೊಲೀಸರು, ತಾವು ಆರೋಪಿಗಳನ್ನು ಬಂಧಿಸಿದ್ದೇವೆ. ಅವರ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹುಡಗಿಯ ಮೈಮೇಲೆ ಯಾವುದೇ ಗಾಯದ ಗುರುತುಗಳೂ ಇಲ್ಲ. ಶವದ ಜತೆ ವಿಷದ ಬಾಟಲಿಯೂ ಸಿಕ್ಕಿತ್ತು. ಆಕೆಯ ಶವಪರೀಕ್ಷೆ ನಡೆಯುತ್ತಿದೆ. ವರದಿ ಬಂದ ಬಳಿಕವೇ ಸಂಪೂರ್ಣ ಸತ್ಯ ಹೊರಬರಲಿದೆ ಎಂದು ಹೇಳಿಕೊಂಡಿದ್ದಾರೆ.