ಕೋಲ್ಕತ್ತ: ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿತಪ್ಪಿ, ಅಳುತ್ತ ನಿಂತಿದ್ದ ಬಾಲಕಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಿಸಿದ್ದಾರೆ. ಹೀಗೊಂದು ಮನಮಿಡಿಯುವ ಘಟನೆ ನಡೆದಿದ್ದು ಕೋಲ್ಕತ್ತದಲ್ಲಿ. ಆ ಬಾಲಕಿ ಯಾಕೆ ಒಬ್ಬಂಟಿಯಾಗಿ ಬಂದು ದಾರಿ ತಪ್ಪಿಕೊಂಡಿದ್ದಳು? ಪೊಲೀಸ್ ಅಧಿಕಾರಿ (Kolkata Police Officer) ಅವಳಿಗೆ ಸಹಾಯ ಮಾಡಿದ್ದು ಹೇಗೆ? ಎಂಬ ಬಗ್ಗೆ ಕೋಲ್ಕತ್ತ ಪೊಲೀಸರು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಓದಿದ ಮೇಲೆ ಅದೆಷ್ಟೋ ಜನರು, ಪೊಲೀಸ್ ಅಧಿಕಾರಿಯನ್ನು ಶ್ಲಾಘಿಸಿದ್ದಾರೆ.
ಹೌರಾಹ್ ಸೇತುವೆ ಟ್ರಾಫಿಕ್ ಗಾರ್ಡ್ ಆಗಿರುವ, ಪೊಲೀಸ್ ಅಧಿಕಾರಿ ಸೌವಿಕ್ ಚಕ್ರವರ್ತಿ ಅವರು ರಾಜಾ ಕತ್ರಾ ಬಳಿ ಎಂದಿನಂತೆ ಗಸ್ತು ಕರ್ತವ್ಯದಲ್ಲಿ ಇದ್ದರು. ಆಗ ಅಲ್ಲೊಬ್ಬಳು ಶಾಲಾ ಬಾಲಕಿ ಅಳುತ್ತ ನಿಂತಿರುವುದನ್ನು ನೋಡಿದ್ದಾರೆ. ಆಕೆ ಶಾಲಾ ಸಮವಸ್ತ್ರ ತೊಟ್ಟು, ಹೆಗಲಿಗೆ ಬ್ಯಾಗ್ ಹಾಕಿದ್ದಳು. ಕೇಳಿದ್ದಕ್ಕೆ, ನಾನು ನನ್ನ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. ಹತ್ತಿರದ ಸಂಬಂಧಿಯೊಬ್ಬರು ತೀರಿಕೊಂಡಿದ್ದರಿಂದ ಮನೆಯವರೆಲ್ಲ ಅವರ ಅಂತ್ಯಸಂಸ್ಕಾರಕ್ಕೆ ಹೋಗಬೇಕಾಯಿತು. ನಾನು ಒಬ್ಬಳೇ ಬಂದೆ. ಆದರೆ ದಾರಿ ತಪ್ಪಿ ಹೋಯಿತು. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ, ಒಳಗೆ ಸೇರಿಸುವುದಿಲ್ಲ’ ಎಂದು ಬಾಲಕಿ ಅಳಲು ಪ್ರಾರಂಭಿಸಿದಳು.
ಇದನ್ನೂ ಓದಿ: Viral Video : ಅಳುತ್ತಲೇ ವರದಿ ಮಾಡಿದ ಪತ್ರಕರ್ತೆ; ಕ್ಷಮಿಸಿ ಬಿಡಿ ಎಂದು ಕೇಳಿಕೊಂಡ ವಿಡಿಯೊ ವೈರಲ್
ಆ ಸನ್ನಿವೇಶವನ್ನು ಅರ್ಥ ಮಾಡಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಚಕ್ರವರ್ತಿ, ‘ಬಾಲಕಿಯನ್ನು ತಮ್ಮ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡರು. ಆಕೆಯ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದ ಮಾರ್ಗವನ್ನು ಝೀರೋ ಟ್ರಾಫಿಕ್ ಮಾಡುವಂತೆ ಟ್ರಾಫಿಕ್ ಕಂಟ್ರೋಲ್ ರೂಮಿಗೆ ಸೂಚಿಸಿದರು. ಬಾಲಕಿಯ ಪರೀಕ್ಷಾ ಕೇಂದ್ರ ಇದ್ದಿದ್ದು ಶ್ಯಾಮ್ಬಜಾರ್ ಬಳಿಕ ಆದರ್ಶ ಶಿಕ್ಷಾ ನಿಕೇತನ್ನಲ್ಲಿ ಆಗಿತ್ತು. ಅಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಬಾಲಕಿ ಹೋಗುವಷ್ಟರಲ್ಲಿ ಆಗಷ್ಟೇ ಪರೀಕ್ಷಾ ಕೇಂದ್ರದ ಬಾಗಿಲು ತೆರೆಯುತ್ತಿತ್ತು. ಅನೇಕ ವಿದ್ಯಾರ್ಥಿಗಳು ಅಲ್ಲಿಗೆ ಬಂದಿದ್ದರು. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿದ ಬಾಲಕಿಯ ಮುಖದಲ್ಲಿ ನಗು ಅರಳಿತ್ತು. ಕೋಲ್ಕತ್ತ ಪೊಲೀಸರು ಹಾಕಿರುವ ಪೋಸ್ಟ್ಗೆ 57 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಪೊಲೀಸ್ ಅಧಿಕಾರಿ ಬಾಲಕಿಗೆ ಸಹಾಯ ಮಾಡಿದ ರೀತಿಯನ್ನು ಅನೇಕರು ಶ್ಲಾಘಿಸಿದ್ದಾರೆ. ಇವರು ನಿಜವಾದ ರಕ್ಷಕರು ಎಂದು ಹೇಳಿದ್ದಾರೆ.