Site icon Vistara News

Viral Video | ಉತ್ತರ ಪ್ರದೇಶದ ಈ ಪೊಲೀಸ್​ ಅಧಿಕಾರಿಗೆ ಬಂದೂಕಿಗೆ ಗುಂಡು ತುಂಬುವುದೇ ಗೊತ್ತಿಲ್ಲ!; ನಳಿಕೆಯಿಂದ ಬಿತ್ತು ಬುಲೆಟ್​

policeman fails to load rifle In UttarPradesh

ಲಖನೌ: ಉತ್ತರ ಪ್ರದೇಶ ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್​​ವೊಬ್ಬರು ತಮ್ಮ ರೈಫಲ್​ ಲೋಡ್​​ (ಬಂದೂಕಿಗೆ ಗುಂಡು ತುಂಬುವುದು) ಮಾಡಲು ಬರದೆ ಹಿರಿಯ ಅಧಿಕಾರಿಗಳ ಎದುರು ಮುಜುಗರಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲ, ವಿಡಿಯೊ ನೋಡಿದ ನೆಟ್ಟಿಗರೂ ನಗಾಡುತ್ತಿದ್ದಾರೆ. ಬಂದೂಕಿಗೆ ಗುಂಡು ಹಾಕಲು ಗೊತ್ತಿಲ್ಲದೆ ಇರುವ ಪೊಲೀಸರೆಲ್ಲ ಇರುವುದು ಯೋಗಿ ಆದಿತ್ಯನಾಥ್​ ಸರ್ಕಾರಕ್ಕೇ ಅವಮಾನ ಎಂದೂ ಹೇಳಿದ್ದಾರೆ.

ಉತ್ತರ ಪ್ರದೇಶದ ಖಲೀಲಾಬಾದ್‌ ಪೊಲೀಸ್​ ಸ್ಟೇಶನ್​​ಗೆ ಬಸ್ತಿ ರೇಂಜ್​​ನ ಇನ್ಸ್​​ಪೆಕ್ಟರ್ ಜನರಲ್​ ಆಫ್​ ಪೊಲೀಸ್​ (ಐಜಿ) ಆರ್​.ಕೆ.ಭಾರದ್ವಾಜ್​ ಅವರು ಅನಿರೀಕ್ಷಿತವಾಗಿ ಭೇಟಿ ಕೊಟ್ಟಿದ್ದರು. ಇಡೀ ಸ್ಟೇಶನ್​​ ಪರಿಶೀಲನೆ ಮಾಡಿದ ಅವರು, ಅಲ್ಲಿರುವ ಸಿಬ್ಬಂದಿಯ ಕೌಶಲ ಪರೀಕ್ಷೆಗೂ ಮುಂದಾದರು. ಒಬ್ಬೊಬ್ಬರನ್ನೇ ಕರೆದು ಹಲವು ಪ್ರಶ್ನೆ ಕೇಳಿದರು. ಹಾಗೇ, ಶಸ್ತ್ರಪ್ರಯೋಗ, ನಿರ್ವಹಣೆ ಬಗ್ಗೆ ಅವರಿಗೆಷ್ಟು ಅನುಭವ ಇದೆ ಎಂಬುದನ್ನೂ ಚೆಕ್​ ಮಾಡಿದರು. ಆ ಠಾಣೆಯ ಸಬ್​​ ಇನ್ಸ್​​ಪೆಕ್ಟರ್​​ವೊಬ್ಬರನ್ನು ಕರೆದು, ಬಂದೂಕಿಗೆ ಗುಂಡು ತುಂಬುವಂತೆ ಹೇಳಿದರು. ಆದರೆ ಆ ಪೊಲೀಸ್​ ಕ್ಷಣಕಾಲ ಹಾಗೇ ನಿಂತು ಬಂದೂಕಿನ ನಳಿಕೆಯೊಳಕ್ಕೆ ಗುಂಡು ಹಾಕಿದ್ದಾರೆ. ಆದರೆ ಅವರು ಕೈಯಲ್ಲಿ ಹಿಡಿದ ಗನ್​ಗೆ ಗುಂಡನ್ನು ಲೋಡ್​ ಮಾಡುವ ಕ್ರಮ ಅದಲ್ಲ. ಆ ನಳಿಕೆಯಲ್ಲಿ ಹಾಕಿದ ಗುಂಡು ಕೆಳಗೆ ಬೀಳುತ್ತದೆ ಎಂಬ ಅರಿವೂ ಆ ಪೊಲೀಸ್​​ಗೆ ಇಲ್ಲದೆ ಹೋಯಿತು. ಅದನ್ನು ನೋಡಿ, ಐಜಿ ಸೇರಿ ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೆಲ್ಲ ನಕ್ಕಿದ್ದಾರೆ.

ಈ ವಿಡಿಯೊವನ್ನು ಸಮಾಜವಾದಿ ಪಕ್ಷ ಶೇರ್​ ಮಾಡಿಕೊಂಡು ವ್ಯಂಗ್ಯ ಮಾಡಿದೆ. ‘ಯೋಗಿ ಜೀ ಸರ್ಕಾರದ ಪೊಲೀಸರಿಗೆ ರೈಫಲ್​ ಲೋಡ್​ ಮಾಡುವುದೂ ಗೊತ್ತಿಲ್ಲ. ಅವರು ನಳಿಕೆಯೊಳಗೆ ಗುಂಡು ಹಾಕುತ್ತಿದ್ದಾರೆ. ಅಜ್ಞಾನದ ಪರಮಾವಧಿ ಇದು. ರೈಫಲ್​ ಲೋಡ್ ಮಾಡುವುದು ಗೊತ್ತಿಲ್ಲದ ಪೊಲೀಸರು ರಾಜ್ಯದಲ್ಲಿ ಬಡವರು, ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಎಸ್​​ಐಗೆ ನಾಚಿಕೆಯಾಗಬೇಕು’ ಎಂದು ಕ್ಯಾಪ್ಷನ್​ ಬರೆದಿದೆ.

ಐಜಿ ಆರ್​.ಕೆ.ಭಾರದ್ವಾಜ್ ಅವರು ಖಲೀಲಾಬಾದ್​ ಸೇರಿ ಹಲವು ಪೊಲೀಸ್ ಠಾಣೆಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬರೀ ಈ ಪೊಲೀಸ್ ಅಧಿಕಾರಿಯೊಬ್ಬರಿಗೆ ಅಷ್ಟೇ ಅಲ್ಲದೆ, ಇನ್ನೂ ಹಲವರು ಐಜಿ ಕೊಟ್ಟ ಟಾಸ್ಕ್​ ಪೂರೈಸುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ. ಕೆಲವರಿಗೆ ಅಶ್ರುವಾಯು ಪ್ರಯೋಗ ಮಾಡಲು ಬಾರದೆ ಮುಜುಗರಕ್ಕೀಡಾಗಿದ್ದಾರೆ. ಇದನ್ನೆಲ್ಲ ನೋಡಿದ ಐಜಿ, ‘ಪೊಲೀಸ್ ಸಿಬ್ಬಂದಿ ಕೂಡಲೇ ತರಬೇತಿ ಪಡೆಯಬೇಕು. ಯಾವುದೇ ತುರ್ತು ಸನ್ನಿವೇಶ ಎದುರಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಖಡಕ್​ ಆಗಿ ಹೇಳಿದ್ದಾರೆ.

ಇದನ್ನೂ ಓದಿ: Viral Video | ನಟ ಸಲ್ಮಾನ್​ ಖಾನ್​ ಅಭಿಮಾನಿಗಳ ಮೇಲೆ ಪೊಲೀಸ್ ಲಾಠಿಚಾರ್ಜ್​​; ಎದ್ದುಬಿದ್ದು, ಚಪ್ಪಲಿ ಬಿಟ್ಟು ಓಡಿದ ಜನ

Exit mobile version