Site icon Vistara News

ಇವರಲ್ಲಿ ಯಾರಾಗ್ತಾರೆ ಭಾರತದ ಮುಂದಿನ ರಾಷ್ಟ್ರಪತಿ?; ಎನ್‌ಡಿಎ ಒಕ್ಕೂಟದ ಒಲವು ಯಾರತ್ತ?

President Of India

ನವದೆಹಲಿ: ಭಾರತದ ರಾಷ್ಟ್ರಪತಿ ಹುದ್ದೆಗೆ ಚುನಾವಣಾ ದಿನಾಂಕ (President Election 2022) ಘೋಷಣೆಯಾಗಿದೆ. ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ಕ್ಕೆ ಫಲಿತಾಂಶವೂ ಹೊರಬೀಳಲಿದೆ ಮತ್ತು ಮುಂದಿನ ರಾಷ್ಟ್ರಪತಿ ಯಾರೆಂಬುದು ಅಧಿಕೃತವಾಗಿ ಘೋಷಣೆಯಾಗಲಿದೆ. ದೇಶದ ಅತ್ಯುನ್ನತ, ಪ್ರತಿಷ್ಠಿತ ರಾಷ್ಟ್ರಪತಿ ಹುದ್ದೆ ಚುನಾವಣೆಯಲ್ಲಿ ಈ ಬಾರಿ‌ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂಬ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ. ಹಾಗಿದ್ದಾಗ್ಯೂ ಪ್ರತಿಪಕ್ಷಗಳೆಲ್ಲ ಜಂಟಿಯಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಸರತ್ತೂ ತೆರೆಮರೆಯಲ್ಲಿ ನಡೆದಿದೆ. ಆದರೆ ಅತ್ಯಂತ ಕುತೂಹಲ ಹುಟ್ಟಿಸಿ, ಚರ್ಚೆಯಲ್ಲಿರುವುದು, ʼಈ ಸಲ ಎನ್‌ಡಿಎ ಒಕ್ಕೂಟ ಯಾರಿಗೆ ಮಣೆ ಹಾಕಬಹುದು? ಪ್ರಧಾನಿ ಮೋದಿ ಒಲವು ಯಾರ ಕಡೆಗಿದೆ? ರಾಷ್ಟ್ರಪತಿ ಹುದ್ದೆಯ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ..?ʼ ಎಂಬ ವಿಷಯಗಳು. ಅದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳು ಇವು..

ಶರದ್‌ ಪವಾರ್‌
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಎಂಬುದೊಂದು ಸುದ್ದಿ ಕಳೆದ ವರ್ಷದಿಂದ ಹರಡುತ್ತಿದೆ. ತಾವು ರಾಷ್ಟ್ರಪತಿ ಚುನಾವಣೆಗೂ ಸ್ಪರ್ಧಿಸುವುದಿಲ್ಲ, 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯೂ ಅಲ್ಲ ಎಂದು ಅವರು ಹೇಳಿಕೊಂಡಿದ್ದರೂ ರಾಜಕೀಯ ವಿಶ್ಲೇಷಕರ ಅಭಿಪ್ರಾಯ ತುಸು ಬೇರೆ ಇದೆ. ʼಶರದ್‌ ಪವಾರ್‌ ಮತ್ತು ಪ್ರಧಾನಿ ಮೋದಿ ಮಧ್ಯೆ ರಾಜಕೀಯ ಸಿದ್ಧಾಂತ ವೈರುದ್ಧ್ಯವನ್ನೂ ಮೀರಿದ ಸ್ನೇಹವಿದೆ. ಮೋದಿಯವರ ಪಕ್ಕದಲ್ಲೇ ಕುಳಿತು ನೇರವಾಗಿ ಮಾತನಾಡುವಷ್ಟು ಸಲುಗೆ ಪವಾರ್‌ಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ ಮಾಡಿಕೊಂಡ ಮೇಲೆ ಉಳಿದೆರಡು ಪಕ್ಷಗಳ ನಾಯಕರು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದಷ್ಟು ಶರದ್‌ ಪವಾರ್‌ ಮಾತನಾಡಿಲ್ಲ. ಇನ್ನೊಂದೆಡೆ ಬಿಜೆಪಿ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದೆ. ಹಾಗೆ ಮಾಡಬೇಕು ಎಂದರೆ ಶರದ್‌ ಪವಾರ್‌ರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸುವ ಮೂಲಕ ಮಹಾ ವಿಕಾಸ್‌ ಅಘಾಡಿ ಮೈತ್ರಿಯನ್ನು ಒಡೆಯಬೇಕು. ಶಿವಸೇನೆಯಿಂದ ಎನ್‌ಸಿಪಿಯನ್ನು ಬೇರ್ಪಡಿಸಬೇಕು. ಬಳಿಕ ಎನ್‌ಸಿಪಿಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು. ಈ ಕಾರಣಕ್ಕೆ ಶರದ್‌ ಪವಾರ್‌ ರಾಷ್ಟ್ರಪತಿಯಾದರೂ ಅಚ್ಚರಿಯಿಲ್ಲʼ ಎಂಬುದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ.

ಮಾಯಾವತಿ
ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಹೀಗೊಂದು ವಿಚಾರ ಮುನ್ನೆಲೆಗೆ ಬಂದಿತ್ತು. ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ, ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದ, ದಲಿತ ನಾಯಕಿ ಮಾಯಾವತಿಯವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ನೇಮಕ ಮಾಡಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಅದೇ ಕಾರಣಕ್ಕೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಮಾಯಾವತಿಯವರು ಬಿಜೆಪಿಗೆ ಅನುಕೂಲವಾಗುವಂಥ ಸನ್ನಿವೇಶ ಸೃಷ್ಟಿಸಿಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಮಾಯಾವತಿ ಸ್ಪಷ್ಟನೆ ನೀಡಿ, ʼಬಿಜೆಪಿ ಸೇರಿ ಯಾವುದೇ ಪಕ್ಷದಿಂದ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯ ಆಫರ್‌ ಬಂದರೂ ನಿರಾಕರಿಸುತ್ತೇನೆ. ನನಗೆ ನನ್ನ ಪಕ್ಷ ಸಂಘಟನೆ ಮಾಡಬೇಕು. ಒಂದು ಸಲ ರಾಷ್ಟ್ರಪತಿ ಸ್ಥಾನಕ್ಕೆ ಹೋಗಿ ಕುಳಿತರೆ ನನ್ನ ಮತ್ತು ನನ್ನ ಪಕ್ಷದ ಭವಿಷ್ಯವೇ ಮುಗಿದಂತೆ ಎಂಬ ಸ್ಪಷ್ಟ ಅರಿವು ನನಗೆ ಇದೆʼ ಎಂದಿದ್ದರು. ಆದರೂ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಈ ಬಾರಿ ರಾಷ್ಟ್ರಪತಿ ಹುದ್ದೆಗೂ ಮಹಿಳೆಯನ್ನೇ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ. ಹಾಗೊಮ್ಮೆ ಆದರೆ ಮಾಯಾವತಿಯೇ ಮೊದಲ ಆಯ್ಕೆ ಎಂದೂ ಹೇಳಲಾಗುತ್ತಿದೆ.

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌
ಕಾಂಗ್ರೆಸ್‌ ಮಾಜಿ ನಾಯಕ, ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ಗೆ ರಾಷ್ಟ್ರಪತಿ ಹುದ್ದೆ ಭಾಗ್ಯ ಲಭಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 2017ರಿಂದ ಪಂಜಾಬ್‌ ಸಿಎಂ ಆಗಿದ್ದ ಅಮರಿಂದರ್‌ ಸಿಂಗ್‌ 2021ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಮೇಲೆ ಮುನಿಸಿಕೊಂಡು ರಾಜೀನಾಮೆ ಕೊಟ್ಟಿದ್ದರು. ಕಾಂಗ್ರೆಸ್‌ನಿಂದ ಹೊರಬಿದ್ದ ಬಳಿಕ ಪಂಜಾಬ್‌ ಲೋಕ್‌ ಕಾಂಗ್ರೆಸ್‌ ಪಕ್ಷ ರಚಿಸಿದ್ದಾರೆ. 2022 ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಇವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಈ ಮೂಲಕ ರಾಷ್ಟ್ರಪತಿ ಹುದ್ದೆಗೆ ತಾನು ಆಕಾಂಕ್ಷಿ ಎಂಬುದನ್ನು ಸೂಕ್ಷ್ಮವಾಗಿಯೇ ತಿಳಿಸಿದ್ದಾರೆ. ಅದರ ಹೊರತಾಗಿ ಬಿಜೆಪಿ ಪಂಜಾಬ್‌ನಲ್ಲಿ ಪ್ರಾಬಲ್ಯ ಸಾಧಿಸಲೂ ಅಮರಿಂದರ್‌ ಆಯ್ಕೆ ಸಹಾಯವಾಗಬಲ್ಲದು ಎಂಬ ವಿಮರ್ಶೆಯೂ ರಾಜಕೀಯ ವಲಯದಲ್ಲಿದೆ.

ದ್ರೌಪದಿ ಮುರ್ಮು
ಈ ಹೆಸರು ಅಷ್ಟೊಂದು ಚಿರಪರಿಚಿತ ಅನ್ನಿಸಲಿಕ್ಕಿಲ್ಲ. ಆದರೆ ರಾಷ್ಟ್ರಪತಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನಾಯಕಿ ಇವರು. 2015ರಿಂದ 2021ರವರೆಗೆ ಜಾರ್ಖಂಡ್‌ ರಾಜ್ಯಪಾಲೆಯಾಗಿದ್ದರು. ಬಿಜೆಪಿಯವರೇ ಆಗಿದ್ದ ಇವರು ಮೂಲತಃ ಒಡಿಶಾದ ರಾಜಕಾರಣಿ. ಬುಡಕಟ್ಟು ಜನಾಂಗದ ಪ್ರಬಲ ನಾಯಕಿ. 2024ರ ಲೋಕಸಭೆ ಚುನಾವಣೆಯಲ್ಲಿ ಬುಡಕಟ್ಟು ಜನಾಂಗದ ಮತ ಸೆಳೆಯುವ ಮುಂದಾಲೋಚನೆ ಇಟ್ಟುಕೊಂಡು ಎನ್‌ಡಿಎ ಒಕ್ಕೂಟ ಇವರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು. ಅಷ್ಟಲ್ಲದೆ, ಪ್ರಧಾನಿ ನರೇಂದ್ರ ಮೋದಿ ಸಹ ದ್ರೌಪದಿ ಮುರ್ಮು ಆಯ್ಕೆಗೆ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಕೂಡ ಮುರ್ಮು ರಾಷ್ಟ್ರಪತಿಯಾಗಲೆಂದು ಆಶಯ ವ್ಯಕ್ತಪಡಿಸುತ್ತಿದ್ದಾರಂತೆ.

ತಮಿಳಿಸೈ ಸೌಂದರರಾಜನ್‌
ತೆಲಂಗಾಣ ರಾಜ್ಯಪಾಲೆಯಾಗಿರುವ ತಮಿಳಿಸೈ ಸೌಂದರರಾಜನ್‌ ಮುಂದಿನ ರಾಷ್ಟ್ರಪತಿ? ಆದರೂ ಆಗಬಹುದು. ತಮಿಳುನಾಡಿನಲ್ಲಿ ಬಿಜೆಪಿಗೆ ಗಟ್ಟಿನೆಲೆಯಿಲ್ಲ. ಲೋಕಸಭೆ ಚುನಾವಣೆಯಿರಲಿ-ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಅಲ್ಪ. ಇಲ್ಲಿನ ಮತದಾರರನ್ನು ಅದರಲ್ಲೂ ಹಿಂದುಳಿದ ವರ್ಗದವರನ್ನು ಓಲೈಸಲು ಈ ಬಾರಿ ರಾಷ್ಟ್ರಪತಿ ಹುದ್ದೆಗೆ ತಮಿಳುನಾಡಿನಿಂದ ಯಾರನ್ನಾದರೂ ಆಯ್ಕೆ ಮಾಡಬೇಕು ಎಂದೂ ಬಿಜೆಪಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಹಾಗೊಮ್ಮೆ ತಮಿಳುನಾಡಿನಿಂದ ಆಯ್ಕೆಯಾದರೆ ತಮಿಳಿಸೈ ಸೌಂದರರಾಜನ್‌ ಅವರೇ ನಿಶ್ಚಿತವಾಗಿಯೂ ರಾಷ್ಟ್ರಪತಿಯಾಗುತ್ತಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಅರೀಫ್‌ ಮೊಹಮ್ಮದ್‌ ಖಾನ್‌ ಮತ್ತು ಮುಕ್ತಾರ್‌ ಅಬ್ಬಾಸ್‌ ನಖ್ವಿ
ಎನ್‌ಡಿಎ ಒಕ್ಕೂಟದಿಂದ ರಾಷ್ಟ್ರಪತಿ ಹುದ್ದೆಗೆ ಕೇಳಿಬರುತ್ತಿರುವ ಇನ್ನೆರಡು ಪ್ರಮುಖ ಹೆಸರುಗಳೆಂದರೆ ಕೇರಳ ರಾಜ್ಯಪಾಲ ಅರೀಫ್‌ ಮೊಹಮ್ಮದ್‌ ಖಾನ್‌, ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರದ್ದು. ಬಿಜೆಪಿ ಅಲ್ಪಸಂಖ್ಯಾತರಿಗೆ ಪ್ರಮುಖ ಹುದ್ದೆ ಕೊಡುವುದಿಲ್ಲ ಎಂಬ ಆಪಾದನೆ ಹೊತ್ತುಕೊಂಡಿದೆ. ಅದನ್ನು ಸುಳ್ಳು ಮಾಡಲು ಮತ್ತು ಇತರ ಕೆಲವು ಸೂಕ್ಷ್ಮ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇವರಿಬ್ಬರಲ್ಲಿ ಯಾರನ್ನಾದರೂ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿ ಕಳಿಸಬಹುದು.

ನಿತೀಶ್‌ ಕುಮಾರ್‌ ಮತ್ತು ಕೆ.ಚಂದ್ರಶೇಖರ್‌ ರಾವ್‌
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಚಂದ್ರ ಶೇಖರ್‌ ರಾವ್‌ ಕೂಡ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಗಳು ಎಂದು ಹೇಳಲಾಗುತ್ತಿದ್ದರೂ, ಇವರ ಹೆಸರು ಕೇಳಿಬರುತ್ತಿರುವುದು ಪ್ರತಿಪಕ್ಷಗಳ ಕಡೆಯಿಂದ. ನಿತೀಶ್‌ ಕುಮಾರ್‌ ಎನ್‌ಡಿಎ ಒಕ್ಕೂಟದವರೇ ಆಗಿದ್ದರೂ ಅವರನ್ನು ಮಮತಾ ಬ್ಯಾನರ್ಜಿ, ಉದ್ಧವ್‌ ಠಾಕ್ರೆ, ಎಂ.ಕೆ.ಸ್ಟಾಲಿನ್‌ ಮತ್ತು ಇತರ ಪ್ರಮುಖ ಪ್ರತಿಪಕ್ಷಗಳ ನಾಯಕರೆಲ್ಲ ಸೇರಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಲು ಮುಂದಾಗಿದ್ದರು. ಆದರೆ ನಿತೀಶ್‌ ಕುಮಾರ್‌, ನನಗೆ ರಾಷ್ಟ್ರಪತಿ ಹುದ್ದೆ ಬೇಡ, ನಾನದರ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಕೂಡ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯೆಂದೇ ಹೇಳಲಾಗುತ್ತಿದೆ. ಇವರಿಗೆ ಆಪ್‌, ತೃಣಮೂಲ ಕಾಂಗ್ರೆಸ್‌ ಮತ್ತಿತರ ಪಕ್ಷಗಳ ಬೆಂಬಲವಿದೆ. ಆದರೆ ಇನ್ನೊಂದು ಮಹತ್ವದ ಸಂಗತಿಯೆಂದರೆ ಕೆಸಿಆರ್‌ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಥರ್ಡ್‌ ಫ್ರಂಟ್‌ನ ಪ್ರಧಾನಿ ಅಭ್ಯರ್ಥಿಯಾಗಿಯೂ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ: ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, ಫಲಿತಾಂಶ 21ಕ್ಕೆ; ಚುನಾವಣಾ ಆಯೋಗ ಘೋಷಣೆ

Exit mobile version