ನವ ದೆಹಲಿ: ದೇಶದಲ್ಲಿ ವಂಶ ರಾಜಕಾರಣ(Political Dynasties)ಕ್ಕೆ ಕೇಡುಗಾಲ ಬಂದಿದೆಯಾ? -ಸದ್ಯದ ಪರಿಸ್ಥಿತಿ ನೋಡಿದೆ ಹೌದು ಎಂದು ಉತ್ತರಿಸಬಹುದು ಎನ್ನಿಸುತ್ತದೆ. ಒಮ್ಮೆ ಗಮನಿಸಿ, ದೆಹಲಿಯಲ್ಲಿ ಗಾಂಧಿ ಕುಟುಂಬ, ಉತ್ತರ ಪ್ರದೇಶದಲ್ಲಿ ಯಾದವ್ ವಂಶ, ಪಂಜಾಬ್‌ನ ಬಾದಲ್ ಮತ್ತು ಈಗ ಮಹಾರಾಷ್ಟ್ರದ ಠಾಕ್ರೆ ಕುಟುಂಬದ ಪಕ್ಷಗಳೆಲ್ಲ ನಿಧಾನವಾಗಿ ಮೂಲೆಗೆ ಸರಿಯುತ್ತಿವೆ. ಗಾಂಧಿ ಕುಟುಂಬದ ಪಕ್ಷವೆಂದೇ ಹೆಸರಾದ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. 70ವರ್ಷ ದೇಶವನ್ನು ದೆಹಲಿಯಲ್ಲಿ ಕುಳಿತು ಆಳಿತು. ಆದರೆ ಆ ಪಕ್ಷವೀಗ ಜನರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಡೀ ದೇಶದಲ್ಲಿ ಒಂದೇ ಒಂದು ರಾಜ್ಯದಲ್ಲಿ ಮಾತ್ರ ಸಂಪೂರ್ಣ ಕಾಂಗ್ರೆಸ್ ಸರ್ಕಾರ ಉಳಿದುಕೊಂಡಿದೆ. ಚುನಾವಣೆಗಳಲ್ಲಿ ಗೆಲ್ಲುವುದು ಬಿಡಿ, ನೆಲೆ ಉಳಿಸಿಕೊಳ್ಳಲೂ ಕಷ್ಟಪಡುತ್ತಿದೆ.
ಯಾದವ ವಂಶ ಏನಾಯ್ತು?
ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಮೆರೆದಿದ್ದ ಯಾದವ ವಂಶಕ್ಕೆ ಈಗ ಬಲವಿಲ್ಲ. ಮುಲಾಯಂ ಸಿಂಗ್ ಯಾದವ್ 1992ರಲ್ಲಿ ಸಮಾಜವಾದಿ ಪಕ್ಷ ಕಟ್ಟಿ, ಮೂರು ಬಾರಿ ಉತ್ತರ ಪ್ರದೇಶದ ಚುಟುಕು ಮುಖ್ಯಮಂತ್ರಿಯಾಗಿದ್ದಲ್ಲದೆ, (ಒಂದು ಬಾರಿಯೂ 5 ವರ್ಷಗಳ ಅವಧಿ ಪೂರೈಸಿಲ್ಲ), ಅವರ ಪುತ್ರ ಅಖಿಲೇಶ್ ಯಾದವ್ ಕೂಡ ಸಿಎಂ ಪಟ್ಟಕ್ಕೇರಿದರು. ಇವರು 2012ರಿಂದ 2017ರವರೆಗೆ ಪೂರ್ತಿ ಅವಧಿಗೆ ಆಡಳಿತ ನಡೆಸಿದ್ದರು. ಆದರೆ ಇವರ ಕುಟುಂಬದಲ್ಲೂ ಬಿರುಕು ಮೂಡಿತ್ತು. 2017ರಲ್ಲಿ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಬೇರೆ ಪಕ್ಷ ಕಟ್ಟಿದ್ದರು. ಆಮೇಲೆ ಮತ್ತೆ ಸ್ವಲ್ಪ ರಾಜಿಯಾಗಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಯನ್ನೂ ಮಾಡಿಕೊಂಡು, ಈ ಬಾರಿ ವಿಧಾನಸಭೆ ಚುನಾವಣೆಯನ್ನು ಎದುರಿಸಿದರೂ ಈಗ ಮತ್ತೆ ಅವರ ಮಧ್ಯೆ ಏನೇನೂ ಸರಿಯಿಲ್ಲ. ಇನ್ನೊಂದೆಡೆ ರಾಜ್ಯದಲ್ಲಿ ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲೂ ನೆಲೆ ಕಳೆದುಕೊಳ್ಳುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಲ್ಲದೆ, ಎಸ್‌ಪಿ ಕೈಯಲ್ಲಿದ್ದ ಲೋಕಸಭಾ ಕ್ಷೇತ್ರಗಳಾದ ರಾಂಪುರ, ಅಜಂಗಢ್‌ಗಳು ಮೊನ್ನೆಮೊನ್ನೆ ನಡೆದ ಉಪಚುನಾವಣೆಯಲ್ಲಿ ಕೈತಪ್ಪಿ ಹೋಗಿವೆ.
ಬಾದಲ್ ಕುಟುಂಬಕ್ಕಿಲ್ಲ ರಾಜಕೀಯ ಭವಿಷ್ಯ !
ಒಂದು ಕಾಲದಲ್ಲಿ ಪಂಜಾಬ್ ರಾಜ್ಯವನ್ನಾಳಿದ್ದ ಬಾದಲ್ ಕುಟುಂಬ ಈಗೇನಾಯಿತು. ಕುಟುಂಬ ಹಾಗೇ, ಇದೆ ಆದರೆ ಅದರ ರಾಜಕೀಯ ಅಸ್ತಿತ್ವ ನಶಿಸುತ್ತಿದೆ. ಶಿರೋಮಣಿ ಅಕಾಲಿ ದಳ್ ನಾಯಕ ಪ್ರಕಾಶ್ ಸಿಂಗ್ ಬಾದಲ್ 1970ರಿಂದ 2012ರವರೆಗೆ ಪಂಜಾಬ್‌ನಲ್ಲಿ ಒಟ್ಟು 5 ಬಾರಿ ಮುಖ್ಯಮಂತ್ರಿಯಾದರು. ಅದರಲ್ಲಿ 2007ರಿಂದ 2017ರವರೆಗೆ ಸತತ 10 ವರ್ಷ ಇದೇ ಹುದ್ದೆಯಲ್ಲಿದ್ದರು. ಆದರೆ 2009ರಿಂದ 2017ರವರೆಗೆ ಸಿಎಂ ಹುದ್ದೆಯ ಆಡಳಿತವನ್ನು ಅವರ ಪುತ್ರ ಸುಖ್ಬೀರ್ ಸಿಂಗ್ ಬಾದಲ್ ನೋಡಿಕೊಳ್ಳುತ್ತಿದ್ದರು. ಬಾದಲ್ ಕುಟುಂಬದ ಶಿರೋಮಣಿ ಅಕಾಲಿ ದಳ್ ಪ್ರಾರಂಭದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ನಂತರ 1990ರ ದಶಕದಲ್ಲಿ ಬಿಜೆಪಿಯೊಂದಿಗೆ ಸೇರ್ಪಡೆಯಾಯಿತು. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ಜಾರಿಗೆ ತಂದ ಮೇಲೆ ಅದರ ವಿರುದ್ಧ ಪಂಜಾಬ್ ರೈತರು ತೀವ್ರ ಹೋರಾಟ ನಡೆಸಿದರು. ಇದೇ ಸಂಘರ್ಷದಲ್ಲಿ ಎನ್‌ಡಿಎ ಒಕ್ಕೂಟದಿಂದ ಶಿರೋಮಣಿ ಅಕಾಲಿ ದಳ್ ಹೊರಬಿತ್ತು. ರೈತ ವಿರೋಧಿ ಪಕ್ಷದೊಂದಿಗೆ ನಾವಿರಲ್ಲ ಎಂದು ಘೋಷಿಸಿಕೊಂಡಿತು. 2022ರ ವಿಧಾನಸಭೆ ಚುನಾವಣೆಯಲ್ಲಿ ಬಾದಲ್ ಕುಟುಂಬದ ಅಕಾಲಿ ದಳ್‌ಗೆ ಗೆಲ್ಲುವ ಭರವಸೆಯೇನೋ ತುಂಬ ಇತ್ತು. ಆದರೆ ಅದು ಉಲ್ಟಾ ಆಯಿತು. ಕೇವಲ 3 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿತು. ಮೈತ್ರಿಗೂ ಪ್ರಯೋಜನಕ್ಕೆ ಬಾರದ ಸ್ಥಿತಿ ಅದರದ್ದಾಯಿತು.
ಇದನ್ನೂ ಓದಿ: Bypoll Results: ಅಖಿಲೇಶ್ ಯಾದವ್ ಪಕ್ಷದ ಕೈಯಲ್ಲಿದ್ದ ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿ ಮಡಿಲಿಗೆ
ಠಾಕ್ರೆ ಮನೆತನದ ರಾಜಕೀಯವೀಗ ಅತಂತ್ರ
ಬಾಳ್ ಠಾಕ್ರೆ ಪ್ರಖರ ಹಿಂದುತ್ವವಾದಿ. ಇವರು ಹಿಂದುತ್ವದ ಅಜೆಂಡಾ ಇಟ್ಟುಕೊಂಡು 1966ರಲ್ಲಿ ಶಿವಸೇನೆ ಪಕ್ಷವನ್ನು ಸಂಸ್ಥಾಪಿಸಿದರು. ಛತ್ರಪತಿ ಶಿವಾಜಿ ಹೆಸರಲ್ಲಿ ಹುಟ್ಟಿದ ಶಿವಸೇನೆ ಮಹಾರಾಷ್ಟ್ರದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಿತು. ಬಾಳ್ ಠಾಕ್ರೆ ನಂತರ ಅವರ ಪುತ್ರ ಉದ್ಧವ್ ಠಾಕ್ರೆ, ಈಗ ಅವರ ಮಗ ಆದಿತ್ಯ ಠಾಕ್ರೆಯವರೇ ಇಲ್ಲಿ ಹೈಲೆಟ್ ಆಗಿದ್ದರು. ಆದರೀಗ ಉದ್ಧವ್ ಠಾಕ್ರೆ ಬಲ ಕುಂದುತ್ತಿದೆ. ಅವರ ತಂದೆಯೇ ಹುಟ್ಟುಹಾಕಿದ್ದ ಪಕ್ಷದಲ್ಲಿದ್ದ ಅನೇಕರು ಏಕನಾಥ್ ಶಿಂಧೆ ಬಣ ಸೇರಿಕೊಂಡು ನಾವೇ ನಿಜವಾದ ಶಿವಸೈನಿಕರು ಎನ್ನುತ್ತಿದ್ದಾರೆ. ಈ ಶಿವಸೇನೆ ಕೂಡ 2019ರವರೆಗೆ ಬಿಜೆಪಿ ಮೈತ್ರಿಪಕ್ಷವೇ ಆಗಿತ್ತು. ಮತ್ತಲ್ಲಿ ಮುಖ್ಯಮಂತ್ರಿ ಹುದ್ದೆಯ 50;50 ಹಂಚಿಕೆ ವಿಚಾರದಲ್ಲಿ ಬಂದ ಜಗಳ ಇವೆರಡನ್ನೂ ಬೇರ್ಪಡಿಸಿದೆ. ಅತ್ತ ಠಾಕ್ರೆ ಕುಟುಂಬದಲ್ಲೂ ಎಲ್ಲವೂ ಸರಿಯಿಲ್ಲ. ಇಲ್ಲಿ ಉದ್ಧವ್ ಠಾಕ್ರೆ ಮತ್ತು ಅವರ ಸೋದರ ಸಂಬಂಧಿ ರಾಜ್ ಠಾಕ್ರೆ (ಬಾಳ್ ಠಾಕ್ರೆ ಸಹೋದರನ ಪುತ್ರ) ಮಧ್ಯೆ ಈಗಾಗಲೇ ಸಂಘರ್ಷಗಳಿವೆ. ರಾಜ್ ಠಾಕ್ರೆಯದ್ದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯೆಂಬ ಬೇರೆ ಪಕ್ಷವೇ ಇದೆ. ಸದ್ಯಕ್ಕಂತೂ, ಶಿವಸೇನೆಯ ಹುಟ್ಟಿಗೆ ಕಾರಣವಾದ ಠಾಕ್ರೆ ಕುಟುಂಬ ಅನಾಥವಾಗಿದೆ.
ಮೋದಿ ಹೇಳಿದ್ದೇ ಆಯ್ತಾ?
ಪ್ರಧಾನಿ ನರೇಂದ್ರ ಮೋದಿ ವಂಶಪಾರಂಪರ್ಯ ರಾಜಕಾರಣದ ಕಟು ವಿರೋಧಿ. ದೇಶದಲ್ಲಿ ಕುಟುಂಬ ರಾಜಕಾರಣ ನಿರ್ಮೂಲನ ಮಾಡಬೇಕು ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ. ವಂಶ ರಾಜಕೀಯವೆಂಬುದು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಶಾಪ ಎನ್ನುವ ಮೂಲಕ, ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿ ಹಲವು ಪಕ್ಷಗಳನ್ನು ಟೀಕಿಸುತ್ತಾರೆ. ಅದರಂತೆ ಈಗಿನ ಸನ್ನಿವೇಶವೂ ಬದಲಾಗುತ್ತಿದೆ. ಅಪ್ಪ-ಮಕ್ಕಳು-ಮೊಮ್ಮಕ್ಕಳ ಪಕ್ಷಗಳೀಗ ನಿಧಾನಕ್ಕೆ ಮೂಲೆಗುಂಪಾಗುತ್ತಿವೆ. ಇದು ಪ್ರಧಾನಿ ಮೋದಿ ಸೃಷ್ಟಿಸಿದ ಸಂದರ್ಭವೂ ಇರಬಹುದು ಅಥವಾ ಆ ಪಕ್ಷಗಳೇ ತಂದುಕೊಂಡ ದುರಂತವೂ ಇರಬಹುದು. ಒಟ್ಟಾರೆ ಕುಟುಂಬದಲ್ಲೇ ಒಗ್ಗಟ್ಟು ಇಲ್ಲದ ಇವರೆಲ್ಲ ದೇಶವನ್ನೇನು ಆಳಬಲ್ಲರು ಎಂಬ ಅಪನಂಬಿಕೆ ಜನರಲ್ಲಿ ಹುಟ್ಟುತ್ತಿರುವುದಂತೂ ಸತ್ಯ ಎನಿಸುತ್ತಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಬೆಂಬಲ ಪಡೆದು ಹೊಸ ಸರ್ಕಾರ ರಚನೆಗೆ ಬಿಜೆಪಿ ಸಜ್ಜು