ನವದೆಹಲಿ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷಾಂತ್ಯದಲ್ಲಿ ನಡೆಯುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು (5 States Election) ತೀವ್ರ ಕುತೂಹಲ ಕೆರಳಿಸಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಹಾಗೂ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಚುನಾವಣೆ ಆಯೋಗವು (Election Commission) ಭಾನುವಾರ (ಅಕ್ಟೋಬರ್ 8) ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 8ರಿಂದ ಅಕ್ಟೋಬರ್ 10ರ ಅವಧಿಯಲ್ಲಿ ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ. ಅದರಲ್ಲೂ, ಭಾನುವಾರವೇ ಆಯೋಗವು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ. ನವೆಂಬರ್ ಎರಡನೇ ವಾರ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಐದೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಎಷ್ಟು ಹಂತಗಳಲ್ಲಿ ಮತದಾನ?
2018ರಲ್ಲಿ ನಡೆಸಿದಂತೆ ಈ ಬಾರಿಯೂ ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ ಹಾಗೂ ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಐದೂ ರಾಜ್ಯಗಳಿಗೆ ಚುನಾವಣೆ ಆಯೋಗದ ಅಧಿಕಾರಿಗಳ ತಂಡವು ಇತ್ತೀಚೆಗೆ ಭೇಟಿ ನೀಡಿದೆ. ಐದೂ ರಾಜ್ಯಗಳ ವಿಧಾನಸಭೆ ಅವಧಿಯು 2024ರ ಜನವರಿಯಲ್ಲಿ ಅಂತ್ಯವಾಗಲಿದೆ.
ಇದನ್ನೂ ಓದಿ: Poster War: ‘ರಾಹುಲ್ ಗಾಂಧಿ ಆಧುನಿಕ ಕಾಲದ ರಾವಣ’ ಎಂದ ಬಿಜೆಪಿ; ಕಾಂಗ್ರೆಸ್ ತಿರುಗೇಟು
ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಆಡಳಿತದಲ್ಲಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ನ ಜೊರಾಮ್‌ಥಾಂಗ ಮುಖ್ಯಮಂತ್ರಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಐದೂ ರಾಜ್ಯಗಳಲ್ಲಿ ಆಯಾ ಪಕ್ಷಗಳು ಮುನ್ನಡೆ ಸಾಧಿಸುವ, ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ದಿಸೆಯಲ್ಲಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ.