ಜಮ್ಮು-ಕಾಶ್ಮೀರದ ಪೂಂಚ್ನಲ್ಲಿ ನಿನ್ನೆ ನಡೆದ ಉಗ್ರದಾಳಿ (Poonch Terror Attack)ಯಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಯ ಐವರು ಯೋಧರು ದುರ್ಮರಣಕ್ಕೀಡಾಗಿದ್ದಾರೆ. ಒಬ್ಬ ಯೋಧ ಗಾಯಗೊಂಡಿದ್ದಾರೆ. ಈ ಕೃತ್ಯ ನಡೆಸಿದ್ದು ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಏಳು ಮಂದಿ ಭಯೋತ್ಪಾದಕರು ಎಂಬುದು ಸ್ಪಷ್ಟವಾಗಿದೆ. 49 ರಾಷ್ಟ್ರೀಯ ರೈಫಲ್ಸ್ (ಆರ್ಆರ್)ನ ಟ್ರಕ್ವೊಂದು ಪೂಂಚ್-ರಾಜೌರಿ ನಡುವಿನ ಬಿಜಿ ಸೆಕ್ಟರ್ನಲ್ಲಿರುವ ಭುಟ್ಟಾ ಡುರಿಯಾನ್ ಅರಣ್ಯದ ಸಮೀಪ ಸಂಚರಿಸುತ್ತಿತ್ತು. ಭಿಂಬರ್ ಗಾಲಿಯಲ್ಲಿಯಲ್ಲಿರುವ ಗಡಿ ನಿಯಂತ್ರಣಾ ರೇಖೆಯಿಂದ ಈ ಪ್ರದೇಶ ಕೇವಲ 7ಕಿಮೀ ದೂರವಷ್ಟೇ ಇದೆ. ಇದೊಂದು ದಟ್ಟಾರಣ್ಯವಾಗಿದ್ದು, ಉಗ್ರರು ಅಲ್ಲಿಯೇ ಅಡಗಿ ಕುಳಿತಿದ್ದು, ಸೇನಾ ವಾಹನದ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಿದ್ದಾರೆ. ಅದಾದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇಡೀ ಸೇನಾ ವಾಹನ ಧಗಧಗನೆ ಹೊತ್ತಿ ಉರಿದಿದೆ. ಆದರೆ ಉಗ್ರರು ನಡೆಸಿದ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯಿಂದ ವಾಹನಕ್ಕೆ ಬೆಂಕಿ ಹೊತ್ತಿದೆಯೋ ಅಥವಾ ಗ್ರೆನೇಡ್ ದಾಳಿಯಾಗಿ, ಮತ್ತೆ ಗುಂಡನ್ನೂ ಹಾರಿಸಿ ಸೈನಿಕರನ್ನು ಕೊಂದ ಮೇಲೆ ಉಗ್ರರು ವಾಹನಕ್ಕೆ ಮತ್ತೆ ಬೆಂಕಿ ಹಚ್ಚಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: Poonch Terror Attack: ಸೇನಾ ವಾಹನಕ್ಕೆ ಬೆಂಕಿ ಆಕಸ್ಮಿಕವಲ್ಲ, ಅದು ಉಗ್ರರ ಕೃತ್ಯ! ಐವರು ಯೋಧರು ಹುತಾತ್ಮ
ಈ ವರ್ಷದ ಜಿ20 ಶೃಂಗದ ಆತಿಥ್ಯವಹಿಸಿರುವ ಭಾರತ ಅದರ ಪೂರ್ವಭಾವಿಯಾಗಿ ಮೇ ತಿಂಗಳಲ್ಲಿ ಗೋವಾದಲ್ಲಿ ವಿದೇಶಾಂಗ ಇಲಾಖೆ ಸಚಿವರ ಸಭೆ ಆಯೋಜಿಸಿದೆ. ಜಿ20 ಒಕ್ಕೂಟದಲ್ಲಿ ಪಾಕಿಸ್ತಾನ ಕೂಡ ಇದ್ದು, ಈ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ನಿನ್ನೆಯಷ್ಟೇ ದೃಢಪಡಿಸಿದ್ದರು. ಅದರ ಬೆನ್ನಲ್ಲೇ ಉಗ್ರರು ದಾಳಿ ಮಾಡಿದ್ದಾರೆ. ಈ ಜಿ20 ಸಮಾರಂಭಕ್ಕೂ, ಈಗ ನಡೆದಿರುವ ಉಗ್ರಕೃತ್ಯಕ್ಕೂ ಲಿಂಕ್ ಇದೆ. ಭಾರತದಲ್ಲಿ ಜಿ20 ಶೃಂಗದಂಥ ದೊಡ್ಡಮಟ್ಟದ ಸಮಾವೇಶ ನಡೆಯುವುದಕ್ಕೆ ಅಡ್ಡಿಪಡಿಸಲು, ಬೇರೆ ದೇಶಗಳವರು ಇಲ್ಲಿಗೆ ಬರಲು ಭಯಪಡುವಂತೆ ಮಾಡುವ ಸಲುವಾಗಿಯೇ ಉಗ್ರರು ಇಂಥ ದಾಳಿ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಸೇನಾವಾಹನದ ಮೇಲೆ ದಾಳಿ ಮಾಡಿರುವ ಉಗ್ರರ ಬೇಟೆ ಕಾರ್ಯ ನಡೆಯುತ್ತಿದೆ.