Site icon Vistara News

Poonch Terror Attack: ಸೇನಾ ವಾಹನದ ಮೇಲೆ ದಾಳಿ ನಡೆಸಲು ಉಗ್ರರಿಗೆ ಸ್ಥಳೀಯರಿಂದಲೇ ಸಿಕ್ಕಿತ್ತು ನೆರವು

Poonch Terror Attack 6 local residents held for providing help to terrorists

#image_title

ಜಮ್ಮು-ಕಾಶ್ಮೀರದ ಪೂಂಚ್​​ನಲ್ಲಿ ಕಳೆದ ವಾರ ಉಗ್ರರು ಸೇನಾ ವಾಹನದ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್ ದಾಳಿ ಮಾಡಿ (Poonch Terror Attack), ಐವರು ಯೋಧರು ಮೃತಪಟ್ಟಿದ್ದರು. ಪೂಂಚ್​​-ರಾಜೌರಿ ನಡುವಿನ ಬಿಜಿ ಸೆಕ್ಟರ್​​ನಲ್ಲಿರುವ ಭುಟ್ಟಾ ಡುರಿಯಾನ್ ಅರಣ್ಯ ಪ್ರದೇಶದ ಬಳಿ​ ಲಷ್ಕರೆ ತೊಯ್ಬಾ ಸಂಘಟನೆಯ ಸುಮಾರು 7 ಉಗ್ರರು ಅಡಗಿ ಕುಳಿತು ದುಷ್ಕೃತ್ಯ ನಡೆಸಿದ್ದರು. ಈ ದಾಳಿಯಲ್ಲಿ ಸ್ಥಳೀಯ ಕೆಲವರ ಕೈವಾಡವೂ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದು ಸೇನಾ ವಾಹನದ ಮೇಲೆ ದಾಳಿ ನಡೆಸಲು, ಸ್ಥಳೀಯ ಕೆಲವು ನಿವಾಸಿಗಳೂ ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾರೆ ಎಂದು ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಘ್​ ಸಿಂಗ್​ ತಿಳಿಸಿದ್ದಾರೆ.

’ಸ್ಥಳೀಯರು ಕೆಲವರು ಭಯೋತ್ಪಾದಕರಿಗೆ ಇಲ್ಲಿ ಆಶ್ರಯ ನೀಡಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನದಿಂದ ಡ್ರೋನ್​ ಮೂಲಕ ಬಂದು ಬಿದ್ದ ಸ್ಟೀಲ್​ ಲೇಪಿತ ಬುಲೆಟ್​ಗಳು, ಸ್ಫೋಟಕಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಇಲ್ಲಿನ ಭಯೋತ್ಪಾದಕರು ಪಡೆಯಲು ಅವರಿಗೆ ಅನುಕೂಲವಾಗುವಂಥ ಸನ್ನಿವೇಶ ರೂಪಿಸಿಕೊಟ್ಟಿದ್ದರು ಮತ್ತು ಉಗ್ರರ ಸಾರಿಗೆ/ಸಂಚಾರಕ್ಕೂ ಸಹಾಯ ಮಾಡಿದ್ದರು’ ಎಂದು ತಿಳಿಸಿರುವ ಡಿಜಿಪಿ ‘ಏಪ್ರಿಲ್​ 21ರಂದು ನಡೆದ ದಾಳಿಯ ಸ್ವರೂಪ ನೋಡಿದಾಗಲೇ ನಮಗೆ ಸ್ಥಳೀಯರ ಬೆಂಬಲದ ಅನುಮಾನ ಬಂದಿತ್ತು. ಇಂಥ ದಾಳಿಗಳನ್ನು ಸ್ಥಳೀಯರ ಸಹಾಯವಿಲ್ಲದೆ ನಡೆಸಲು ಸಾಧ್ಯವಿಲ್ಲ. ಈ ಭಯೋತ್ಪಾದಕರಿಗೆ ಸ್ಥಳೀಯರು ಒಂದು ಕಡೆ ಆಶ್ರಯ ಕೊಟ್ಟಿದ್ದಾರೆ, ಅಲ್ಲಿಂದ ದಾಳಿ ನಡೆಸುವ ಸ್ಥಳಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಮಳೆಯ ವಾತಾವರಣ ಇದ್ದಾಗ್ಯೂ ಭಯೋತ್ಪಾದಕರು ಸೇನಾವಾಹನದ ಮೇಲೆ ಅತ್ಯಂತ ನಿಖರವಾಗಿ ದಾಳಿ ಮಾಡಿದ್ದಾರೆ. ಅಲ್ಲೊಂದು ತಿರುವು ಇತ್ತು, ಹೀಗಾಗಿ ವಾಹನದ ವೇಗ ಅತ್ಯಂತ ಕಡಿಮೆಯಿತ್ತು. ಸರಿಯಾಗಿ ಅದೇ ಹೊತ್ತಲ್ಲೇ ಉಗ್ರರು ಗ್ರೆನೇಡ್​ ಎಸೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಸೇನಾ ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ಇದುವರೆಗೆ 221 ಮಂದಿ ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅದರಲ್ಲೂ 6ಮಂದಿ ಸ್ಥಳೀಯರನ್ನು ಬಂಧಿಸಿದ್ದೇವೆ. ಅದರಲ್ಲಿ ಒಬ್ಬಾತನ ಹೆಸರು ನಿಸಾರ್ ಅಹ್ಮದ್​. ಇವನು ಗುರ್ಸೈ ಗ್ರಾಮದವನು. ಈತ ಭಯೋತ್ಪಾದಕರಿಗಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾನೆ. 1990ರಿಂದಲೂ ಆತ ಭಯೋತ್ಪಾದಕ ಸಂಬಂಧಿ ಚಟುವಟಿಕೆ ನಡೆಸಿಕೊಂಡಿದ್ದ. ಹಿಂದೆಯೂ ಹಲವು ಬಾರಿ ಅವನನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಈ ಬಾರಿ ಪೂಂಚ್​ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಅವನು ಆಹಾರ, ಆಶ್ರಯ ಮತ್ತು ಸಾರಿಗೆಗೆ ಸಹಾಯ ಮಾಡಿದ್ದಾನೆ ಎಂದು ಗೊತ್ತಾಗಿದೆ’ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Poonch Terror Attack: ಸೇನಾ ವಾಹನದ ಮೇಲೆ ದಾಳಿ ಮಾಡಿದ್ದು ಲಷ್ಕರೆ ತೊಯ್ಬಾದ 7 ಉಗ್ರರು; ಅರಣ್ಯದಲ್ಲಿ ಕಾದು ಕುಳಿತು ಅಟ್ಯಾಕ್​

Exit mobile version