ನವದೆಹಲಿ: ಪೂಂಚ್ ಉಗ್ರ ದಾಳಿಯಲ್ಲಿ (Poonch terror attack) ಹುತಾತ್ಮರಾದ ನಾಲ್ವರು ಯೋಧರ ಅಂತ್ಯಕ್ರಿಯೆ ಪಂಜಾಬ್‌ನ ಅವರ ಸ್ವಗ್ರಾಮಗಳಲ್ಲಿ ನಡೆಯಿತು. ಈ ವೇಳೆ, ಭಾರತ್ ಮಾತಾ ಕಿ ಜೈ, ಜೋ ಬೋಲೆ ಸೋ ನಿಹಾಲ್ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಇನ್ನೊಬ್ಬ ಯೋಧ ಒಡಿಶಾ ರಾಜ್ಯದವರಾಗಿದ್ದಾರೆ. ಹುತಾತ್ಮರಾದ ಹವಾಲ್ದಾರ್ ಮಂದೀಪ್ ಸಿಂಗ್, ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್ ಹಾಗೂ ಸಿಪಾಯಿಗಳಾದ ಹರಕೃಷ್ಣನ್ ಸಿಂಗ್ ಮತ್ತು ಸೇವಕ್ ಸಿಂಗ್ ಅವರ ಹುಟ್ಟೂರಿನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನಡೆಸಿಕೊಡಲಾಯಿತು. ಹುತಾತ್ಮ ಮಂದೀಪ್ ಅವರ ಪುತ್ರ ಕರಣ್ ದೀಪ್, ”ನನ್ನ ತಂದೆ ಫೌಜಿ. ಅವರೀಗ ಹುತಾತ್ಮರಾಗಿದ್ದಾರೆ. ದೊಡ್ಡವನಾದ ಮೇಲೆ ನಾನೂ ಯೋಧನಾಗುತ್ತೇನೆ” ಎಂದು ಹೇಳಿದ್ದು ಅಲ್ಲಿದ್ದವರ ದುಃಖ ಉಮ್ಮಳಿಸಿ ಬರಲು ಕಾರಣವಾಯಿತು.
ಮಂದೀಪ್ ಸಿಂಗ್ ಅವರು ಮಂದೀಪ್ ಲುಧಿಯಾನದ ಚಾಂಕೋಯಾನ್ ಗ್ರಾಮದವರಾಗಿದ್ದರೆ, ಕುಲವಂತ್ ಮೊಗಾದ ಚಾರಿಕ್ ಗ್ರಾಮದವರು. ಹರ್‌ಕೃಷ್ಣನ್ ಅವರು ಗುರುದಾಸ್‌ಪುರದ ತಲ್ವಂಡಿ ಭರತ್ ಗ್ರಾಮದವರು ಮತ್ತು ಸೇವಕ್ ಬಟಿಂಡಾದ ಬಾಘಾ ಗ್ರಾಮದವರಾಗಿದ್ದಾರೆ.
ರಾಷ್ಟ್ರೀಯ ರೈಫಲ್ಸ್‌ನ ಮಂದೀಪ್ (39) ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಸ್ಕಾರ ಮಾಡಿದ ಚಂಕೋಯಾನ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಅವರ 11 ವರ್ಷದ ಮಗಳು ಖುಷ್‌ದೀಪ್ ಕೌರ್ ಮತ್ತು 8 ವರ್ಷದ ಮಗ ಕರಣ್‌ದೀಪ್ ಸಿಂಗ್ ಅವರು ಕುಟುಂಬ ಮತ್ತು ಗ್ರಾಮದವರಿಗೆ ಅಂತಿಮ ನಮನ ಸಲ್ಲಿಸಿದರು. ನನ್ನ ತಂದೆ ಫೌಜಿ. ಅವರೀಗ ಹುತಾತ್ಮರಾಗಿದ್ದಾರೆ. ದೊಡ್ಡವನಾದ ಮೇಲೆ ನಾನೂ ಯೋಧನಾಗುತ್ತೇನೆ ಎಂದು 8 ವರ್ಷದ ಮಗ ಕರಣ್ ದೀಪ್ ಹೇಳಿದಾಗಿ, ಅಲ್ಲಿದ್ದವರ ಕಣ್ಣುಗಳ ಅಂಚಿನಲ್ಲಿ ನೀರಾಡಿತು.
ಇದನ್ನೂ ಓದಿ: ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ಉಗ್ರದಾಳಿ ಪ್ರಕರಣ; 12 ಮಂದಿ ವಶಕ್ಕೆ; ಸ್ಥಳದಲ್ಲಿ ಬೀಡುಬಿಟ್ಟ ಶ್ವಾನದಳ, ಡ್ರೋನ್
4 ಸಿಖ್ ಲೈಟ್ ಇನ್ಫೆಂಟ್ರಿಯ ಲ್ಯಾನ್ಸ್ ನಾಯಕ್ ಕುಲವಂತ್ ಸಿಂಗ್ (32) ಅವರ ಪಾರ್ಥಿವ ಶರೀರವು ಹೂವುಗಳಿಂದ ಅಲಂಕರಿಸಲ್ಪಟ್ಟ ಸೇನಾ ವಾಹನದಲ್ಲಿ ಮೊಗಾದ ಅವರ ಗ್ರಾಮವನ್ನು ತಲುಪುತ್ತಿದ್ದಂತೆ ‘ಶಹೀದ್ ಅಮರ್ ರಹೇ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮುಗಿಲು ಮುಟ್ಟಿದವು. ಕುಲವಂತ್ ಅಂಬೆಗಾಲಿಡುತ್ತಿರುವಾಗ ಅವರ ತಂದೆ ಬಲದೇವ್ ಸಿಂಗ್ ಅವರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. 1991ರಲ್ಲಿ ಜನಿಸಿದ ಕುಲ್ವಂತ್ ತನ್ನ ತಂದೆಯಂತೆ ಸೇನೆ ಸೇರಿದ್ದರು. ಇದೀಗ ಹುತಾತ್ಮರಾಗಿದ್ದಾರೆ.