ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸೇನಾನಿಗಳು, ಹುತಾತ್ಮರ ಬಗ್ಗೆ ಹಲವಾರು ಸಿನಿಮಾಗಳು ನಿರ್ಮಾಣಗೊಂಡಿವೆ. ಇಂಥ ಕತೆಗಳೆಂದರೆ ಚಿತ್ರ ನಿರ್ಮಾಪಕರಿಗೆ ನಿರ್ದೇಶಕರಿಗೆ ಹಬ್ಬ. ಆದರೆ ಭಾರತ ಬ್ರಿಟಿಷರ ದಾಸ್ಯದಿಂದ ಹೊರಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಹಲವು ಚಳವಳಿಗಳ ಚುಕ್ಕಾಣಿ ಹಿಡಿದಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪಾತ್ರವನ್ನು ನಿರೂಪಿಸುವುದು ಕಠಿಣ ಕೆಲಸ. ಅವರ ವೃತ್ತಿ, ಬದುಕು, ಅಹಿಂಸಾ ತತ್ವ, ಅಸಹಕಾರ ಚಳವಳಿ, ಆತ್ಮಕತೆಯ ಆದರ್ಶಗಳು ಹಾಗೂ ಅವರ ಹತ್ಯೆ ಸೇರಿದಂತೆ ಎಲ್ಲ ವಿಷಯಗಳನ್ನು ಜೋಪಾನವಾಗಿ ಸಮೀಕರಿಸಬೇಕಾಗುತ್ತದೆ. ಆದಾಗ್ಯೂ ಮಹಾತ್ಮನ ಕುರಿತು ಹಲವಾರು ಸಿನಿಮಾಗಳೂ ಭಾರತೀಯ ನಾನಾ ಭಾಷೆಗಳಲ್ಲಿ ಬಿಡುಗಡೆಗೊಂಡಿವೆ. ಅವುಗಳಲ್ಲಿ ಜನಪ್ರಿಯ ೧೦ ಚಲನಚಿತ್ರಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರಣೆ.
ಮಹಾತ್ಮ : ಲೈಫ್ ಆಫ್ ಗಾಂಧಿ ೧೯೬೯-೧೯೪೮ | ೧೯೬೮ರಲ್ಲಿ ಬಿಡುಗಡೆ
ಇದೊಂದು ಕಪ್ಪು- ಬಿಳುಪು ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ). ಮಹಾತ್ಮ ಗಾಂಧಿಯವರ ಬದುಕನ್ನು ಆಧರಿಸಿ ಈ ಸಾಕ್ಷ್ಯಚಿತ್ರ ತಯಾರು ಮಾಡಲಾಗಿದೆ. ಗಾಂಧಿಯವರ ಭಾಷಣಗಳು ಹಾಗೂ ಪಾಠಗಳನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, ಗಾಂಧಿ ರಾಷ್ಟ್ರಿಯ ಸ್ಮಾರಕ ನಿಧಿ ಹಾಗೂ ಕೇಂದ್ರ ಸರಕಾರದ ಚಲನಚಿತ್ರ ವಿಭಾಗದ ನೆರವು ನೀಡಿತ್ತು. ೩೩೦ ನಿಮಿಷಗಳ ಈ ಡಾಕ್ಯುಮೆಂಟರಿಯನ್ನು ವಿಠಲ್‌ಭಾಯಿ ಜಾವೇರಿ ಅವರು ಕತೆ ಬರೆದು ನಿರ್ದೇಶಿಸಿದ್ದರು. ೫ ಗಂಟೆ ಅವಧಿಯ ಪೂರ್ಣ ಸಾಕ್ಷ್ಯಚಿತ್ರ, ೨ ಗಂಟೆ ೧೬ ನಿಮಿಷಗಳ ಸಣ್ಣ ಆವೃತ್ತಿ ಹಾಗೂ ಒಂದು ಗಂಟೆಯ ಚುಟುಕು ಆವೃತ್ತಿಯೂ ಪ್ರದರ್ಶನಗೊಂಡಿತ್ತು. ಹಿಂದಿ ಭಾಷೆಯ ಡಾಕ್ಯುಮೆಂಟರಿ ೨ ಗಂಟೆ ೨೦ ನಿಮಿಷ ಅವಧಿಯದ್ದು.
ನೈನ್ ಅವರ್ಸ್ ಟು ರಾಮ | ೧೯೬೩ರಲ್ಲಿ ಬಿಡುಗಡೆ
ಇದು ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ಕುರಿತ ಸಿನಿಮಾ. ಗಾಂಧಿಯನ್ನು ಗುಂಡಿಟ್ಟು ಕೊಲ್ಲುವ ಮೊದಲಿನ ೯ ಗಂಟೆಗಳ ಅವಧಿಯ ಕತೆ ಹೊಂದಿದೆ. ಸ್ಟಾನ್ಲಿ ವೋಲ್ಪರ್ಟ್ ಅವರು ಬರೆದ Nine Hours to Rama (1963) ಎಂಬ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಬ್ರಿಟನ್- ಅಮೆರಿಕದ ನಿರ್ದೇಶಕ ಮಾರ್ಕ್ ರಾಬ್ಸನ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಪಾತ್ರವರ್ಗದಲ್ಲಿ ಭಾರತೀಯರಿಲ್ಲ. ಮಹಾತ್ಮ ಗಾಂಧಿಯನ್ನು ಕೊಲೆ ಮಾಡುವ ಮೊದಲು ನಾಥೂರಾಮ್ ಗೋಡ್ಸೆ ಮನದಲ್ಲಿ ಉಂಟಾಗುವ ಗೊಂದಲ, ಹಿಂದೂ ಮಹಾಸಭಾದ ಪ್ರಭಾವ, ವಿವಾಹಿತ ಮಹಿಳೆ ರಾಣಿ ಹಾಗೂ ವೇಶ್ಯೆ ಶೈಲಾ ಎಂಬುವರ ಜತೆಗಿನ ಒಡನಾಟವನ್ನೂ ಈ ಸಿನಿಮಾದಲ್ಲಿ ಚಿತ್ರಿಕರಿಸಲಾಗಿದೆ.
ಗಾಂಧಿ| ೧೯೮೨ರಲ್ಲಿ ಬಿಡುಗಡೆ
ಮಹಾತ್ಮ ಗಾಂಧಿಯ ಬದುಕನ್ನು ಅತ್ಯಂತ ವಿಸ್ತೃತವಾಗಿ ಚಿತ್ರಿಸಿದ ಹಾಗೂ ಎಲ್ಲರ ಸ್ಮರಣೆಯಲ್ಲಿ ಮಹಾತ್ಮನ ವ್ಯಕ್ತಿತ್ವ ಹಲವು ದಶಕಗಳ ಬಳಿಕವೂ ಉಳಿಯವಂತೆ ಮಾಡಿದ ಚಲನ ಚಿತ್ರ ಇದು. ಈ ಸಿನಿಮಾದ ಪ್ರಸಾದನಕ್ಕಾಗಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ತೊಡಗಿಸಿಕೊಳ್ಳುವ ಮೊದಲು ಹಾಗೂ ನಂತರ ಅವರು ಎದುರಿಸಿದ ಬದುಕಿನ ನಾನಾ ಆಯಾಮಗಳನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ರಿಚರ್ಡ್ ಅಟೆನ್‌ಬರೊ ಅವರು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬೆನ್ ಕಿಂಗ್‌ಸ್ಲೇ ಅವರು ಗಾಂಧೀಜಿಯವರ ಪಾತ್ರ ಮಾಡಿದ್ದು, ಅಹಿಂಸಾ ಮೂರ್ತಿಗೆ ಜೀವ ತುಂಬಿದ್ದಾರೆ. ಗಾಂಧಿ ಕುರಿತ ಅತ್ಯಂತ ಜನಪ್ರಿಯ ಸಿನಿಮಾ ಇದು. ಭಾರತದ ಮಹಾತ್ಮನ ಬಗ್ಗೆ ಒಂದೊಳ್ಳೆ ಸಿನಿಮಾ ನಿರ್ಮಿಸಲು ಬ್ರಿಟಿಷ್ ಮೂಲದ ವ್ಯಕ್ತಿಯೇ ಬರಬೇಕಾಯಿತು ಎಂಬ ಮಾತನ್ನೂ ಈ ಚಲನಚಿತ್ರದ ಬಗ್ಗೆ ಹೇಳಲಾಗುತ್ತದೆ.
ಸರ್ದಾರ್ | ಬಿಡುಗಡೆ 1993ರಲ್ಲಿ
ಇದು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಕುರಿತ ಚಿತ್ರ. ನಾಟಕಕಾರ ವಿಜಯ್ ತೆಂಡೂಲ್ಕರ್ ಅವರು ಬರೆದ ಕತೆಗೆ ಚಲನಚಿತ್ರ ರೂಪ ಕೊಟ್ಟವರು ಕೇತನ್ ಮೆಹ್ತಾ. ಯುವಕ ಸರ್ದಾರ್ ಪಟೇಲ್ ಅವರು ಗಾಂಧಿಯ ನೀತಿಗಳ ಕುರಿತು ಹೊಂದಿದ್ದ ವಿರೋಧಗಳು, ಬಳಿಕ ಅವರ ಜತೆಗೆ ಹಲವು ಸತ್ಯಾಗ್ರಹಗಳಲ್ಲಿ ಪಾಲ್ಗೊಂಡಿರುವುದು , ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಪ್ರಮುಖ ಹುದ್ದೆಗಳನ್ನು ಕಟ್ಟಿಕೊಡಲಾಗಿದೆ. ಪ್ರಮುಖವಾಗಿ ಸ್ವಾತಂತ್ರ್ಯದ ಬಳಿಕ ಭಾರತದ ಏಕೀಕರಣದಲ್ಲಿ ಅವರ ಪಾತ್ರವನ್ನು ಚಿತ್ರಿಸಲಾಗಿದೆ. ಹೀಗಾಗಿ ಈ ಸಿನಿಮಾದಲ್ಲಿ ಮಹಾತ್ಮ ಗಾಂಧಿಯ ಪಾತ್ರವೂ ಪ್ರಮುಖ ಎನಿಸಿದೆ.
ದಿ ಮೇಕಿಂಗ್ ಆಫ್ ಮಹಾತ್ಮ ಗಾಂಧಿ | ೧೯೯೬ರಲ್ಲಿ ಬಿಡುಗಡೆ
ಭಾರತ ಚಲನಚಿತ್ರ ಕ್ಷೇತ್ರ ಕಂಡ ಶ್ರೇಷ್ಠ ನಿರ್ದೇಶಕ ಎನಿಸಿಕೊಂಡಿರುವ ಶ್ಯಾಮ್ ಬೆನಗಲ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಫಾತಿಮಾ ಮೀರ್ ಅವರ ದಿ ಅಪ್ರೆಂಟಿಸ್‌ಶಿಪ್ ಆಫ್ ಎ ಮಹಾತ್ಮ ಎಂಬ ಪುಸ್ತಕವನ್ನು ಆಧರಿಸಿ ಕತೆ ಬರೆಯಲಾಗಿದೆ. ಯುವಕ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಜೀವನದ ವಿವರಣೆಯಿದೆ. ಅಲ್ಲಿ ವರ್ಣಭೇದ ನೀತಿಯ ಕುರಿತು ನಡೆಸಿದ ಹೋರಾಟವೇ ಚಿತ್ರದ ತಿರುಳು. ರಜಿತ್ ಕಪೂರ್ ಅವರು ಇಲ್ಲಿ ಗಾಂಧಿ ಪಾತ್ರವನ್ನು ಮಾಡಿದ್ದು, ಪಲ್ಲವಿ ಜೋಶಿ ಕಸ್ತೂರ್‌ಬಾ ಅವರ ಪಾತ್ರವನ್ನು ಮಾಡಿದ್ದಾರೆ.
ಗಾಂಧಿ ಇಸ್ ಮೈ ಫಾದರ್ | ೨೦೦೭ರಲ್ಲಿ ಬಿಡುಗಡೆ
ಈ ಸಿನಿಮಾ ಮಹಾತ್ಮಾ ಗಾಂಧಿಯ ಕುರಿತ ಭಿನ್ನ ಚಲನಚಿತ್ರ. ಇದು ಗಾಂಧಿ ಮತ್ತು ಅವರ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಬಂಧದ ವಿಷಯ ವಸ್ತು ಹೊಂದಿದೆ. ಹರಿಲಾಲ್ ಗಾಂಧಿ ಅವರ ಆತ್ಮಕತೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ದರ್ಶನ್ ದಾರಿವಾಲ್ ಗಾಂಧಿ ಪಾತ್ರ ಮಾಡಿದ್ದರೆ, ಅಕ್ಷಯ್ ಖನ್ನಾ ಅವರು ಹರಿಲಾಲ್ ಗಾಂಧಿಯ ಪಾತ್ರ ಮಾಡಿದ್ದರು. ಅನಿಲ್ ಕಪೂರ್ ಸಿನಿಮಾ ನಿರ್ಮಿಸಿದ್ದು, ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶನ ಮಾಡಿದ್ದಾರೆ.
ಹೇ ರಾಮ್ | ೨೦೦೦ರಲ್ಲಿ ಬಿಡುಗಡೆ
ಕಮಲ್ ಹಾಸನ್ ಅವರು ನಿರ್ಮಾಣ ಮಾಡಿ ನಿರ್ದೇಶನ ಮಾಡಿರುವ ಸಿನಿಮಾ ಇದು. ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಆದರೆ, ವಿದೇಶಿ ಸಿನಿಮಾಗಳ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ನಾಸಿರುದ್ದೀನ್ ಶಾ ಹಾಗೂ ಕಮಲ್‌ಹಾಸನ್ ಹಾಗೂ ರಾಣಿ ಮುಖರ್ಜಿ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ. ನಾಸಿರುದ್ದೀನ್ ಅವರು ಗಾಂಧಿ ಪಾತ್ರವನ್ನು ಮಾಡಿದ್ದರೆ, ಕಮಲ್ ಹಾಸನ್ ಅವರು ಸಾಕೇತ್ ರಾಮ್ ಎಂಬ ಹಿಂದೂ ಮೂಲಭೂತವಾದಿಯ ಪಾತ್ರ ಮಾಡಿದ್ದರು. ಸ್ವಾತಂತ್ರ್ಯ ಬಳಿಕ ನಡೆದ ದೇಶ ವಿಭಜನೆಯ ಕತೆಯನ್ನು ಇದು ಹೊಂದಿದೆ.
ಲಗೆ ರಹೋ ಮುನ್ನಾ ಭಾಯಿ | ೨೦೦೬ರಲ್ಲಿ ಬಿಡುಗಡೆ
ಬಾಲಿವುಡ್ ನಟ ಸಂಜಯ್ ದತ್ ಅವರು ನಾಯಕ ನಟನಾಗಿ ನಟಿಸಿದ ಸಿನಿಮಾವಿದು. ಇದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಪಟ್ಟ ಕತೆಯನ್ನು ಹೊಂದಿಲ್ಲ. ಬದಲಾಗಿ ಮುನ್ನಾ ಭಾಯಿ ಎಂಬಿಬಿಎಸ್ ಎಂಬ ಸೂಪರ್‌ಹಿಟ್ ಸಿನಿಮಾದ ಸೀಕ್ವೆಲ್ (ಮುಂದುವರಿದ ಭಾಗ). ಆ ಸಿನಿಮಾದಲ್ಲಿ “ಗಾಂಧಿಗಿರಿ’ ಎಂಬ ಹೊಸ ಫಿಲಾಸಫಿ ಭಾರತದಲ್ಲಿ ಜನಪ್ರಿಯವಾಗಿತ್ತು. ಅದನ್ನೇ ಇಲ್ಲಿ ಮುಂದುವರಿಸಲಾಗಿದೆ. ಅಂಡರ್‌ವರ್ಲ್ಡ್ ಡಾನ್ ಒಬ್ಬ ಮಹಾತ್ಮ ಗಾಂಧಿಯ ತತ್ವಕ್ಕೆ ಬದ್ಧನಾಗುವುದು ಹಾಗೂ ಅವರ ಆದರ್ಶಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಕತೆಯಿದೆ. ವಿದೂ ವಿನೋದ್ ಚೋಪ್ರಾ ನಿರ್ಮಾಣದ ಈ ಸಿನಿಮಾವನ್ನು ರಾಜ್‌ಕುಮಾರ್ ಇರಾನಿ ನಿರ್ದೇಶನ ಮಾಡಿದ್ದಾರೆ. ಇದಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ದೊರಕಿತ್ತು. ಮರಾಠಿ ನಟ ದಿಲೀಪ್ ಪ್ರಭಾವಲ್ಕರ್ ಅವರು ಗಾಂಧಿ ಪಾತ್ರ ಮಾಡಿಸಿದ್ದರು.
ಮೈನೇ ಗಾಂಧಿ ಕೊ ನಹೀ ಮಾರಾ | ೨೦೦೫ರಲ್ಲಿ ಬಿಡುಗಡೆ
ಜಾನು ಬರುವಾ ನಿರ್ಮಿಸಿ ನಿರ್ದೇಶಿಸಿದ ಚಲನ ಚಿತ್ರವಿದು. ಅನುಪಮ್ ಖೇರ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ಇದಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಾಧಿಸಿತ್ತು. ಮಾನಸಿಕ ಸಮಸ್ಯೆ ಹೊಂದಿರುವ ಹಿಂದಿ ಉಪನ್ಯಾಸಕರೊಬ್ಬರು ಗಾಂಧಿಯನ್ನು ಕೊಂದ ಆರೋಪವನ್ನು ತಮ್ಮ ಮೇಲೆ ಹೊರಿಸಲಾಗಿದೆ ಎಂಬ ಭ್ರಮೆಗೆ ಬೀಳುವುದು ಹಾಗೂ ಅದರಿಂದ ಮುಕ್ತರಾಗುವ ಸಂದರ್ಭವನ್ನು ಚಿತ್ರಿಸಲಾಗಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ | ೨೦೧೦ರಲ್ಲಿ ಬಿಡುಗಡೆ
ಕೇರಳದ ಸೂಪರ್‌ಸ್ಟಾರ್ ಮಮೂಟ್ಟಿ ಅವರು ನಟನೆಯಲ್ಲಿ ಮೂಡಿ ಬಂದಿರುವ ಈ ಸಿನಿಮಾ ಸಂವಿಧಾನ ಶಿಲ್ಪಿ ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತ ಕತೆ ಹೊಂದಿದೆ. ಸಂವಿಧಾನ ರಚನೆ ಸೇರಿದಂತೆ ನಾನಾ ವಿಷಯಗಳು ಸಿನಿಮಾದಲ್ಲಿ ಹಾದು ಹೋಗುತ್ತದೆ. ಮೋಹನ್ ಗೋಖಲೆ ಗಾಂಧೀಜಿ ಪಾತ್ರವನ್ನು ಮಾಡಿದ್ದಾರೆ. ಆದರೆ, ಅದೇ ಮೊಟ್ಟ ಮೊದಲ ಬಾರಿಗೆ ಗಾಂಧಿಯ ಪಾತ್ರವನ್ನು ಗೊಂದಲಕಾರಿಯಾಗಿ ಚಿತ್ರಿಸಲಾಯಿತು. ಅವರ ನಿರ್ಧಾರಗಳಲ್ಲಿರುವ ಗೊಂದಲಗಳನ್ನು ಪ್ರಸ್ತುತಪಡಿಸಲಾಗಿತ್ತು.
ಇದನ್ನೂ ಓದಿ | ಸವಿಸ್ತಾರ ಅಂಕಣ | ನೆಹರೂ, ಗಾಂಧಿ, ಸಾವರ್ಕರ್ ಇತ್ಯಾದಿ: ನಡೆಯಲಿ ʼಸೀಮೋಲ್ಲಂಘನೆʼ, ನಿಲ್ಲಲಿ ʼಮೂರ್ತಿ ಭಂಜನೆʼ