ನವ ದೆಹಲಿ: ಇಂದು ದೇಶಾದ್ಯಂತ 13 ರಾಜ್ಯಗಳಲ್ಲಿ ಪಿಎಫ್‌ಐ ಸಂಘಟನೆಯ ನಾಯಕರ ಕಚೇರಿ, ಮನೆಗಳ ಮೇಲೆ ಎನ್ಐಎ (ರಾಷ್ಟೀಯ ತನಿಖಾ ದಳ) ದಾಳಿ ನಡೆಸಿದೆ. ಇಂದು ಎನ್ಐಎ ಅಧಿಕಾರಿಗಳು, ಇಡಿ ಅಧಿಕಾರಿಗಳು ಮತ್ತು ಆಯಾ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ರೇಡ್ ಮಾಡಿದ್ದಾರೆ. ಪಿಎಫ್ಐನ 105ಕ್ಕೂ ಹೆಚ್ಚು ಮುಖಂಡರನ್ನು ಅರೆಸ್ಟ್ ಮಾಡಲಾಗಿದೆ.
ಹೀಗೆ ರಾಷ್ಟ್ರವ್ಯಾಪಿ ಎನ್ಐಎ ದಾಳಿ ನಡೆದ ಬೆನ್ನಲ್ಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹೇಳಿಕೆ ಬಿಡುಗಡೆ ಮಾಡಿದೆ ಮತ್ತು ಈ ರೇಡ್ನ್ನು ಖಂಡಿಸಿದೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಿಎಫ್ಐನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ (ಎನ್ಇಸಿ), ‘ಎನ್ಐಎ, ಇಡಿ ತನಿಖಾ ದಳಗಳು ತಮ್ಮ ರಾಷ್ಟ್ರೀಯ, ರಾಜ್ಯಗಳ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ಮಾಡಿದ್ದು ಅನ್ಯಾಯ. ಅವರನ್ನು ಬಂಧಿಸಿದ್ದೂ ತಪ್ಪು. ನಮ್ಮ ಸಂಘಟನೆಯ ಬೆಂಬಲಿಗರು, ಕಾರ್ಯಕರ್ತರ ಮೇಲೆ ಕೂಡ ತನಿಖಾ ದಳಗಳು ದೌರ್ಜನ್ಯ ಎಸಗುತ್ತಿವೆ’ ಎಂದು ಹೇಳಿದೆ.
ಎನ್ಐಎ ನಮ್ಮ ಮೇಲೆ ಮಾಡುತ್ತಿರುವ ಆರೋಪಗಳೆಲ್ಲ ಆಧಾರ ರಹಿತ ಮತ್ತು ಸಂವೇದನೆ ಇಲ್ಲದ್ದು. ಭಯೋತ್ಪಾದಕತೆ ವಾತಾವರಣ ಸೃಷ್ಟಿಸುವ ಉದ್ದೇಶದಿಂದಷ್ಟೇ ಹೀಗೆ ಮಾಡಲಾಗುತ್ತಿದೆ. ಕೇಂದ್ರೀಯ ತನಿಖಾ ದಳಗಳನ್ನು ತನ್ನ ಕೈಗೊಂಬೆಗಳಂತೆ ಬಳಸಿಕೊಳ್ಳುವ ನಿರಂಕುಶವಾದಿಗಳಿಗೆ ನಮ್ಮ ಪಿಎಫ್‌ಐ ಎಂದಿಗೂ ಹೆದರುವುದಿಲ್ಲ, ಶರಣಾಗುವುದಿಲ್ಲ. ನಮ್ಮ ಪ್ರೀತಿಯ ದೇಶದ, ಹಾಳಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಪಡಿಸಲು, ಸಂವಿಧಾನದ ಆಶಯವನ್ನು ಕಾಪಾಡಲು ನಾವು ಸದಾ ಬದ್ಧರಾಗಿರುತ್ತೇವೆ ಎಂದು ಪಿಎಫ್‌ಐ ಹೇಳಿದೆ.
ಪಿಎಫ್‌ಐ ಪ್ರತಿಭಟನೆ
ಇಂದು ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸೇರಿ ಸುಮಾರು 13 ರಾಜ್ಯಗಳಲ್ಲಿ ಎನ್ಐಎ ಅಧಿಕಾರಿಗಳು ಪಿಎಫ್ಐಗೆ ಸೇರಿದ ಸ್ಥಳಗಳನ್ನು ಶೋಧಿಸಿದ್ದಾರೆ. ಅದರ ಬೆನ್ನಲ್ಲೇ ತಮಿಳುನಾಡು, ಕರ್ನಾಟಕದಲ್ಲೆಲ್ಲ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ, ಮಂಗಳೂರಿನಲ್ಲಿ ರಸ್ತೆ ಮೇಲೆ ಧರಣಿ ಕುಳಿತು ಪ್ರತಿಭಟಿಸುತ್ತಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಆಯಾ ರಾಜ್ಯಗಳ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: NIA Raid| ರಾಜ್ಯದಲ್ಲಿ 20 ಪಿಎಫ್‌ಐ ಮುಖಂಡರು ಎನ್‌ಐಎ ವಶದಲ್ಲಿ: ಇನ್ನಷ್ಟು ಮಂದಿಗೆ ಬಲೆ? ವಶದಲ್ಲಿರುವ ನಾಯಕರು ಯಾರು?