Site icon Vistara News

Porsche Crash: ಕಾರು ಅಪಘಾತ; ದುಡ್ಡಿಗಾಗಿ ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆದ ಗುಮಾಸ್ತನ ಬಂಧನ!

Porsche car accident ವಿಸ್ತಾರ ಸಂಪಾದಕೀಯ

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕನು ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, ಅಪಘಾತದಲ್ಲಿ (Porsche Crash) ಇಬ್ಬರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೆ ಹೊಸ ಟ್ವಿಸ್ಟ್‌ಗಳು ಹೊರಬೀಳುತ್ತಿವೆ. ಹಣಕ್ಕಾಗಿ ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ ಕಾರಣ ಪುಣೆ ಪೊಲೀಸರು (Pune Police) ಇಬ್ಬರು ವೈದ್ಯರನ್ನು ಬಂಧಿಸಿದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಗುಮಾಸ್ತನಾಗಿದ್ದ ಮತ್ತೊಬ್ಬನನ್ನು ಬಂಧಿಸಿದ್ದಾರೆ. ಬಾಲಕನ ರಕ್ತದ ಮಾದರಿಯನ್ನು ಬದಲಿಸಲು, ಸ್ಯಾಂಪಲ್‌ಅನ್ನು ಕಸದಬುಟ್ಟಿಗೆ ಎಸೆದ ಗುಮಾಸ್ತನನ್ನು ಈಗ ಪೊಲೀಸರು ಬಂದಿಸಿದ್ದಾರೆ.

ಮೊದಲು ಬಾಲಕನ ತಂದೆ ವಿಶಾಲ್ ಅಗರ್ವಾಲ್,​ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್​ ಇದ್ದಾರೆ ಎಂದು ಹೇಳಿದ್ದರು. ಇನ್ನು ಬಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಘಟನೆಗೂ ಮುನ್ನ ಆತ ಸ್ನೇಹಿತರ ಜತೆಗೂಡಿ ಬಾರ್‌ನಲ್ಲಿ ಕುಡಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಹಿಸಲಾಗಿತ್ತು. ಇದೆಲ್ಲಾ ನಡೆದ ಬಳಿಕ ಆತ ಮದ್ಯಪಾನ ಮಾಡಿರಲಿಲ್ಲ ಎನ್ನುವ ವರದಿ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಇದೀಗ ವೈದ್ಯರು ದುಡ್ಡಿನ ಆಸೆಗೆ ಬಿದ್ದು ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರಿತ ಪೊಲೀಸರು ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.

ಕಾರು ಅಪಘಾತದ ವಿಡಿಯೊ

“ಮೇ 19ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲಕನ ರಕ್ತದ ಮಾದರಿಯನ್ನು ಸಾಸೂನ್‌ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಆ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆಯಲಾಗಿದೆ. ಫೊರೆನ್ಸಿಕ್‌ ಲ್ಯಾಬ್‌ಗೆ ಮತ್ತೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಲಾಗಿದೆ. ಇಬ್ಬರು ವೈದ್ಯರ ಸೂಚನೆ ಮೇರೆಗೆ ಸಹಾಯಕನೊಬ್ಬನು ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆದಿದ್ದಾನೆ. ಈಗ ಆತನನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆಯ ಸಾಸೂನ್‌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಅಜಯ್‌ ತಾವರೆ ಮತ್ತು ಡಾ. ಶ್ರೀಹರಿ ಹರ್ನೂರ್‌ ಆರೋಪಿಯ ರಕ್ತದ ಮಾದರಿಯನ್ನೇ ಬದಲಿಸಿದ್ದಾರೆ. ಆಮೂಲಕ ಈ ಪ್ರರಕಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅವರಿಬ್ಬರನ್ನೂ ಇದೀಗ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಪ್ರಕರಣವನ್ನು ಕ್ರೈಂ ಬ್ರ್ಯಾಂಚ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಎರವಾಡ ಪೊಲೀಸ್‌ ಠಾಣೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.

ಕೆಲ ದಿನಗಳ ಹಿಂದೆ ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತರಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮೃತಪಟ್ಟಿದ್ದರು. ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ಬಾಲಕನನ್ನು ಬಂಧಿಸಿದ್ದರು. ಬಳಿಕ ಬಾಲಕನ ತಂದೆ ವಿಶಾಲ್​ ಅಗರ್ವಾಲ್​ ಹಾಗೂ ಬಾಲಕನ ಅಜನನ್ನು ಕೂಡ ಬಂಧಿಸಿದ್ದಾರೆ.

ಇದನ್ನೂ ಓದಿ: Porsche Crash: ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಬಾಲಕನಿಗೆ ಪೋರ್ಶೆ ಕಾರು ಸಿಕ್ಕಿದ್ದು ʼಬರ್ತ್‌ಡೇ ಗಿಫ್ಟ್‌ʼ!

Exit mobile version