Site icon Vistara News

Postal Ballot: ಅನಾರೋಗ್ಯದ ಕಾರಣ ಅಂಚೆ ಮತದಾನ ಕೋರಿ 78ರ ಅಜ್ಜಿ ಅರ್ಜಿ; ಬೇಡವೆಂದ ಸುಪ್ರೀಂ!

Postal Ballot

Postal ballot voting: Supreme Court refuses to entertain plea by 78-year-old woman

ನವದೆಹಲಿ: ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಕಾರಣ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅಂಚೆ ಮತದಾನಕ್ಕೆ (Postal Ballot) ಅವಕಾಶ ಮಾಡಿಕೊಡಬೇಕು ಎಂದು ಛತ್ತೀಸ್‌ಗಢದ 78 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ. ಇದರಿಂದಾಗಿ, ಅನಾರೋಗ್ಯವಿದ್ದರೂ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂಬ ಹಂಬಲ ಹೊಂದಿದ್ದ ಸರಳ ಶ್ರೀವಾಸ್ತವ ಎಂಬ ಅಜ್ಜಿಗೆ ನಿರಾಸೆಯಾದಂತಾಗಿದೆ.

ಛತ್ತೀಸ್‌ಗಢದ ಬಿಲಾಸ್‌ಪುರ ನಿವಾಸಿಯಾದ ಸರಳ ಶ್ರೀವಾಸ್ತವ ಪರ ಹಿರಿಯ ವಕೀಲ ಗೌರವ್‌ ಅಗರ್ವಾಲ್‌ ವಾದ ಮಂಡಿಸಿದರು. “ಮಹಿಳೆಯು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಚುನಾವಣೆ ಆಯೋಗದ ನಿಯಮಗಳ ಪ್ರಕಾರ ಮಹಿಳೆಯು ಅಂಚೆ ಮತದಾನ ಮಾಡಲು ಅರ್ಹರು” ಎಂದು ಹೇಳಿದರು. ಆದರೆ, ನ್ಯಾಯಮೂರ್ತಿಗಳಾದ ಬೆಲಾ ಎಂ. ತ್ರಿವೇದಿ ಹಾಗೂ ಜಸ್ಟಿಸ್‌ ಪಂಕಜ್‌ ಮಿತ್ತಲ್‌ ಅವರಿದ್ದ ಪೀಠವು ಅರ್ಜಿಯನ್ನು ತಿರಸ್ಕರಿಸಿತು.

“ಬಿಲಾಸ್‌ಪುರದಲ್ಲಿ ಮೇ 7ರಂದೇ ಮತದಾನ ಮುಕ್ತಾಯಗೊಂಡಿದೆ. ಮತದಾನ ಮುಗಿದು ಹಲವು ದಿನಗಳ ನಂತರ ಅಂಚೆ ಮತದಾನಕ್ಕೆ ಅವಕಾಶ ನೀಡಬೇಕು ಎಂದರೆ ಆಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಮೊದಲೇ ಅರ್ಜಿ ಸಲ್ಲಿಸಬೇಕು. ಅಂಚೆ ಮತದಾನಕ್ಕೆ ಹಲವು ಪ್ರಕ್ರಿಯೆಗಳಿವೆ. ಅವುಗಳೆಲ್ಲವೂ ಸಮಯಕ್ಕೆ ಅನುಸಾರವಾಗಿ ಆಗಬೇಕು. ಅಷ್ಟಕ್ಕೂ, ಭಾರತದಲ್ಲಿ ಪ್ರತಿಯೊಬ್ಬರಿಗೂ ಮನೆಯಲ್ಲಿ ಕುಳಿತೇ ಮತದಾನ ಮಾಡುವ ಉಮೇದಿ ಇದೆ” ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಸರಳ ಶ್ರೀವಾಸ್ತವ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಂಚೆ ಮತದಾನದ ಮೂಲಕವಾದರೂ ಹಕ್ಕು ಚಲಾಯಿಸಬೇಕು ಎಂದು ಬಯಸಿದ್ದರು. ಇದೇ ಕಾರಣಕ್ಕಾಗಿ ಅವರು ಏಪ್ರಿಲ್‌ 29ರಂದೇ ಛತ್ತೀಸ್‌ಗಢ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೇ 6ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಈಗ ಸುಪ್ರೀಂ ಕೋರ್ಟ್‌ ಕೂಡ ಅರ್ಜಿಯನ್ನು ತಿರಸ್ಕರಿಸಿದೆ. ಒಟ್ಟಿನಲ್ಲಿ, ಯುವಕರೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡದ, ಜಾಗೃತಿ ಮೂಡಿಸಿದರೂ ಕೇಳದಂತಹ ಸಂದರ್ಭದಲ್ಲಿ, ಮನೆಯಿಂದಲಾದರೂ ಹಕ್ಕು ಚಲಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋದ ಅಜ್ಜಿಯ ಆಶಯವಂತೂ ಒಳ್ಳೆಯದೇ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Exit mobile version