Site icon Vistara News

Poster War | ಚುನಾವಣಾ ಪ್ರಚಾರ ಜೋರು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ಪೋಸ್ಟರ್ ವಾರ್!

Poster War

ಶಿಮ್ಲಾ: ನ.12ರಂದು ಮತದಾನ ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಜೋರಾಗಿದೆ(Poster War). ಶಿಮ್ಲಾದ ಮಾಲ್‌ ರೋಡ್‌ನಲ್ಲಿರುವ ಮಲ್ಟಿ ಸ್ಟೋರಿ ಬಿಲ್ಡಿಂಗ್ ಈಗ ರಾಜಕೀಯ ಪಕ್ಷಗಳ ಪೋಸ್ಟರ್ ವಾರ್‌ಗೆ ವೇದಿಕೆಯನ್ನು ಒದಗಿಸಿದೆ. ಉಭಯ ಪಕ್ಷಗಳು ಪರಸ್ಪರ ದೋಷಾರೋಪಣೆ ಅಭಿವ್ಯಕ್ತಿಸುವ ಪೋಸ್ಟರ್‌ಗಳನ್ನು ಇಲ್ಲಿ ಕಾಣಬಹುದು!

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಚುನಾವಣೆಯ ಅಬ್ಬರ ವಿಷಯದಲ್ಲಿ ಹಿಮಾಚಲ ಪ್ರದೇಶವು ತೀರಾ ಅಂಥ ಜೋಶ್ ಇರುವ ರಾಜ್ಯವೇನಲ್ಲ. ಪಶ್ಚಿಮ ಬಂಗಾಳ ಅಥವಾ ಉತ್ತರ ಪ್ರದೇಶದಲ್ಲಾಗುವ ಚುನಾವಣೆಯನ್ನು ನೀವಿಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ, ಈ ಬಾರಿ ಪ್ರಚಾರ ಕಾವು ಸ್ವಲ್ಪ ಜೋರಾಗಿಯೇ ಇದೆ. ವಿಶೇಷ ಎಂದರೆ, ಪೋಸ್ಟರ್ ವಾರ್‌ಗೆ ವೇದಿಕೆ ಕಲ್ಪಿಸಿರುವ ಬಿಲ್ಡಿಂಗ್ ಪಕ್ಕದಲ್ಲೇ ಕಾಂಗ್ರೆಸ್ ಪಕ್ಷದ ಕಚೇರಿಯೂ ಇದೆ. ಹಾಗೆಯೇ, ಬಿಜೆಪಿ ಕೂಡ ಇದೇ ಪ್ರದೇಶದಲ್ಲಿ ತನ್ನ ಮೀಡಿಯಾ ಕೇಂದ್ರವನ್ನು ಆರಂಭಿಸಿದೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್, ಪಕ್ಷದ ಚಿಹ್ನೆಯೊಂದಿಗೆ ‘ಆ ರಹೀ ಹೈ ಕಾಂಗ್ರೆಸ್’ ಎಂಬ ಒಕ್ಕಣಿಕೆಯುಳ್ಳ ಬೃಹತ್ ಪೋಸ್ಟರ್ (ಕಾಂಗ್ರೆಸ್ ಬರುತ್ತಿದೆ) ಅನ್ನು ಹಾಕಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಅದರಲ್ಲಿ ಪಕ್ಕದಲ್ಲೇ ‘ಜೈರಾಮ್ ಜೀ ಕೇ ಶಪತ್ ಗ್ರಹಣ್ ಮೇ'(ಜೈ ರಾಮ್ ಜೀ ಪದಗ್ರಹಣ ಸಮಾರಂಭಕ್ಕೆ) ಎಂಬ ಬೃಹತ್ ಹೋರ್ಡಿಂಗ್ ಅಳವಡಿಸಿತು. ಆಗ, ಇದಕ್ಕೆ ಪ್ರತಿಯಾಗಿ ಮತ್ತೆ ಕಾಂಗ್ರೆಸ್, ‘ಶಪಥ್ ಕಾ ಸಪ್ನಾ ತೂಟೇಗಾ, ಕ್ಯೂಂಕಿ ಆ ರಹೀ ಹೈ ಕಾಂಗ್ರೆಸ್'(ಪದಗ್ರಹಣದ ಕನಸು ನುಚ್ಚುನೂರಾಗಲಿದೆ, ಯಾಕೆಂದರೆ ಕಾಂಗ್ರೆಸ್ ಬರುತ್ತಿದೆ) ಎಂಬ ಒಕ್ಕಣಿಕೆಯುಳ್ಳ ಹೋರ್ಡಿಂಗ್ ಹಾಕಿತು. ಅಷ್ಟೇ ವೇಗವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ‘ಫಿರ್‌ ಸೇ ವಿಪಕ್ಷ ಮೇ’ (ಮತ್ತೆ ಪ್ರತಿಪಕ್ಷವಾಗಿ) ಎಂಬ ಹೋರ್ಡಿಂಗ್ ಅನ್ನು ಕಾಂಗ್ರೆಸ್ ಹೋರ್ಡಿಂಗ್ ಪಕ್ಕದಲ್ಲೇ ಹಾಕಿತು.

ಈ ಹೋರ್ಡಿಂಗ್‌ಗಳ ಕಾರುಬಾರುದಿಂದಾಗಿ ಮಾಲ್‌ರೋಡ್‌ನ ಮಲ್ಟಿ ಸ್ಟೋರಿ ಬಿಲ್ಡಿಂಗ್ ಹೆಚ್ಚು ಪ್ರಸಿದ್ಧಿಯಾಗತೊಡಗಿದೆ. ಪ್ರಮುಖ ಸ್ಥಳದಲ್ಲಿರುವ ಈ ಕಟ್ಟಡವನ್ನು ತಮ್ಮ ಪ್ರಚಾರಕ್ಕಾಗಿ ಉಭಯ ಪಕ್ಷಗಳು ಬಳಸಿಕೊಳ್ಳುತ್ತಿವೆ.

ಇದನ್ನೂ ಓದಿ | Opinion Poll | ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?

Exit mobile version