ಬೆಂಗಳೂರು: ಚಂದ್ರಯಾನ-3 ರ (Chandrayana-3) ಯಶಸ್ವಿಗೆ ಭಾರತವೇ ಹಾರೈಸುತ್ತಿರುವ ಸಂದರ್ಭದಲ್ಲಿ ಯೋಜನೆ ಬಗ್ಗೆ ವ್ಯಂಗ್ಯ ಭರಿತ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದ ನಟ ಪ್ರಕಾಶ್ ರೈ (Prakash Raj) ಅವರತ್ತ ನೆಟ್ಟಿಗರು (Netizens) ಬಗೆಬಗೆಯಲ್ಲಿ ಟೀಕಾ ಪ್ರಹಾರ ಮಾಡಿದ್ದಾರೆ. ನಿರಂತರ ಟೀಕೆಗಳು ಬರುತ್ತಿದ್ದಂತೆ ಎಚ್ಚೆತ್ತುಕೊಂಡ ನಟ ಇದೀಗ ತಮ್ಮ ಟ್ವೀಟ್ (ಹೊಸ ಎಕ್ಸ್) ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅದೊಂದು ಜೋಕ್ (Joke) ಎಂಬುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಲುಂಗಿ ಮತ್ತು ಶರ್ಟ್ ಧರಿಸಿದ ವ್ಯಕ್ತಿಯ ಫೋಟೋ ಧರಿಸಿದ್ದ ವ್ಯಕ್ತಿಯೊಬ್ಬರು ಚಂದ್ರ ಲೋಕದಲ್ಲಿ ಚಹಾ ಮಾರುತ್ತಿದ್ದಾರೆ ಎಂಬ ಚಿತ್ರ ಹಂಚಿಕೊಂಡ ಬಳಿಕ ನಟ ಪ್ರಕಾಶ್ ರೈ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ನಲ್ಲಿ ಇದ್ದರು. ಆ ಪೋಸ್ಟ್ಗೆ ಅವರು “#VikramLander ಚಂದ್ರನಿಂದ ಬರುವ ಮೊದಲ ಚಿತ್ರ” ಎಂದು ಶೀರ್ಷಿಕೆಯೂ ಕೊಟ್ಟಿದ್ದರು. ಪ್ರಕಾಶ್ ರೈ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಚಾಯ್ ವಾಲಾ’ ಎಂದು ಕರೆದಿದ್ದರು. ಜತೆಗೆ ಅವರು ಇಸ್ರೋ ಅಧ್ಯಕ್ಷ ಶಿವನ್ ಅವರಿಗೂ ಹಾಸ್ಯ ಮಾಡಿದ್ದರು. ಪ್ರಧಾನಿ ಹಾಗೂ ಇಸ್ರೋ ಅಧ್ಯಕ್ಷರನ್ನು ವ್ಯಂಗ್ಯ ಮಾಡಲು ಹೆಮ್ಮೆಯ ಸಂದರ್ಭವನ್ನು ದುರುಪಯೋಗಮಾಡಿಕೊಂಡಿದ್ದಾರೆ ಎಂಬುದಾಗಿ ನೆಟ್ಟಿಗರ ಆಕ್ಷೇಪವೆತ್ತಿದ್ದರು. ಪ್ರಕಾಶ್ ರೈ ಅವರದ್ದು ಕುರುಡು ದ್ವೇಷ ಎಂಬುದಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಿ. ಟಿ ರವಿ ಟೀಕೆ
ಚಂದ್ರಯಾನ-3 ಕುರಿತು ನಟ ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ ಕುರಿತು ಮಾಜಿ ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ‘ಕೆಲವರಿಗೆ ಭಾರತದ ಅಸ್ಮಿತೆಯ ಬಗ್ಗೆ ಬೇಸರವಿದೆ.. ಭಾರತ ಇದೇ ರೀತಿಯಲ್ಲಿ ಮುಂದುವರಿಯುತ್ತಾ ಸಾಗುವುದು ಅವರಿಗೆ ಅಸಹನೆ, ಸಂಕಟ ಉಂಟು ಮಾಡುತ್ತಾರೆ. ಹೀಗಾಗಿ ಭಾರತದ ಯಶಸ್ಸನ್ನು ಸಹಿಸದವರು ಈ ರೀತಿ ವ್ಯಕ್ತಪಡಿಸುತ್ತಾರೆ. ಭಾರತಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ಸಿಕ್ಕಿದ್ರೆ ಕೆಲವರಿಗೆ ಹಿಂದೆ ಹಸಿರು ಮೆಣಸಿನಕಾಯಿ ಇಟ್ಟ ಹಾಗೆ ಆಗುತ್ತದೆ ಎಂದು ಹೇಳಿದ್ದರು.
ಪ್ರಕಾಶ್ ರೈ ಸ್ಪಷ್ಟನೆ ಏನು?
ಹೊಸ ಟ್ವೀಟ್ ಮಾಡಿರುವ ಪ್ರಕಾಶ್ ಟ್ವೀಟ್ ಮಾಡಿ, ದ್ವೇಷವು ದ್ವೇಷವನ್ನು ಮಾತ್ರ ನೋಡುತ್ತದೆ. ನಾನು #Armstrong ಕುರಿತ ಜೋಕ್ ಅನ್ನು ಉಲ್ಲೇಖಿಸಿದ್ದೇನೆ. ನಮ್ಮ ಕೇರಳ ಚಾಯ್ ವಾಲಾ ಕುರಿತ ಜೋಕ್ ಇದು. ಟ್ರೋಲ್ ಗಳು ಯಾವ ಚಾಯ್ ವಾಲಾ ಎಂದು ಪರಿಭಾವಿಸಿದರು. ನಿಮಗೆ ಜೋಕ್ ಅರ್ಥ ಮಾಡಿಕೊಳ್ಳಲು ಆಗಿದಿದ್ದರೆ ನೀವೇ ಒಂದು ಜೋಕ್. #justasking ಇನ್ನಷ್ಟು ಬೆಳೆಯಿರಿ ಎಂದು ಬರೆದುಕೊಂಡಿದ್ದಾರೆ.
ಪ್ರಕಾಶ್ ರೈ ಬಗ್ಗೆ ಆಕ್ಷೇಪವೇಕೆ?
ಚಂದ್ರಯಾನ 3 (Chandrayaan 3) ಮಿಷನ್ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ (K Sivan) ಅವರನ್ನು ಅಣಕ ಮಾಡಲು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಪ್ರಕಾಶ್ ರೈ ಫೋಟೊ ಹಂಚಿಕೊಂ ಡಿದ್ದಾರೆ ಎಂಬುದಾಗಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದರು.
ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್ ಅವರ ಕುರಿತ ವ್ಯಂಗ್ಯಚಿತ್ರವನ್ನು ಪ್ರಕಾಶ್ ರಾಜ್ ಹಂಚಿಕೊಂಡಿದ್ದು, ಇದರಲ್ಲಿ ಚಾಯ್‌ವಾಲಾ ಎಂಬುದಾಗಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವ್ಯಂಗ್ಯ ಮಾಡಿದಂತಿದೆ. “ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಅವರು ಬರೆದುಕೊಂಡಿದ್ದರು. ಚಂದ್ರಯಾನ 3 ಮಿಷನ್ ಯಶಸ್ಸಿಗೆ ದೇಶವೇ ಪ್ರಾರ್ಥಿಸುವ ಹೊತ್ತಿನಲ್ಲಿ ಪ್ರಕಾಶ್ ರಾಜ್ ಅವರು ಇಂತಹ ಫೋಟೊ ಶೇರ್ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯೊಬ್ಬರು, “ಇದು ರೋಗಿಷ್ಟ ಮನಸ್ಥಿತಿಯ ಪರಮಾವಧಿ” ಎಂದಿದ್ದಾರೆ. ರಾಮ್ ಎಂಬುವವರು ಪ್ರತಿಕ್ರಿಯಿಸಿ, “ಇಸ್ರೋ ಉನ್ನತ ಭಾರತವನ್ನು ಪ್ರತಿನಿಧಿಸುತ್ತದೆ. ಸಂಪನ್ಮೂಲ ಕೊರತೆ, ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆಯೂ ಇಸ್ರೋ ಮಹತ್ತರವಾದುದನ್ನು ಸಾಧಿಸಲು ಹೊರಟಿದೆ. ಆದರೆ, ಈ ವ್ಯಕ್ತಿಯು ಭಾರತದ ಬಗ್ಗೆ ಕೆಟ್ಟದ್ದನ್ನೇ ಹೇಳುತ್ತಾನೆ” ಎಂದು ಕುಟುಕಿದ್ದಾರೆ.
ಕ್ಲಾಸ್ ತೆಗೆದುಕೊಂಡ ಜನ
“ಆತ್ಮವಿಶ್ವಾಸವನ್ನು ಕಳೆದುಕೊಂಡು ನಿಸ್ತೇಜನಾದ ವ್ಯಕ್ತಿ ಮಾತ್ರ ಹೀಗೆ ಬೇರೆಯವರ ಬಗ್ಗೆ ವೈಯಕ್ತಿಕವಾಗಿ ಹೀಗಳಿಯಲು ಸಾಧ್ಯ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಷ್ಟೇ ಅಲ್ಲ, “ಪ್ರಕಾಶ್ ರಾಜ್ ನಿಮಗೆ ನಾಚಿಕೆಯಾಗಬೇಕು”, “ನಿನಗೆ ಸ್ವಲ್ಪವಾದರೂ ನಾಚಿಕೆಯಾಗಬೇಕು”, “ದೇಶದ ಇಸ್ರೋ ಬಗ್ಗೆ ಹೆಮ್ಮೆಪಡಬೇಕು, ದ್ವೇಷವಲ್ಲ”, “ನಿಮಗೇಕೆ ಅಷ್ಟು ಹೊಟ್ಟೆ ಉರಿ” ಎಂಬುದು ಸೇರಿ ಸಾವಿರಾರು ಜನ ಹಲವು ರೀತಿಯಲ್ಲಿ ಪ್ರಕಾಶ್ ರಾಜ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.