Site icon Vistara News

Pralay Missile: ಭಾರತದ ಹೊಸ ಕ್ಷಿಪಣಿ ʼಪ್ರಲಯ್ʼ ಯಶಸ್ವಿ ಉಡಾವಣೆ

Pralay missile

ಹೊಸದಿಲ್ಲಿ: ಭಾರತವು ಮಂಗಳವಾರ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ತನ್ನ ʼಪ್ರಲಯ್’ ಕ್ಷಿಪಣಿಯನ್ನು (Pralay Missile) ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾಯಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಲಯ್‌, ಇದು ಭೂ ಮೇಲ್ಮೈಯಿಂದ ಭೂ ಮೇಲ್ಮೈಗೆ ಉಡಾಯಿಸುವ ಅಲ್ಪದೂರದ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಆರ್‌ಬಿಎಂ) ಆಗಿದೆ. ನೆರೆಯ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ದೇಶದ ರಕ್ಷಣಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.

ಬೆಳಿಗ್ಗೆ 9.50ರ ಸುಮಾರಿಗೆ ಉಡಾವಣೆಯಾದ ಕ್ಷಿಪಣಿಯು ತನ್ನ ಎಲ್ಲಾ ಯೋಜಿತ ಉದ್ದೇಶಗಳನ್ನು ಪೂರೈಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ಟ್ರ್ಯಾಕಿಂಗ್ ಉಪಕರಣಗಳು ಕರಾವಳಿಯ ಉದ್ದಕ್ಕೂ ಕ್ಷಿಪಣಿಯ ಪಥವನ್ನು ಮೇಲ್ವಿಚಾರಣೆ ಮಾಡಿತು.

ʼಪ್ರಲಯ್’ 350-500 ಕಿ.ಮೀ ಕಿರು-ಶ್ರೇಣಿಯ, ಭೂ ಮೇಲ್ಮೈಯಿಂದ ಮೇಲ್ಮೈಗೆ ಸಾಗುವ, 500-1,000 ಕೆಜಿ ಪೇಲೋಡ್ ಸಾಮರ್ಥ್ಯದ ಕ್ಷಿಪಣಿಯಾಗಿದೆ. ಘನ ಇಂಧನಮೂಲದ ಈ ಯುದ್ಧಭೂಮಿ ಕ್ಷಿಪಣಿಯು ಪೃಥ್ವಿ ಡಿಫೆನ್ಸ್ ವೆಹಿಕಲ್ ಅನ್ನು ಆಧರಿಸಿದೆ. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಮತ್ತು ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಉದ್ದಕ್ಕೂ ನಿಯೋಜನೆಗಾಗಿ ಪ್ರಳಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಉಕ್ರೇನ್‌ನೊಂದಿಗೆ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಬಳಸಲಾದ ಚೀನಾದ ʼಡಾಂಗ್ ಫೆಂಗ್ 12′ ಮತ್ತು ರಷ್ಯಾದ ʼಇಸ್ಕಾಂಡರ್’ನೊಂದಿಗೆ ʼಪ್ರಲಯ್’ ಕ್ಷಿಪಣಿಯನ್ನು ಹೋಲಿಸಬಹುದು ಎಂದು ಅವರು ಹೇಳಿದರು. ಪಾಕಿಸ್ತಾನವು ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದೆ.

ಇದನ್ನೂ ಓದಿ: Israel Palestine War: ಏನಿದು ಐರನ್ ಡೋಮ್? ಇಸ್ರೇಲ್‌ನ ಈ ವ್ಯವಸ್ಥೆ ಕ್ಷಿಪಣಿ ದಾಳಿಯನ್ನು ಹೇಗೆ ತಡೆಯುತ್ತದೆ?

Exit mobile version