ಬೆಂಗಳೂರು: ಮಂಬರುವ ಲೋಕಸಭೆ ಚುನಾವಣೆಯಲ್ಲಾದರೂ ಸ್ವಲೊ ಚೇತರಿಕೆ ಕಂಡು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸವಾಲೊಡ್ಡುವ ಕಾಂಗ್ರೆಸ್ ಪಕ್ಷದ ಆಸೆ ಈ ಬಾರಿಯೂ ಈಡೇರುವ ಸಾಧ್ಯತೆ ಮತ್ತೂ ಕಡಿಮೆಯಾಗಿದೆ. ತಮ್ಮನ್ನು ಉನ್ನತಾಧಿಕಾರ ಕ್ರಿಯಾ ಸಮಿತಿ -2024ಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂಬ ಕಾಂಗ್ರೆಸ್ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿರುವುದಾಗಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್(PK) ತಿಳಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಅತ್ಯಂತ ಆಳವಾದ ಸಮಸ್ಯೆ ಇದೆ ಎಂದೂ PK ಹೇಳಿರುವುದು ಸಮಸ್ಯೆಯ ಗಂಭೀರತೆಯನ್ನು ಮತ್ತೂ ಹೆಚ್ಚಿಸಿದೆ.
2014ರಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ಪ್ರಚಾರ ಯೋಜನೆ ರೂಪಿಸುವ ಹೊಣೆಯನ್ನು ಪಿಕೆ ಹೊತ್ತಿದ್ದರು. ಚಾಯ್ ಪೆ ಚರ್ಚಾ, ರನ್ ಫಾರ್ ಯೂನಿಟಿ ಸೇರಿ ಅನೇಕ ವಿನೂತನ ಪ್ರಚಾರ ಅಭಿಯಾನಗಳ ಮೂಲಕ ಮೋದಿ ಬ್ರ್ಯಾಂಡ್ ಹೊಳಪು ಹೆಚ್ಚಿಸಿದರು.
ನಂತರ ಬಿಜೆಪಿ ಸಖ್ಯ ತೊರೆದು ಸಮಾಜವಾದಿ ಪಕ್ಷ, ಪಂಜಾಬ್ ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳ ಕತೆಗೆ ಚುನಾವಣಾ ಪ್ರಚಾರ ಕಾರ್ಯ ಕೈಗೆತ್ತಿಕೊಂಡಿದ್ದರು. 2004ರಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ 2014ರಲ್ಲಿ ಕೆಳಗಿಳಿಯಿತು. ಕಳೆದ ಎರಡು ಚುನಾವಣೆಗಳಲ್ಲೂ ಮೋದಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲು ಸಾಧ್ಯವಾಗಿಲ್ಲ. ಅದಕ್ಕಿಂತಲೂ ಮುಖ್ಯವಾಗಿ, ಪ್ರತಿ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ವರ್ಚಸ್ಸು ಕುಗ್ಗುತ್ತಿದೆ.
ಲೋಕಸಭೆಯಷ್ಟೆ ಅಲ್ಲದೆ, ಈ ಹತ್ತು ವರ್ಚದಲ್ಲಿ ಎದುರಾದ ಬಹುತೇಕ ವಿಧಾನಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ರಾಜಸ್ಥಾನ ಸೇರಿ ಕೆಲವೆಡೆ ಪಕ್ಷ ಅಧಿಕಾರಕ್ಕೆ ಬಂದಿದೆಯಾದರೂ ಅದು ಸ್ಥಳೀಯ ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಘಟಕದ ಸಾಮರ್ಥ್ಯವನ್ನು ಆಧರಿಸಿದೆ. ಒಟ್ಟಾರೆ ದೇಶದಲ್ಲಿ ರಾಜ್ಯ ಘಟಕಗಳಿಗೆ ಶಕ್ತಿ ನೀಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಉಳಿದುಕೊಂಡಿಲ್ಲ.
ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಆಕ್ರಮಣಕಾರಿ ಪ್ರಚಾರ ಆಂದೋಲನ ಒಂದು ಕಾರಣ. ಅದರ ಜತೆಗೆ, ತನ್ನ ಕಳಪೆ ಪ್ರದರ್ಶನವನ್ನು ಒಪ್ಪಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್‌ನ ಹಿಂಜರಿಗೆ ಹೆಚ್ಚಿನ ಪಾತ್ರ ವಹಿಸಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿಯವರಿಗೆ ಈ ವಿಚಾರದಲ್ಲಿ ಬದ್ಧತೆ ಇಲ್ಲದಿರುವುದು ಕಂಡುಬಂದಿದೆ.
ದೇಶದ ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿ, ದೇಶದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿದೇಶಕ್ಕೆ ರಜೆ ಕಳೆಯಲು ಹೋಗುವ ರಾಹುಲ್ ಅಭ್ಯಾಸ ಒಂದು ಉದಾಹರಣೆ. ರೈತರು, ದಲಿತರು, ಅಲ್ಪಸಂಖ್ಯಾತರು ಸೇರಿ ಕಾಂಗ್ರೆಸ್ ಓಟ್ ಬ್ಯಾಂಕ್ ಸಮುದಾಯಗಳ ವಿಚಾರಗಳನ್ನೇ ಅರ್ಧಕ್ಕೆ ಕೈಬಿಡುವ ಅಭ್ಯಾಸ ಹೊಂದಿದ್ದಾರೆ. ಇದರ ಜತೆಗೆ, ಅನೇಕ ದಶಕಗಳಿಂದ ಕಾಂಗ್ರೆಸ್‌ನಲ್ಲಿ ಬೇರು ಬಿಟ್ಟಿರುವ ಅದರ ನಾಯಕರೇ ಪಕ್ಷಕ್ಕೆ ಭಾರವಾಗಿದ್ದಾರೆ.
ಹೊಸ ನಾಯಕರಿಗೆ ಅವಕಾಶ ನೀಡದೆ, ಸಂಗಟನಾತ್ಮಕ ಬದಲಾವಣೆಗಳಿಗೆ ಹೊಂದಿಕೊಳ್ಳದ ಕಾಂಗ್ರೆಸ್ ವ್ಯವಸ್ಥೆಯನ್ನು ಬದಲಾಯಿಸುವುದು ಬಹು ಕಷ್ಟವಾಗಿದೆ. ಈ ಬಾರಿ 2024ರಲ್ಲಿ ಈ ಸ್ಥಿತಿಯನ್ನು ಸುಧಾರಿಸಲೇಬೇಕು ಎಂದು, ಇಳಿ ವಯಸ್ಸಿನಲ್ಲೂ, ಆರೋಗ್ಯದ ಸಮಸ್ಯೆಯ ನಡುವೆಯೂ ಅನಿವಾರ್ಯವಾಗಿ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಮನಸ್ಸು ಮಾಡಿದ್ದಾರೆ.
ಪ್ರಶಾಂತ್ ಕಿಶೋರ್‌ಗೆ ಆಹ್ವಾನ
ಈ ಉದ್ದೇಶದಿಂದ, ಪ್ರಶಾಂತ್ ಕಿಶೋರ್‌ರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ಪ್ರಿಯಾಂಕ ಗಾಂಧಿ ವಾದ್ರಾ ಸಹಿತ ಇದಕ್ಕೆ ಬೆಂಬಲ ಸೂಚಿಸಿದ್ದರು. 2024ರ ಚುನಾವಣೆಗೆ ಶತಾಯ ಗತಾಯ ಪ್ರಬಲ ಪೈಪೋಟಿ ನೀಡಲೇಬೇಕು ಎಂದು, ಇದಕ್ಕಾಗಿ ವರದಿಯೊಂದನ್ನು ನೀಡಲು ಪ್ರಶಾಂತ್ ಕಿಶೋರ್‌ಗೆ ತಿಳಿಸಲಾಗಿತ್ತು. ಅದರಂತೆ ಏಪ್ರಿಲ್ 16ರಂದು ಪ್ರಶಾಂತ್ ಕಿಶೋರ್ ಅನೇಕ ಶಿಫಾರಸು ಮಾಡಿ ವರದಿ ಸಲ್ಲಿಸಿದರು.
ಈ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮಾಜಿ ಸಚಿವ ಪಿ.ಚಿದಂಬರಂ ನೇತೃತ್ವದ 8 ಸದಸ್ಯರ ಸಮಿತಿಯೊಂದನ್ನು ಸೋನಿಯಾ ಗಾಂಧಿ ರಚಿಸಿದರು. ಈ ಸಮಿತಿ ಏಪ್ರಿಲ್ 22ರಂದು ತನ್ನ ವರದಿ ಸಲ್ಲಿಸಿತು. ಏಪ್ರಿಲ್ 25ರಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ಸೇರಿದ ಕಾಂಗ್ರೆಸಿಗರು ಎರಡು ಗಂಟೆ ಚರ್ಚೆ ನಡೆಸಿದರು. ಕೊನೆಗೆ, 2024ರ ಚುನಾವಣೆಯನ್ನು ಎದುರಿಸಲು ಉನ್ನತಾಧಿಕಾರ ಕ್ರಿಯಾ ಸಮಿತಿಯೊಂದನ್ನು ರಚಿಸುವ ನಿರ್ಧಾರ ಮಾಡಲಾಯಿತು. ಆದರೆ ಪ್ರಶಾಂತ್ ಇಶೋರ್ ಕುರಿತು ಏನನ್ನೂ ಹೇಳಲಿಲ್ಲ. ಮೂಲಗಳ ಪ್ರಕಾರ, ಈ ಸಮಿತಿಗೆ ಪ್ರಶಾಂತ್ ಕಿಶೋರ್ ಅವರನ್ನು ಸದಸ್ಯರಾಗಿ ನೇಮಿಸುವ ನಿರ್ಧಾರವನ್ನು ಕಾಂಗ್ರೆಸ್ ಮಾಡಿತ್ತು.
ಈ ಬೆಳವಣಿಗೆ ಬೆನ್ನಿಗೇ ಮಾರನೆಯ ದಿನ ಟ್ವೀಟ್ ಮಾಡಿದ ಪ್ರಶಾಂತ್ ಕಿಶೋರ್, ತಾವು ಕಾಂಗ್ರೆಸ್ ಪ್ರಸ್ತಾವನೆಯನ್ನು ತಿರಸ್ಕರಿಸುವುದಾಗಿ ಟ್ವೀಟ್ ಮಾಡಿದರು. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವುದಕ್ಕಿಂತಲೂ ಪಕ್ಷಕ್ಕೆ ನಾಯಕತ್ವದ ಅವಶ್ಯಕತೆ ಇದೆ. ಗಂಭೀರ ಪ್ರಯತ್ನದ ಮೂಲಕ, ಪಕ್ಷದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಯನ್ನು ಬಗೆಹರಿಸಲು ಸಂಘಟನಾತ್ಮಕ ಇಚ್ಛಾಶಕ್ತಿ ಬೇಕು ಎಂದು ತಿಳಿಸಿದ್ದರು.
ಹೆಚ್ಚಿನ ಓದಿಗಾಗಿ | Explainer: ಕಾಂಗ್ರೆಸ್ ಉಳಿಸೋಕೆ ಪ್ರಶಾಂತ್ ಕಿಶೋರ್ ಪ್ಲಾನ್ ಏನು?
ಪ್ರಶಾಂತ್ ಕಿಶೋರ್ ತಿರಸ್ಕಾರಕ್ಕೆ ಕಾರಣಗಳು
ಕಾಂಗ್ರೆಸ್‌ನೊಂದಿಗಿನ ಒಪ್ಪಂದವನ್ನು ತಿರಸ್ಕರಿಸಲು ಪ್ರಮುಖವಾಗಿ ನಾಲ್ಕು ಕಾರಣಗಳು ಕೇಳಿಬರುತ್ತಿವೆ.
1.. ಯಜಮಾನಿಕೆ
ತಾವು ನೇರವಾಗಿ ಸೋನಿಯಾ ಗಾಂಧಿಯವರಿಗೆ ವರದಿ ಮಾಡುವಂತಿರಬೇಕು ಎಂದು ಪ್ರಶಾಂತ್ ಕಿಶೋರ್ ಬಯಸಿದ್ದರು. ಆದರೆ, ನೀವು ಉನ್ನತಾಧಿಕಾರ ಕ್ರಿಯಾ ಸಮಿತಿ ಸದಸ್ಯರಾಗಿ, ಸಮಿತಿಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕಾಂಗ್ರೆಸ್ ತಿಳಿಸಿತ್ತು.
2.. ಸಂವಹನ
ಎಲ್ಲ ಸಂವಹನ ಕ್ರಿಯೆಗಳನ್ನೂ ನಿಯಂತ್ರಿಸುತ್ತೇನೆ; ಟಿಕೆಟ್ ನೀಡಲು ದತ್ತಾಂಶಗಳೇ ಆಧಾರ ಎಂದು ಪಿಕೆ ಹೇಳಿದ್ದರು. ಆದರೆ ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಸ್ಥಳೀಯ ಕಾಂಗ್ರೆಸ್ ಘಟಕಗಳು ವಿರೋಧಿಸುತ್ತವೆ ಎಂದು ಕಾಂಗ್ರೆಸ್ ಹೇಳಿತ್ತು
3.. ಚುನಾವಣೆ
2024ರ ಲೋಕಸಭೆ ಮೇಲೆ ಮಾತ್ರವೇ ಗಮನ. ನಡುವೆ ಬರುವ ವಿಧಾನಸಭೆಗಲ್ಲ ಎಂದು ಪ್ರಶಾಂತ್ ಸ್ಪಷ್ಟಪಡಿಸಿದ್ದರು. ಆದರೆ ಇದರಿಂದಾಗಿ ಪಕ್ಷದಲ್ಲಿ ಅನೇಕರ ಅಧಿಕಾರಕ್ಕೆ ಕತ್ತರಿ ಬೀಳುತ್ತದೆ, ಅಸಮಾಧಾನ ಉಂಟಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು
4.. ಮೈತ್ರಿ
ಮೋದಿಯನ್ನು ಸೋಲಿಸಲು ಮಮತಾ, ಜಗನ್, ಕೆಸಿಆರ್ ಮುಂತಾದವರೊಂದಿಗೆ ಮೈತ್ರಿ ಅನಿವಾರ್ಯ ಎಂದು ಪ್ರಶಾಂತ್ ತಿಳಿಸಿದ್ದರು. ಆದರೆ ಇದರಿಂದ ಸ್ಥಳೀಯ ಕಾಂಗ್ರೆಸ್ ಘಟಕಗಳಲ್ಲಿ ಅಸಮಾಧಾನ ಆಗುತ್ತದೆ, ಪಕ್ಷವನ್ನು ಮತ್ತೆ ಕಟ್ಟಲು ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ | ಪಾಟಿದಾರ್ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ