Site icon Vistara News

ಲುಲು ಮಾಲ್‌ನಲ್ಲಿ ಅನಗತ್ಯ ಕಿರಿಕಿರಿ ಮಾಡಿದರೆ ಹುಷಾರ್‌, ಯೋಗಿ ಆದಿತ್ಯನಾಥ್‌ ಎಚ್ಚರಿಕೆ

lulu mall lucknow

ಲಖನೌ: ಕಳೆದ ಜುಲೈ ೧೦ರಂದು ಉದ್ಘಾಟನೆಗೊಂಡ ಲಖನೌದ ಲುಲು ಮಾಲ್‌ ದಿನವೂ ಒಂದೊಂದು ರೀತಿಯ ವಿವಾದಕ್ಕೆ ಒಳಗಾಗುತ್ತಿದೆ. ಅಲ್ಲಿ ಜುಲೈ ೧೨ರಂದು ಕೆಲವರು ನಮಾಜ್‌ ಮಾಡಿದ್ದು ದೊಡ್ಡ ವಿವಾದದ ಬಾಗಿಲನ್ನು ತೆರೆದಿತ್ತು. ಅದರ ಬಳಿಕ ಪ್ರತಿ ದಿನವೂ ಏನಾದರೊಂದು ಕಾರಣಕ್ಕೆ ಮಾಲ್‌ ಸುದ್ದಿಯಲ್ಲಿದೆ. ಕೆಲವರು ಅಲ್ಲಿ ಬಂದು ಪ್ರತಿಭಟನೆ ನಡೆಸಿದರೆ ಮತ್ತೆ ಕೆಲವರು ಸುಂದರ ಕಾಂಡ ಪಠನಕ್ಕೆ ಮುಂದಾಗುತ್ತಿದ್ದಾರೆ.

ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈ ವಿವಾದದಲ್ಲಿ ಮಧ್ಯ ಪ್ರವೇಶ ಮಾಡಿದ್ದು, ಯಾರೂ ಕೂಡಾ ಲುಲು ಮಾಲ್‌ ಬಗ್ಗೆ ಅನಗತ್ಯವಾಗಿ ಹೇಳಿಕೆಗಳನ್ನು ನೀಡಬಾರದು. ಜನರ ಸಂಚಾರಕ್ಕೆ ತೊಂದರೆ ಆಗುವಂತೆ ಪ್ರತಿಭಟನೆಗಳನ್ನು ನಡೆಸಬಾರದು ಎಂದು ಸೂಚಿಸಿದ್ದಾರೆ.
ʻʻಲಖನೌ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡಲು ಪ್ರಯತ್ನಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಆದಿತ್ಯನಾಥ್‌ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ.

ಅವರೇ ಉದ್ಘಾಟಿಸಿದ್ದರು
ಲಖನೌದಲ್ಲಿ ಜುಲೈ ೧೦ರಂದು ಉದ್ಘಾಟನೆಗೊಂಡ ಲುಲು ಮಾಲ್‌ನ್ನು ಸ್ವತಃ ಸಿಎಂ ಆದಿತ್ಯನಾಥ್‌ ಅವರೇ ಅನಾವರಣ ಮಾಡಿದ್ದರು. ಇದು ಉತ್ತರ ಪ್ರದೇಶದ ಅತಿ ದೊಡ್ಡ ಮಾಲ್‌ ಎಂಬ ಹೆಗ್ಗಳಿಕೆ ಹೊಂದಿದೆ. ಲುಲು ಗ್ರೂಪ್‌ ಅಬುಧಾಬಿ ಮೂಲದ್ದು. ಭಾರತೀಯ ಮೂಲದ ಬಿಲಿಯನೇರ್‌ ಯೂಸುಫ್‌ ಅಲಿ ಎಂಎ ಅವರು ಇದನ್ನು ಸ್ಥಾಪಿಸಿದ್ದಾರೆ. ಕೊಚ್ಚಿಯಲ್ಲಿ ಆರಂಭಗೊಂಡ ಈ ಸರಣಿ ಬೆಂಗಳೂರು ಸೇರಿ ಹಲವು ಕಡೆ ವಿಸ್ತರಿಸಿಕೊಂಡಿದೆ.

ಇಲ್ಲಿ ಜುಲೈ ೧೨ರಂದು ಕೆಲವು ಮುಸ್ಲಿಮರು ನಮಾಜ್‌ ಮಾಡಿದ್ದ ವಿಡಿಯೊ ಬಿತ್ತರಗೊಂಡಿತ್ತು. ಇದನ್ನು ಪ್ರತಿಭಟಿಸಿ ಪ್ರದರ್ಶನಗಳು ನಡೆದಿದ್ದವು. ಹಿಂದೂ ಸಂಘಟನೆಗಳು ಸುಂದರ ಕಾಂಡ ಪಠಣಕ್ಕೆ ಮುಂದಾಗಿದ್ದವು. ಈ ನಡುವೆ ಎಚ್ಚೆತ್ತುಕೊಂಡ ಲುಲು ಮಾಲ್‌ ಆಡಳಿತ ಮಂಡಳಿ ʻನಾವು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇವೆ. ಇಲ್ಲಿ ಯಾವುದೇ ಒಂದು ನಿರ್ದಿಷ್ಟ ಧರ್ಮದ ಆಚರಣೆಗೆ ಅವಕಾಶ ಇಲ್ಲ. ಯಾವುದೇ ಧಾರ್ಮಿಕ ಪದ್ಧತಿಯ ಪ್ರಾರ್ಥನೆಗೂ ಇಲ್ಲಿ ಅವಕಾಶ ನೀಡುವುದಿಲ್ಲʼʼ ಎಂದು ನೋಟಿಸ್‌ ಹಾಕಿತ್ತು. ಆದರೂ ಕೆಲವು ಸಂಘಟನೆಗಳು ಇನ್ನೂ ಪ್ರತಿಭಟನೆಗಳ ಮೂಲಕ ವ್ಯವಹಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಇದನ್ನು ಗಮನಿಸಿ ಸಿಎಂ ಈ ಎಚ್ಚರಿಕೆ ನೀಡಿದ್ದಾರೆ.

ಕಳೆದ ಜುಲೈ ೧೫ರಂದು ಕೆಲವು ಹಿಂದೂ ಕಾರ್ಯಕರ್ತರು ಅಲ್ಲಿ ಹನುಮಾನ್‌ ಚಾಲೀಸಾ ಪಠಣ ಮತ್ತು ಪೂಜೆಗೆ ಮುಂದಾಗಿದ್ದರು. ಬಳಿಕ ಒಬ್ಬ ಮುಸ್ಲಿಂ ವ್ಯಕ್ತಿ ನಮಾಜ್‌ಗೆ ಪ್ರಯತ್ನಿಸಿದ್ದ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕೆಲವು ಸಂಘಟನೆಗೂ ಸಂಸ್ಥೆಯ ಉದ್ಯೋಗಿಗಳಲ್ಲಿ ಮುಸ್ಲಿಮರೇ ಹೆಚ್ಚು ಎಂಬ ವಾದವನ್ನು ಮುಂದಿಟ್ಟು ಗಲಾಟೆ ಎಬ್ಬಿಸಿವೆ. ಆಗ ಆಡಳಿತ ಮಂಡಳಿ ಉದ್ಯೋಗಿಗಳ ಪಟ್ಟಿಯನ್ನೇ ಪ್ರಕಟಿಸಿದೆ. ಇದರಲ್ಲಿ ಶೇಕಡಾ ೮೦ರಷ್ಟು ಹಿಂದುಗಳೇ ಇದ್ದಾರೆ.

ಇದನ್ನೂ ಓದಿ| ಲುಲು ಮಾಲ್‌ ನಮಾಜ್‌ ವಿವಾದ: ಧಾರ್ಮಿಕ ಚಟುವಟಿಕೆಗೆ ಅವಕಾಶ ಇಲ್ಲ ಎಂದು ಬೋರ್ಡ್‌ ಹಾಕಿದ ಆಡಳಿತ

Exit mobile version