Site icon Vistara News

Preeti Sudan: UPSC ನೂತನ ಅಧ್ಯಕ್ಷರಾಗಿ ಪ್ರೀತಿ ಸೂದನ್‌ ನೇಮಕ

preeti sudan

ನವದೆಹಲಿ: ಮನೋಜ್‌ ಸೋನಿಯವರ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ಲೋಕ ಸೇವಾ ಆಯೋಗ (UPSC) ಅಧ್ಯಕ್ಷ ಸ್ಥಾನಕ್ಕೆ ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್(Preeti Sudan) ನೇಮಕಗೊಂಡಿದ್ದಾರೆ. ಪ್ರೀತಿ ಅವರು ಆಗಸ್ಟ್ 1ರಿಂದ ಯುಪಿಎಸ್‌ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಮನೋಜ್ ಸೋನಿ ವೈಯಕ್ತಿಕ ಕಾರಣ ನೀಡಿ ಯುಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಈ ಸ್ಥಾನವನ್ನು 1983ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪ್ರೀತಿ ಸೂದನ್ ತುಂಬಲಿದ್ದಾರೆ.

ಇನ್ನು ಪ್ರೀತಿ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದು ಬಳಿಕ ಪ್ರೀತಿ ಸೂದನ್ ಅವರನ್ನು ಯುಪಿಎಸ್‌ಸಿ ಅಧ್ಯಕ್ಷೆಯಾಗಿ ನೇಮಿಸಲಾಗುತ್ತಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಕುಮಾರ್ ದ್ವಿವೇದಿ ಅವರು ಯುಪಿಎಸ್‌ಸಿ ಕಾರ್ಯದರ್ಶಿ ಶಶಿರಂಜನ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಪ್ರೀತಿ ಆಂಧ್ರಪ್ರದೇಶ ಕೇಡರ್ ನ ಐಎಎಸ್ ಅಧಿಕಾರಿ. ಅವರು ಆಹಾರ ಸಂಸ್ಕರಣೆ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಕ್ಷಣಾ ಸಚಿವಾಲಯದಲ್ಲಿಯೂ ಕೆಲಸ ಮಾಡಿದ್ದಾರೆ.

ಮನೋಜ್ ಸೋನಿ ಅವರ ಅಧಿಕಾರಾವಧಿಯು 2029ರಲ್ಲಿ ಕೊನೆಗೊಳ್ಳಲಿದ್ದು ಸುಮಾರು ಐದು ವರ್ಷಗಳಿಗೂ ಮುನ್ನ ರಾಜೀನಾಮೆ ನೀಡಿದ್ದಾರೆ. ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಾನು ಆಯ್ಕೆಯಾಗಲು ನಕಲಿ ಪ್ರಮಾಣಪತ್ರಗಳನ್ನು ಬಳಸಿದ್ದಾರೆ ಎಂಬ ಆರೋಪದ ನಡುವೆ ಮನೋಜ್ ಸೋನಿ ರಾಜೀನಾಮೆ ನಿಡಿದ್ದಾರೆ. ಮನೋಜ್ ಕುಮಾರ್ ದ್ವಿವೇದಿ ಅವರ ಪತ್ರದಲ್ಲಿ ಉಲ್ಲೇಖಿಸಿರುವಂತೆ ಸೋನಿ ಜುಲೈ 4ರಂದು ರಾಜೀನಾಮೆ ನೀಡಿದ್ದು ಜುಲೈ 31ರಿಂದ ಜಾರಿಗೆ ಬರುವಂತೆ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ನೀಟ್‌ ಯುಜಿ (NEET UG 2024) ಪರೀಕ್ಷೆಯ ಅಕ್ರಮ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ, ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ಅವರು ನಕಲಿ ದಾಖಲೆ ಸೃಷ್ಟಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕೂಡ ಅಷ್ಟೇ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಮನೋಜ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮನೋಜ್‌ ಸೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರೂ ಆಗಿದ್ದಾರೆ. ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದಾಗ ವಡೋದರಾದಲ್ಲಿರುವ ಎಂಎಸ್‌ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮನೋಜ್‌ ಸೋನಿ ಅವರನ್ನು ನೇಮಿಸಲಾಗಿತ್ತು. ಆಗ ಮನೋಜ್‌ ಸೋನಿ ಅವರಿಗೆ 40 ವರ್ಷ ವಯಸ್ಸು. ಆ ಮೂಲಕ ಅವರು ದೇಶದ ಅತಿ ಕಿರಿಯ ವಯಸ್ಸಿನ ಕುಲಪತಿ ಎಂಬ ಖ್ಯಾತಿಗೂ ಭಾಜನರಾಗಿದ್ದರು. ಕಳೆದ ತಿಂಗಳೇ ಮನೋಜ್‌ ಸೋನಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ಅವರ ಕಳ್ಳಾಟಗಳು ಬಗೆದಷ್ಟೂ ಹೊರ ಬರುತ್ತಿವೆ. ಅವರು ಅಂಗವೈಕಲ್ಯ ಪ್ರಮಾಣಪತ್ರ ವನ್ನು ಪಡೆಯಲು ಸುಳ್ಳು ವಿಳಾಸ ಮತ್ತು ನಕಲಿ ಪಡಿತರ ಚೀಟಿಯನ್ನು ಬಳಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಯಪಿಎಸ್‌ಸಿಯು ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಆದರೆ, ಯುಪಿಎಸ್‌ಸಿ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಹಿನ್ನೆಲೆಯಲ್ಲಿಯೇ ಮನೋಜ್‌ ಸೋನಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Pooja Khedkar: IAS ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ FIR ದಾಖಲಿಸಿದ UPSC

Exit mobile version