Site icon Vistara News

Pregnant Woman: ಗರ್ಭಿಣಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ ದುರುಳ ಪತಿ; ನರಳಿ ಜೀವ ಬಿಟ್ಟ ಮಹಿಳೆ

Pregnant Woman

Pregnant Woman Dies After Husband Sets Her On Fire In Punjab

ಚಂಡೀಗಢ: ಪತ್ನಿ ಗರ್ಭಿಣಿ ಎಂಬ ಸುದ್ದಿ ತಿಳಿಯುತ್ತಲೇ ಪತಿಯಾದವನು ಹೆಚ್ಚು ಖುಷಿ ಪಡುತ್ತಾನೆ. ಆಕೆಯು ಮಗುವಿಗೆ ಜನ್ಮ ನೀಡುವವರೆಗೆ ಆಕೆಯನ್ನೇ ಮಗುವಿನಂತೆ ನೋಡಿಕೊಳ್ಳುತ್ತಾನೆ. ಪತ್ನಿಯ ಬಯಕೆಗಳನ್ನು ಈಡೇರಿಸುತ್ತಾನೆ. ಆದರೆ, ಪಂಜಾಬ್‌ನಲ್ಲಿ (Punjab) ದುರುಳ ಪತಿಯೊಬ್ಬ 6 ತಿಂಗಳ ಗರ್ಭಿಣಿಯಾಗಿರುವ (Pregnant Woman) ತನ್ನ ಪತ್ನಿಯನ್ನೇ ಮಂಚಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿದ್ದಾನೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಹಿಳೆಯು ನರಳಿ ನರಳಿ ಜೀವ ಬಿಟ್ಟಿದ್ದಾರೆ.

ಅಮೃತಸರ ನಗರದ ಬಳಿಯ ಬುಳೇದ್‌ ನಂಗಲ್‌ ಎಂಬ ಗ್ರಾಮದಲ್ಲಿ ಶುಕ್ರವಾರ (ಏಪ್ರಿಲ್‌ 19) ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಬೈಯಲು ಶುರು ಮಾಡಿದ, ಕೆಟ್ಟ ಪದಗಳಿಂದ ನಿಂದಿಸಿದ ಕಾರಣ ಪತಿಯ ವಿರುದ್ಧ ಮಹಿಳೆಯು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಎದುರು ಉತ್ತರ ಕೊಟ್ಟಿದ್ದಕ್ಕೆ ಕುಪಿತಗೊಂಡ ದುಷ್ಟನು, ಪತ್ನಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ಮಹಿಳೆಯನ್ನು ಪಿಂಕಿ ಎಂದು ಗುರುತಿಸಲಾಗಿದೆ. ದುಷ್ಟ ಪತಿಯನ್ನು ಸುಖದೇವ್‌ ಪರಾರಿಯಾಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

“ಕಳೆದ ಕೆಲ ದಿನಗಳಿಂದ ಸುಖದೇವ್‌ ಹಾಗೂ ಪಿಂಕಿ ಮಧ್ಯೆ ಜಗಳಗಳು ನಡೆಯುತ್ತಲೇ ಇದ್ದವು. ಪತ್ನಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಆಕೆಯ ಜತೆ ಸುಖದೇವ್‌ ಜಗಳಕ್ಕಿಳಿಯುತ್ತಿದ್ದ. ಶುಕ್ರವಾರ ಇಬ್ಬರ ಮಧ್ಯೆ ಜೋರು ವಾಗ್ವಾದ ನಡೆದಿದೆ. ಇದೇ ವೇಳೆ ಕುಪಿತಗೊಂಡಿದ್ದ ಸುಖದೇವ್‌, ಪಿಂಕಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ಅಗ್ನಿಯ ಕೆನ್ನಾಲಗೆಗೆ ಸಿಲುಕಿದ ಪಿಂಕಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಖದೇವ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ವರದಿ ಕೇಳಿದ ಮಹಿಳಾ ಆಯೋಗ

ಗರ್ಭಿಣಿಯನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣದ ಕುರಿತು ಪೊಲೀಸರು ವರದಿ ನೀಡಬೇಕು ಎಂಬುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಸೂಚಿಸಿದೆ. “ಗರ್ಭಿಣಿಯನ್ನು ಮಂಚಕ್ಕೆ ಕಟ್ಟಿ, ಬೆಂಕಿ ಹಚ್ಚಿದ ಪ್ರಕರಣವು ಖಂಡನೀಯವಾಗಿದೆ. ಇಂತಹ ಪ್ರಕರಣಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಈ ಕುರಿತು ಪಂಜಾಬ್‌ ಡಿಜಿಪಿಗೆ ಪತ್ರ ಬರೆದಿದ್ದು, ಕೂಡಲೇ ದುಷ್ಟನನ್ನು ಬಂಧಿಸಬೇಕು ಎಂಬುದಾಗಿ ಸೂಚಿಸಿದ್ದಾರೆ. ಹಾಗೆಯೇ, ಮೂರು ದಿನಗಳಲ್ಲಿ ಪ್ರಕರಣದ ಕುರಿತು ವರದಿ ನೀಡಬೇಕು ಎಂಬುದಾಗಿ ಸೂಚಿಸಿದ್ದಾರೆ” ಎಂದು ಮಹಿಳಾ ಆಯೋಗ ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: Murder Case: ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ, ಹಿಡಿಯಲು ಹೋದ ಪೊಲೀಸರಿಗೂ ಮಚ್ಚಿನೇಟು; ಗುಂಡು ಹಾರಿಸಿ ಸೆರೆ

Exit mobile version