Site icon Vistara News

Satya Pal Malik: ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಮಾಜಿ ಸಿಬ್ಬಂದಿಗೆ ಸಿಬಿಐ ಶಾಕ್!

Satya Pal Malik

Premises of Satya Pal Malik’s former staff among 12 places raided by CBI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಟೀಕಿಸಿದ್ದ ಜಮ್ಮು-ಕಾಶ್ಮೀರದ ಮಾಜಿ ಗವರ್ನರ್‌ ಸತ್ಯಪಾಲ್‌ ಮಲಿಕ್‌ (Satya Pal Malik) ಅವರ ಮಾಜಿ ಸಿಬ್ಬಂದಿಗೆ ಸಿಬಿಐ (CBI Raid) ಶಾಕ್‌ ನೀಡಿದೆ. ಜಮ್ಮು-ಕಾಶ್ಮೀರದಲ್ಲಿ ಜಲವಿದ್ಯುತ್‌ ಯೋಜನೆಯ (Hydel Project) ಗುತ್ತಿಗೆ ಮಂಜೂರು ಮಾಡುವಾಗ ಭ್ರಷ್ಟಾಚಾರ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಪಾಲ್‌ ಮಲಿಕ್‌ ಅವರ ಮಾಜಿ ಸಿಬ್ಬಂದಿಯ 30 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ.

ಸತ್ಯಪಾಲ್‌ ಮಲಿಕ್‌ ಅವರು ಜಮ್ಮು-ಕಾಶ್ಮೀರದ ಗವರ್ನರ್‌ ಆಗಿದ್ದಾಗ ಮಾಧ್ಯಮ ಸಲಹೆಗಾರರಾಗಿದ್ದ ಸೌನಕ್‌ ಬಾಲಿ, ಚಾರ್ಟರ್ಡ್‌ ಅಕೌಂಟೆಂಟ್‌ ಸಂಜಯ್‌ ನಾರಂಗ್‌, ವೀರೇಂದರ್‌ ಸಿಂಗ್‌ ರಾಣಾ, ಕನ್ವರ್‌ ಸಿಂಗ್‌ ರಾಣಾ, ಪ್ರಿಯಾಂಕಾ ಚೌಧರಿ ಹಾಗೂ ಅನಿತಾ ಎಂಬುವವರ ನಿವಾಸ, ಕಚೇರಿಗಳು ಸೇರಿ ದೆಹಲಿ ಹಾಗೂ ರಾಜಸ್ಥಾನದ 30 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರೆಲ್ಲರೂ ಸತ್ಯಪಾಲ್‌ ಮಲಿಕ್‌ ಅವರ ಮಾಜಿ ಸಿಬ್ಬಂದಿಯಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ಕಿರು ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದಂತೆ ಸುಮಾರು 2,200 ಕೋಟಿ ರೂ. ಮೌಲ್ಯದ ಗುತ್ತಿಗೆ ಮಂಜೂರು ಮಾಡುವಾಗ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮೇ ತಿಂಗಳಲ್ಲಿ ಸತ್ಯಪಾಲ್‌ ಮಲಿಕ್‌ ಅವರಿಗೆ ಸಂಬಂಧಿಸಿದ ನಿವಾಸಗಳು ಹಾಗೂ ಕಚೇರಿಗಳು ಸೇರಿ 9 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಬಿಹಾರ, ಗೋವಾ, ಜಮ್ಮು-ಕಾಶ್ಮೀರ ಹಾಗೂ ಮೇಘಾಲಯದಲ್ಲಿ ದಾಳಿ ನಡೆಸಿತ್ತು. ಸತ್ಯಪಾಲ್‌ ಮಲಿಕ್‌ ಅವರನ್ನು ವಿಚಾರಣೆ ಕೂಡ ಮಾಡಲಾಗಿತ್ತು.

ಇದನ್ನೂ ಓದಿ: Satyapal Malik: ಸತ್ಯಪಾಲ್‌ ಮಲಿಕ್‌ಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಸಿಬಿಐ ದಾಳಿ

ಮೋದಿಯನ್ನು ಟೀಕಿಸಿದ್ದ ಸತ್ಯಪಾಲ್‌ ಮಲಿಕ್

ಸತ್ಯಪಾಲ್‌ ಮಲಿಕ್‌ ಅವರು ಹಲವು ಬಾರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಪುಲ್ವಾಮಾ ಉಗ್ರರ ದಾಳಿ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದರು. “ನಮ್ಮ ಭದ್ರತಾ ವೈಫಲ್ಯದಿಂದಾಗಿಯೇ ಪುಲ್ವಾಮ ದಾಳಿ ನಡೆಯಿತು. ಕೇಂದ್ರ ಸರ್ಕಾರದ ಅಸಮರ್ಥತೆಯಿಂದಾಗಿಯೇ ದುರಂತ ಸಂಭವಿಸಿತು. ಆದರೆ, ಆಗ ಮೋದಿ ಅವರು ನಮ್ಮನ್ನು ಸುಮ್ಮನಾಗಿಸಿದರು. ಉತ್ತರಾಖಂಡದ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌ಗೆ ಕರೆದು ಈ ಪ್ರಕರಣದ ಕುರಿತು ಮಾತನಾಡದಂತೆ ತಡೆದರು” ಎಂದು ಕೆಲ ತಿಂಗಳ ಹಿಂದೆ ಹೇಳಿದ್ದರು. ಹಾಗೆಯೇ, ಭ್ರಷ್ಟಾಚಾರದ ಕುರಿತು ಕೂಡ ಸತ್ಯಪಾಲ್‌ ಮಲಿಕ್‌ ಮಾತನಾಡಿದ್ದರು. “ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಅದಕ್ಕೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆಯೇ, ಅವರಿಗೆ ಯಾವ ವಿಷಯದ ಕುರಿತು ಕೂಡ ಮಾಹಿತಿ ಇರುವುದಿಲ್ಲ” ಎಂದು ದೂರಿದರು. ಪುಲ್ವಾಮ ದಾಳಿ ನಡೆದಾಗ ಸತ್ಯಪಾಲ್‌ ಮಲಿಕ್‌ ಅವರು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version