ವಾರಾಣಸಿ: ಯುವಜನರು ಡಿಗ್ರಿ ದಾಖಲೆಯನ್ನು ಪಡೆಯುವ ಉದ್ದೇಶದಿಂದ ವಿದ್ಯೆ ಕಲಿಯಬಾರದು, ಬದಲಾಗಿ ವೃತ್ತಿಪರರಾಗಲು, ದೇಶವನ್ನು ಮುನ್ನಡೆಸುವ ಮಾನವ ಶಕ್ತಿಗಳಾಗಲು, ದೇಶಕ್ಕೆ ಕೊಡುಗೆ ನೀಡಲು ಸಿದ್ಧರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬನರಾಸ್ ಹಿಂದೂ ಯುನಿವರ್ಸಿಟಿ (ಬಿಎಚ್‌ಯು) ನಡೆದ ರಾಷ್ಟ್ರೀಯ ಶಿಕ್ಷಣ ನೀತಿ-ಎನ್‌ಇಪಿ ೨೦೨೦ ಮೇಲಿನ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವನ್ನು ನೇರವಾದ ಚಿಂತನಾ ಪ್ರಕ್ರಿಯೆಯಿಂದ ಹೊರ ತಂದು ೨೧ನೇ ಶತಮಾನದ ಆಧುನಿಕ ಐಡಿಯಾಗಳಿಗೆ ಮುಖಾಮುಖಿಗೊಳಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ ಎಂದು ಅವರು ಹೇಳಿದರು. ಶಿಕ್ಷಣ ಎನ್ನುವುದು ಕೇವಲ ಒಂದು ದಾಖಲೆ ಆಗಬಾರದು. ಅದು ಬದುಕಿಗೆ ದಾರಿಯಾಗಬೇಕು, ದೇಶಕ್ಕೆ ಶಕ್ತಿಯಾಗಬೇಕು. ಆ ರೀತಿಯ ಶಿಕ್ಷಣ ನೀಡವುದರ ರೋಡ್‌ಮ್ಯಾಪ್ ಆಗಿ ಎನ್‌ಇಪಿ ೨೦೨೦ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
ನೇರ ಅನುಭವ ಹೊಂದಬೇಕು
ವಿಶ್ವವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೇರವಾದ ಅನುಭವ ಸಿಗುವಂತಾಗಬೇಕು ಎಂದು ಹೇಳಿದ ಮೋದಿ ಕೃಷಿ ವಿವಿಯ ವಿದ್ಯಾರ್ಥಿಗಳ ಉದಾಹರಣೆ ನೀಡಿದರು. ಕೃಷಿ ವಿವಿಯ ವಿದ್ಯಾರ್ಥಿಗಳು ಕೇವಲ ಪ್ರಯೋಗಾಲಯಗಳಲ್ಲಿ ಕಳೆಯುವುದಲ್ಲ. ಅವರು ಶೈಕ್ಷಣಿಕ ಅರ್ಹತೆಯನ್ನು ಹೊಂದಿಲ್ಲದ ರೈತರ ಭೂಮಿಯಲ್ಲೂ ಕೆಲಸ ಮಾಡಬೇಕು. ಪ್ರಯೋಗಾಲಯ ಮತ್ತು ಭೂಮಿ ಪರಸ್ಪರ ಬೆಸೆದುಕೊಳ್ಳಬೇಕು ಎಂದು ಹೇಳಿದರು.
ವಾರಾಣಸಿಯ ಅಖಿಲ ಭಾರತ ಶಿಕ್ಷಣ ಸಂಗಮ ಈ ಕಾರ್ಯಕ್ರಮವನ್ನು ಈ ಆಯೋಜಿಸಿತ್ತು. ಇದರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಬಗ್ಗೆ ಚರ್ಚೆ ನಡೆಯಲಿದೆ. ಶಿಕ್ಷಣ ಸಂಗಮದಲ್ಲಿ ೪೦೦ ವಿವಿಗಳ ಮುಖ್ಯಸ್ಥರು, ನೀತಿ ನಿರೂಪಕರು, ಶಿಕ್ಷಣ ತಜ್ಞರು, ಸಂಶೋಧಕರು ಭಾಗವಹಿಸುತ್ತಿದ್ದಾರೆ. ಯುಜಿಸಿ ನಡೆಸುವ ಈ ಕಾರ್ಯಕ್ರಮ ಜುಲೈ ೯ರವರೆಗೆ ನಡೆಯಲಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದರು.
ಅಕ್ಷಯ ಪಾತ್ರ ಅಡುಗೆ ಮನೆ ಉದ್ಘಾಟನೆ
ಈ ನಡುವೆ, ಪ್ರಧಾನಿ ಮೋದಿ ಅವರು ವಾರಾಣಸಿಯಲ್ಲಿ ಅಕ್ಷಯ ಪಾತ್ರ ಮಧ್ಯಾಹ್ನದ ಊಟದ ಯೋಜನೆ ಬೃಹತ್ ಅಡುಗೆ ಮನೆಯನ್ನು ಉದ್ಘಾಟಿಸಿದರು. ಜತೆಗೆ ವಾರಾಣಸಿಯಲ್ಲಿ ಮೂಲಭೂತ ಸೌಕರ್ಯ ಮತ್ತು ಜೀವನ ಮಟ್ಟ ಸುಧಾರಣೆಗಾಗಿ ೧೭೭೪ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಹಾಕಿದರು.
ಎಲ್‌ಟಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ವಿಶೇಷ ಅಡುಗೆಯಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಊಟವನ್ನು ಸಿದ್ಧಪಡಿಸಬಹುದಾಗಿದೆ.
ಇದನ್ನೂ ಓದಿ| ವಿಶ್ವವಿದ್ಯಾಲಯಗಳಿಗೆ ಬೋಧಕರ ನೇಮಕಕ್ಕೆ ಕೆಇಎ ಮೂಲಕ ಪರೀಕ್ಷೆ