ನವ ದೆಹಲಿ: ಕನಸಿನ ಕೂಸು ಆಕಾಸ ಏರ್ ಈಗಷ್ಟೇ ಹುಟ್ಟಿದೆ. ಆದರೆ ಅದಕ್ಕೆ ಜೀವ ಕೊಟ್ಟ ಖ್ಯಾತ ಉದ್ಯಮಿ ರಾಕೇಶ್ ಜುಂಜುನ್ವಾಲಾ ಇಂದು ಮೃತಪಟ್ಟಿದ್ದಾರೆ. ಆಕಾಸ ಏರ್‌ಲೈನ್ ಆಗಸ್ಟ್ 7ರಿಂದ ಹಾರಾಟ ಪ್ರಾರಂಭ ಮಾಡಿದೆ. ಅಷ್ಟೇ ಒಂದು ವಾರ ಆಯಿತು. ಆಗಲೇ ಆಕಾಸ ಏರ್ಲೈನ್ಸ್ಗೆ ಆಘಾತ ಎದುರಾಗಿದೆ. ಅದರ ಸಂಸ್ಥಾಪಕರೇ ಕಣ್ಮುಚ್ಚಿದ್ದಾರೆ. ಹಲವು ದಿನಗಳಿಂದಲೂ ಅನಾರೋಗ್ಯಕ್ಕೀಡಾಗಿದ್ದ ಅವರಿಗೆ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಇಂದು ಬೆಳಗ್ಗೆ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರು ಎಳೆದರು.
ಭಾರತದಲ್ಲಿ ವಾಯಯಾನ ಉದ್ಯಮ ಈಗಾಗಲೇ ನಷ್ಟದಲ್ಲಿದೆ. ಈಗಾಗಲೇ ಇರುವ ವಾಯುಯಾನ ಸಂಸ್ಥೆಗಳೇ ಸಂಕಷ್ಟದಲ್ಲಿವೆ. ಇದಾಗಿದ್ದು ಕೊರೊನಾ ವೈರಸ್ನಿಂದ. 2019ರಲ್ಲಿ ಕೊರೊನಾ ಪ್ರಾರಂಭವಾದ ಮೇಲೆ ಎಲ್ಲ ಉದ್ಯಮಗಳಿಗೂ ಹೆಚ್ಚು ಹೊಡೆತ ಬಿದ್ದಿದ್ದರೂ, ವಿಮಾನಯಾನ ಕ್ಷೇತ್ರಕ್ಕೆ ಜಾಸ್ತಿ ಎನ್ನುವಷ್ಟೇ ಕಷ್ಟವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಗಳೆಲ್ಲ ಬಹುಕಾಲ ನಿರ್ಬಂಧಗೊಂಡಿದ್ದರಿಂದ ಪ್ರಮುಖ ಸಂಸ್ಥೆಗಳೂ ನಷ್ಟ ಅನುಭವಿಸುವಂತಾಗಿದೆ. ಹೀಗೆ ಇರುವ ಏರ್ಲೈನ್ಸ್ಗಳೇ ಇನ್ನೂ ಚೇತರಿಸಿಕೊಳ್ಳದೆ ಇರುವಾಗ, ಇನ್ನೊಂದು ಏರ್ಲೈನ್ಸ್ ಬೇಕಾ? ಎಂಬ ಪ್ರಶ್ನೆಯನ್ನು ಆಕಾಸ್ ಏರ್ಲೈನ್ಸ್ ಪ್ರಾರಂಭದ ಹೊತ್ತಿನಲ್ಲಿ, ರಾಕೇಶ್ ಜುಂಜುನ್ವಾಲಾಗೆ ಕೇಳಲಾಗಿತ್ತು. ಆಗ ಅದಕ್ಕೆ ಉತ್ತರಿಸಿದ್ದ ಅವರು ‘I’m prepared for failure’ (ನಾನು ಸೋಲಿಗೆ ಸಿದ್ಧನಾಗಿದ್ದೇನೆ) ಎಂದು ಹೇಳಿದ್ದರು.
ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಗಳಿಸಿದ್ದ ರಾಕೇಶ್ ಜುಂಜುನ್ವಾಲಾ ಭಾರತದ ಉದ್ಯಮ ಕ್ಷೇತ್ರದ ಬಹುದೊಡ್ಡ ಭರವಸೆಯಂತೆ ಇದ್ದವರು. ಸ್ಟಾಕ್ ಮಾರ್ಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಅಷ್ಟೇ ಅತ್ಯಾಸಕ್ತಿಯಿಂದ ವಾಯುಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಆಕಾಸ ಏರ್‌ನಲ್ಲಿ ೪೦% ಷೇರುಗಳನ್ನು ಹೊಂದಿದ್ದಾರೆ. ೨೫ ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. (ಅಂದಾಜು ೧೯೭ ಕೋಟಿ ರೂ.) ಏರ್‌ಲೈನ್ ಕ್ಷೇತ್ರದಲ್ಲಿ ಸುದೀರ್ಘ ವೃತ್ತಿಪರ ಅನುಭವ ಇರುವ ತಂಡವನ್ನೇ ಕಟ್ಟಿದ್ದರು. ಅಷ್ಟರಲ್ಲೊಂದು ಆಗಬಾರದ ಘಟನೆ ಆಗಿದೆ.
ಇದನ್ನೂ ಓದಿ: ʼಆಕಾಸʼಕ್ಕೆ ಮೂರೇ ಗೇಣು! ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ, ಭಾನುವಾರ ಶುರು!