Site icon Vistara News

LK Advani: ಮೋದಿ ಉಪಸ್ಥಿತಿಯಲ್ಲಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದ ಅಡ್ವಾಣಿ; ವಿಡಿಯೊ ಇಲ್ಲಿದೆ

LK Advani

President Droupadi Murmu confers Bharat Ratna to BJP stalwart LK Advani in PM Modi's presence

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿ (LK Advani) ಅವರಿಗೆ ಭಾನುವಾರ (ಮಾರ್ಚ್‌ 31) ಭಾರತರತ್ನ (Bharat Ratna 2024) ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಎಲ್‌.ಕೆ.ಅಡ್ವಾಣಿ ಅವರ ನಿವಾಸದಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಉಪಸ್ಥಿತರಿದ್ದರು. ಭಾರತರತ್ನ ಗೌರವಕ್ಕೆ ಪಾತ್ರರಾದ ಎಲ್‌.ಕೆ.ಅಡ್ವಾಣಿ ಅವರಿಗೆ ರಾಷ್ಟ್ರಪತಿ ಹಾಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌, ಚೌಧರಿ ಚರಣ್‌ ಸಿಂಗ್‌ ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್‌ ಅವರಿಗೆ ಭಾರತರತ್ನ ನೀಡಲಾಗಿದೆ. ನಾಲ್ವರು ಮಹನೀಯರ ಕುಟುಂಬಸ್ಥರು ಶನಿವಾರ (ಮಾರ್ಚ್‌ 30) ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಎಲ್‌.ಕೆ. ಅಡ್ವಾಣಿ ಅವರಿಗೆ ಅವರ ನಿವಾಸದಲ್ಲಿಯೇ ಭಾರತರತ್ನ ನೀಡಿ ಗೌರವಿಸಲಾಗಿದೆ.

ಪಿ.ವಿ. ನರಸಿಂಹರಾವ್‌ ಅವರ ಪುತ್ರ ಪಿ.ವಿ. ಪ್ರಭಾಕರ್‌ ರಾವ್‌, ಎಂ.ಎಸ್.ಸ್ವಾಮಿನಾಥನ್‌ ಅವರ ಪುತ್ರಿ ನಿತ್ಯಾ ರಾವ್‌, ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ ಜಯಂತ್‌ ಸಿಂಗ್‌, ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಇದ್ದರು.

ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 3ರಂದು ಬೆಳಗ್ಗೆ ಘೋಷಿಸಿದ್ದರು. “ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ

ದೇಶದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ಏರಿಸಲು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಲಾಲ್‌ಕೃಷ್ಣ ಅಡ್ವಾಣಿ. ಅಯೋಧ್ಯೆಯ ರಾಮ ಜನ್ಮಭೂಮಿ ಚಳವಳಿಯ ವಿಷಯ ಎತ್ತಿಕೊಂಡರೂ ಅವರೇ ಮುಂದೆ ನಿಂತು ಇಡೀ ದೇಶದಲ್ಲಿ ಯಾತ್ರೆಗಳನ್ನು ನಡೆಸಿ, ಚಳವಳಿಯನ್ನು ತುದಿ ಮುಟ್ಟಿಸಿದವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದಿಟ್ಟ ಹೋರಾಟ ನಡೆಸಿದವರು, ಜೈಲು ಸೇರಿದವರು. ಸಂಸದೀಯ ಮುತ್ಸದ್ದಿಗಳ ಹೆಸರು ತೆಗೆದುಕೊಂಡರೂ ಅವರು ಪಟ್ಟಿಯ ಮೇಲಿನ ಸ್ಥಾನದಲ್ಲಿ ಪ್ರತ್ಯಕ್ಷರಾಗುತ್ತಾರೆ. ಇವರು ದೇಶದ ಉಪ ಪ್ರಧಾನಿ, ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಸುದೀರ್ಘ ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕೀರ್ತಿಯೂ ಇವರದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version