Site icon Vistara News

Udhayanidhi Stalin: ಸಂಸತ್‌ಗೆ ಮುರ್ಮುರನ್ನು ಆಹ್ವಾನಿಸದಿರುವುದೇ ಸನಾತನ ಧರ್ಮ ಎಂದ ಉದಯನಿಧಿ

Udhayanidhi Stalin

Madras High Court Dismisses Petition Against Stalin Junior Over Sanatana Dharma Remarks

ಚೆನ್ನೈ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು, ಅದು ಮಲೇರಿಯಾ, ಕೊರೊನಾ ಇದ್ದ ಹಾಗೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರೀಗ ಮತ್ತೆ ಸನಾತನ ಧರ್ಮದ (Sanatana Dharma) ಕುರಿತು ಹೇಳಿಕೆ ನೀಡಿದ್ದಾರೆ. “ದ್ರೌಪದಿ ಮುರ್ಮು ಅವರಿಗೆ ನೂತನ ಸಂಸತ್‌ ಭವನದ ಉದ್ಘಾಟನೆಗೆ ಆಹ್ವಾನಿಸದಿರುವುದು ಅವರು ವಿಧವೆ ಹಾಗೂ ಆದಿವಾಸಿ ಮಹಿಳೆ ಎಂಬುದೇ ಕಾರಣ. ಇದನ್ನೇ ನಾವು ಸನಾತನ ಧರ್ಮ ಎನ್ನುತ್ತೇವೆ” ಎಂದು ಉದಯನಿಧಿ ಸ್ಟಾಲಿನ್‌ ಹೇಳಿದ್ದಾರೆ.

“ಸುಮಾರು 800 ಕೋಟಿ ರೂಪಾಯಿ ವ್ಯಯಿಸಿ ನೂತನ ಸಂಸತ್‌ ಭವನವನ್ನು ನಿರ್ಮಿಸಲಾಗಿದೆ. ಆದರೆ, ದೇಶದ ಪ್ರಥಮ ಪ್ರಜೆಯನ್ನೇ ಸಂಸತ್‌ ಭವನದ ಉದ್ಘಾಟನೆಗೆ ಆಹ್ವಾನಿಸಿಲ್ಲ. ಬಿಜೆಪಿಯು ತಮಿಳುನಾಡಿನ ಅಧೀನಮ್‌ಗಳನ್ನು (ಅರ್ಚಕರು ಅಥವಾ ಧರ್ಮಗುರುಗಳು) ಸಂಸತ್‌ ಭವನದ ಉದ್ಘಾಟನೆಗೆ ಆಹ್ವಾನಿಸಿದೆ. ಆದರೆ, ರಾಷ್ಟ್ರಪತಿ ಅವರನ್ನೇ ಆಹ್ವಾನಿಸಿಲ್ಲ. ಏಕೆಂದರೆ, ಅವರು ಆದಿವಾಸಿ ಮಹಿಳೆಯಾಗಿದ್ದಾರೆ. ಅಲ್ಲದೆ, ಅವರು ವಿಧವೆ ಎಂಬ ಕಾರಣಕ್ಕಾಗಿಯೂ ಆಹ್ವಾನಿಸಿಲ್ಲ. ಇದು ಸನಾತನ ಧರ್ಮವೇ? ಇಂತಹ ಅನಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ” ಎಂದು ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

President Droupadi Murmu

ಇದನ್ನೂ ಓದಿ: Sanatana Dharma: ಸನಾತನ ಧರ್ಮ ಶಾಶ್ವತ ಎಂದ ಮದ್ರಾಸ್‌ ಹೈಕೋರ್ಟ್;‌ ಉದಯನಿಧಿಗೆ ಮಂಗಳಾರತಿ

ಇದಕ್ಕೂ ಮೊದಲು ಸ್ಟಾಲಿನ್‌ ಹೇಳಿದ್ದೇನು?

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

ಉದಯನಿಧಿ ಸ್ಟಾಲಿನ್‌ ಅವರು ಈ ಹೇಳಿಕೆ ನೀಡಿದ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಬಿಜೆಪಿ ನಾಯಕರಂತೂ ಉದಯನಿಧಿ ಸ್ಟಾಲಿನ್‌ ಅವರ ಮೇಲೆ ಮುಗಿಬಿದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೇ, “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟ ರಚಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್‌ ಮತ್ತೆ ಸನಾತನ ಧರ್ಮದ ಕುರಿತು ಮಾತನಾಡಿದ್ದಾರೆ.

Exit mobile version