ನವ ದೆಹಲಿ: ಭಾರತದ ರಾಷ್ಟ್ರಪತಿ ಹುದ್ದೆ ಚುನಾವಣೆ ದಿನಾಂಕವನ್ನು (President Election 2022) ಇಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಜುಲೈ 24ಕ್ಕೆ ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರ ಅಧಿಕಾರ ಅವಧಿ ಮುಕ್ತಾಯಗೊಳ್ಳಲಿದ್ದು, ಅದರೊಳಗೆ ನೂತನ ರಾಷ್ಟ್ರಪತಿ ಆಯ್ಕೆ ನಡೆಯಲಿದೆ. ನಾಳೆ (ಜೂ.10) ದೇಶಾದ್ಯಂತ 15 ರಾಜ್ಯಗಳ ಒಟ್ಟು 57ರಾಜ್ಯಸಭಾ ಸೀಟ್‌ಗಳಿಗೆ ಚುನಾವಣೆ ನಡೆಯಲಿದ್ದು, ಫಲಿತಾಂಶವೂ ಅದೇ ದಿನ ಹೊರಬೀಳಲಿದೆ. ರಾಜ್ಯಸಭಾ ಚುನಾವಣೆ ಮುನ್ನಾದಿನವೇ ರಾಷ್ಟ್ರಪತಿ ಚುನಾವಣೆ ದಿನಾಂಕವೂ ಘೋಷಣೆಯಾಗಿದ್ದು ವಿಶೇಷ.
ಇಂದು ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಭಾರತದಲ್ಲಿ ರಾಷ್ಟ್ರಪತಿ ಚುನಾವಣೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನೂ ವಿವರಿಸಿದರು. 2022ರ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಒಟ್ಟೂ 4809 ಮತದಾರರು ಮತ ಹಾಕುವರು. ಯಾವುದೇ ರಾಜಕೀಯ ಪಕ್ಷವೂ ತನ್ನ ಸದಸ್ಯರಿಗೆ ವಿಪ್ ನೀಡುವಂತಿಲ್ಲ. ಚುನಾವಣೆಯಲ್ಲಿ ಎಲ್ಲ ರೀತಿಯ ಕೊವಿಡ್ 19 ನಿಯಂತ್ರಣ ಶಿಷ್ಟಾಚಾರಗಳನ್ನೂ ಪಾಲಿಸುವುದು ಅತ್ಯಗತ್ಯ. ಪರಿಸರ ಸ್ನೇಹಿಯಾಗಿ ಚುನಾವಣೆ ನಡೆಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ಜೆಡಿಎಸ್ ತೆಕ್ಕೆಯಿಂದ ಹಾರಿದ ತುಮಕೂರು ʼಗುಬ್ಬಿʼ
ರಾಷ್ಟ್ರಪತಿ ಚುನಾವಣೆಯ ಪ್ರಮುಖ ದಿನಾಂಕಗಳು ಹೀಗಿವೆ..
1. ನಾಮಪತ್ರ ಸಲ್ಲಿಸಲು ಕೊನೇದಿನ ಜೂ.29
2. ನಾಮಪತ್ರ ಪರಿಶೀಲನೆಗೆ ಕೊನೇ ದಿನ ಜೂ.30
3. ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ ಜುಲೈ 30
4. ರಾಷ್ಟ್ರಪತಿ ಚುನಾವಣೆ ಜುಲೈ 18
5. ಚುನಾವಣೆ ಫಲಿತಾಂಶ ಜುಲೈ 21
ರಾಷ್ಟ್ರಪತಿ ಚುನಾವಣೆಯಲ್ಲಿ ಸ್ವತಃ ಅಭ್ಯರ್ಥಿಯೇ ಬಂದು ನಾಮಪತ್ರ ಸಲ್ಲಿಸಬಹುದು ಅಥವಾ ಅವರ ಪರ ಇನ್ಯಾರಾದರೂ ಬಂದು ಸಲ್ಲಿಸಬಹುದು. ಆದರೆ ನಿರ್ದಿಷ್ಟಪಡಿಸಿದ ದಿನದ ಒಳಗೆ (ಜೂನ್ 29) ಬೆಳಗ್ಗೆ 11-3 ಗಂಟೆ ಅವಧಿಯಲ್ಲಿ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಭಾರತದಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಜನಸಾಮಾನ್ಯರು ಮತದಾನ ಮಾಡುವುದಿಲ್ಲ. ಅದರ ಬದಲು ರಾಜ್ಯಸಭೆ ಮತ್ತು ಲೋಕಸಭೆಗಳ ಚುನಾಯಿತ ಸದಸ್ಯರನ್ನೊಳಗೊಂಡ ಚುನಾವಣಾ ಕಾಲೇಜುಗಳ ಸದಸ್ಯರು ಮಾತ್ರ ಮತ ಚಲಾಯಿಸುತ್ತಾರೆ. ಅಂದರೆ ಲೋಕಸಭೆಯ 543, ರಾಜ್ಯಸಭೆಯ 233 ಸದಸ್ಯರು (ಒಟ್ಟು 776 ಸಂಸದರು), ರಾಜ್ಯಗಳ ವಿಧಾನಸಭೆಗಳ ಶಾಸಕರು, ದೆಹಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಮತದಾನ ಮಾಡುವ ಮೂಲಕ ರಾಷ್ಟ್ರಪತಿ ಆಯ್ಕೆ ಮಾಡುತ್ತಾರೆ. ಮತಗಳ ಮೌಲ್ಯದ ಆಧಾರದ ಮೇಲೆ ಮತ ಎಣಿಕೆ ನಡೆಯುತ್ತದೆ. ಈ ಮತಗಳ ಮೌಲ್ಯವೆಂಬುದು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.
ಇದನ್ನೂ ಓದಿ| Explainer: ಶುರುವಾಗಿದೆ President Election ದಂಗಲ್