Site icon Vistara News

President Election: ಅಭ್ಯರ್ಥಿಯಾಗಲು ನಿರಾಕರಿಸಿದ ಫಾರೂಕ್ ಅಬ್ದುಲ್ಲಾ, ಕಾಶ್ಮೀರದಲ್ಲೇ ಕೆಲಸವಿದೆಯಂತೆ!

Farooq Abdullah

Pakistan not wearing bangles: Farooq Abdullah's reminder as Rajnath Singh says 'PoK will be merged with India'

ನವ ದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ (President Election) ಅಭ್ಯರ್ಥಿಯಾಗಲು ನಿರಾಕರಿಸಿದ್ದಾರೆ. ಇದರೊಂದಿಗೆ ಎನ್‌ಡಿಎ ವಿರುದ್ಧ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಮಮತಾ ಬ್ಯಾನರ್ಜಿ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಭಾರಿ ಪ್ರಯತ್ನ ನಡೆಸುತ್ತಿದ್ದು, ಇತ್ತೀಚೆಗೆ ದಿಲ್ಲಿಯ ಸಭೆಗೆ ೨೨ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದರು. ಎನ್‌ಸಿಪಿ ನಾಯಕರಾಗಿರುವ ಶರದ್‌ ಪವಾರ್‌ ಅವರನ್ನು ಜಂಟಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದು ಎಂದು ಮೊದಲೇ ಚರ್ಚೆ ನಡೆದಿತ್ತು. ಆದರೆ, ಶರದ್‌ ಪವಾರ್‌ ಅವರು ತನ್ನ ರಾಜಕೀಯ ಇನ್ನೂ ಮುಗಿದಿಲ್ಲ ಎಂದು ಹೇಳಿ ರಾಷ್ಟ್ರಪತಿ ಅಭ್ಯರ್ಥಿಯಾಗಲು ನಿರಾಕರಿಸಿದರು. ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರು ಫಾರೂಕ್‌ ಅಬ್ದುಲ್ಲಾ ಮತ್ತು ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಇದೀಗ ಫಾರೂಕ್‌ ಅಬ್ದುಲ್ಲಾ ತಾನು ಅಭ್ಯರ್ಥಿಯಾಗುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಲೋಕಸಭಾ ಸಂಸದರಾಗಿರುವ ಫಾರೂಕ್‌‌ ಅಬ್ದುಲ್ಲಾ, ಮಮತಾ ಬ್ಯಾನರ್ಜಿ ಅವರು ತಮ್ಮ ಹೆಸರನ್ನು ಪ್ರಸ್ತಾಪ ಮಾಡಿದ್ದರಿಂದ ಹೆಮ್ಮೆಯಾಗಿದೆ . ಆದರೆ, ಈ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಬೇಡ ಎನ್ನಲು ಕಾರಣವೇನು?
ʻʻಜಮ್ಮು ಮತ್ತು ಕಾಶ್ಮೀರದವು ಅತ್ಯಂತ ಸಂಕೀರ್ಣ ಘಟ್ಟವನ್ನು ದಾಟುವ ಹಂತದಲ್ಲಿದೆ. ಇಂಥ ಅನಿಶ್ಚಿತ ಕಾಲದಲ್ಲಿ ಮಾರ್ಗದರ್ಶನ ನೀಡಲು ನನ್ನ ಪ್ರಯತ್ನಗಳು ಅಗತ್ಯವಿದೆ ಎಂದು ನನಗೆ ಅನಿಸಿದೆ. ನನ್ನ ಮುಂದೆ ಇನ್ನಷ್ಟು ಸಕ್ರಿಯ ರಾಜಕೀಯ ಚಟುವಟಿಕೆಗಳಿವೆ. ಜಮ್ಮು ಮತ್ತು ಕಾಶ್ಮೀರದ ಹಾಗೂ ದೇಶಕ್ಕೆ ಧನಾತ್ಮಕ ಕಾಣಿಕೆ ನೀಡಲು ಬಯಸುತ್ತಿದ್ದೇನೆ. ಹಾಗಾಗಿ ಪ್ರಸ್ತಾವನೆಯಿಂದ ನನ್ನ ಹೆಸರನ್ನು ಗೌರವಯುತವಾಗಿ ಹಿಂದಕ್ಕೆ ಪಡೆಯಲು ಬಯಸುತ್ತೇನೆ. ಮತ್ತು ಪ್ರತಿಪಕ್ಷಗಳ ಸಹಮತದ ಅಭ್ಯರ್ಥಿ ಆಯ್ಕೆಯನ್ನು ಬೆಂಬಲಿಸುತ್ತೇನೆʼʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಯತ್ನಕ್ಕೆ ಭಾರಿ ಹಿನ್ನಡೆ
ಪ್ರತಿಪಕ್ಷಗಳನ್ನು ಒಗ್ಗೂಡಿಸಿ ರಾಷ್ಟ್ರಪತಿ ಚುನಾವಣೆಯಲ್ಲಿ ಸಹಮತದ ಅಭ್ಯರ್ಥಿಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಪ್ರಯತ್ನಕ್ಕೆ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಮಮತಾ ಬ್ಯಾನರ್ಜಿ ಅವರ ಆಹ್ವಾನವನ್ನು ಬಿಜೆಡಿ, ಟಿಆರ್‌ಎಸ್‌, ಆಮ್‌ ಆದ್ಮಿ ಪಾರ್ಟಿಗಳು ಈ ಹಿಂದೆಯೇ ತಿರಸ್ಕರಿಸಿವೆ. ಈಗ ಶರದ್‌ ಪವಾರ್‌ ಮತ್ತು ಫಾರೂಕ್‌ ಅಬ್ದುಲ್ಲಾ ಅವರೂ ಅಭ್ಯರ್ಥಿಯಾಗಲು ಒಪ್ಪುತ್ತಿಲ್ಲ. ಗೋಪಾಲಕೃಷ್ಣ ಗಾಂಧಿ ಅವರೂ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಹೀಗಾಗಿ ಅಭ್ಯರ್ಥಿ ಯಾರೆಂಬುದೇ ಗೊಂದಲದ ಗೂಡಾಗಿದೆ.
ಈ ನಡುವೆ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಕ್ಕಾಗಿ ಜೂನ್‌ ೨೧ರಂದು ಮತ್ತೊಮ್ಮೆ ೧೭ ಪಕ್ಷಗಳ ಸಭೆಯನ್ನು ಕರೆಯಲಾಗಿದೆ!

ಇದನ್ನೂ ಓದಿ| Explainer: ಶುರುವಾಗಿದೆ President Election ದಂಗಲ್‌

Exit mobile version