ನವ ದೆಹಲಿ: ಭಾರತದ ರಾಷ್ಟ್ರಪತಿ ಹುದ್ದೆಗೆ ಏರಿದ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರದ ಬಳಿಕ ಮಾತನಾಡಿದರು. ಮೊಟ್ಟಮೊದಲಿಗೆ ಅವರು ʼಜೋಹಾರ್ʼ ಎಂಬ ಶಬ್ದದ ಮೂಲಕ ಮಾತು ಪ್ರಾರಂಭಿಸಿದರು. ಆದಿವಾಸಿ ಸಂಪ್ರದಾಯದಲ್ಲಿ ಜೋಹಾರ್ ಎಂದರೆ ಬಂಧುಗಳನ್ನು, ಸ್ನೇಹಿತರು, ಹಿತೈಷಿಗಳು ಎದುರು ಸಿಕ್ಕಾಗ ಶುಭ ಹಾರೈಸಲು ಬಳಸುವ ಪದ. ಬುಡಕಟ್ಟು ಜನಾಂಗದ ಮುರ್ಮು ಇಂದು ಜೊಹಾರ್ ಎಂದು ಹೇಳಿ ಬಳಿಕ ನಮಸ್ಕಾರ ಹೇಳಿದರು. ನಂತರ ಮಾತು ಮುಂದುವರಿಸಿ, ʼಪ್ರತಿಯೊಬ್ಬ ನಾಗರಿಕನ ಆಶಯ, ನಿರೀಕ್ಷೆ ಮತ್ತು ಹಕ್ಕುಗಳ ಪ್ರತೀಕವಾದ, ಈ ಪವಿತ್ರ ಸಂಸತ್ತಿನಲ್ಲಿ ನಿಂತು ಮಾತನಾಡುತ್ತಿದ್ದೇನೆ. ನಾನಿಂದು ಹೊಸ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಅದನ್ನು ನಿಭಾಯಿಸಲು ನಿಮ್ಮೆಲ್ಲರ ಬೆಂಬಲ ಬೇಕು. ನೀವೆಲ್ಲ ನನ್ನ ಮೇಲೆ ನಂಬಿಕೆ ಇಡಬೇಕು. ಹಾಗೇ, ಸ್ವಾತಂತ್ರ್ಯ ಬಂದು 75ವರ್ಷವಾದ ಈ ಅಮೃತಕಾಲದ ಹೊತ್ತಲ್ಲಿ ನನಗೆ ಇಂಥದ್ದೊಂದು ಮಹತ್ವದ ಸ್ಥಾನ ಕೊಟ್ಟು, ದೇಶ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
‘ನಾನು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನವಾಗಿದ್ದು ಕೋಟ್ಯಂತರ ಮಹಿಳೆಯರ ಸಾಮರ್ಥ್ಯ ಮತ್ತು ಕನಸನ್ನು ಬಿಂಬಿಸುತ್ತದೆ. ಅದೆಷ್ಟೋ ವರ್ಷಗಳಿಂದ ಅಭಿವೃದ್ಧಿ, ಏಳ್ಗೆಯನ್ನೇ ಕಾಣದ ಬಡವರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಈಗ ನನ್ನಲ್ಲಿ ಅವರ ಪ್ರತಿಬಿಂಬ ಕಾಣುತ್ತಿದ್ದಾರೆ. ನಾನು ರಾಷ್ಟ್ರಪತಿ ಹುದ್ದೆಗೇರುತ್ತಿರುವ ಈ ಘಳಿಗೆಯಲ್ಲಿ ಬಡ, ಹಿಂದುಳಿದ, ಬುಡಕಟ್ಟು ಜನಾಂಗದ ಪ್ರತಿಯೊಬ್ಬ ವ್ಯಕ್ತಿಯೂ ನನ್ನನ್ನು ಆಶೀರ್ವದಿಸಿದ್ದಾರೆ. ಹರಸಿದ್ದಾರೆ. ಇದು ನನ್ನಲ್ಲಿ ಹೆಮ್ಮೆಯ ಭಾವ ಮೂಡಿಸಿದೆ. ನಾನಿಂದು ರಾಷ್ಟ್ರಪತಿ ಹುದ್ದೆಗೆ ಏರಿದ್ದು ಕೇವಲ ನನ್ನ ಸಾಧನೆ ಮಾತ್ರವಲ್ಲ, ಈ ದೇಶದ ಬಡವರ್ಗದ ಪ್ರತಿಯೊಬ್ಬರ ಸಾಧನೆ. ಭಾರತದಲ್ಲಿ ಬಡವರು ಕನಸು ಕಾಣುವುದು ಮಾತ್ರವಲ್ಲ, ಅದನ್ನು ನೆರವೇರಿಸಿಕೊಳ್ಳಬಹುದು ಎಂಬುದಕ್ಕೆ ನನಗೆ ಒಲಿದ ಈ ಹುದ್ದೆಯೇ ಸಾಕ್ಷಿ. ಹಾಗೇ, ಮಹಿಳೆಯರು ಮತ್ತು ಯುವಜನರ ಹಿತಾಸಕ್ತಿ ನನ್ನ ಆದ್ಯತೆ ಎಂದು ಇದೇ ಹೊತ್ತಲ್ಲಿ ಭರವಸೆ ಕೊಡುತ್ತೇನೆ ಎಂದರು.
ಸ್ವತಂತ್ರ್ಯಾನಂತರ ಹುಟ್ಟಿದವಳು ನಾನು
ಇಂದು ದ್ರೌಪದಿ ಮುರ್ಮು ಭಾಷಣದ ವೇಳೆ ಇನ್ನೊಂದು ಮಹತ್ವದ ವಿಚಾರ ಹೇಳಿದರು. ʼಇಷ್ಟುವರ್ಷದಲ್ಲಿ ದೇಶದ ರಾಷ್ಟ್ರಪತಿಯಾಗಿದ್ದ ಎಲ್ಲರೂ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದವರೇ ಆಗಿದ್ದರು. ಇದೇ ಮೊದಲ ಬಾರಿಗೆ, ಸ್ವಾತಂತ್ರ್ಯ ಬಂದ ನಂತರ ಹುಟ್ಟಿದ ನಾನು ರಾಷ್ಟ್ರಪತಿ ಆಗಿದ್ದೇನೆ. ಅದೂ ಕೂಡ ಸ್ವಾತಂತ್ರ್ಯ ಬಂದು 75 ವರ್ಷದ ಸಂಭ್ರಮ ನಡೆಯುತ್ತಿರುವ ಆಜಾದಿ ಕಾ ಅಮೃತಮಹೋತ್ಸವ ಕಾಲದಲ್ಲಿ ಈ ಹುದ್ದೆಗೇರಿದ್ದೇನೆ ಎಂದು ಹೇಳಿದ ಅವರು, ಸ್ವಾತಂತ್ರ್ಯ ಹೋರಾಟಗಾರರು, ಸ್ವತಂತ್ರ ಭಾರತದ ನಾಗರಿಕರ ಮೇಲೆ ಇಟ್ಟಿದ್ದ ನಿರೀಕ್ಷೆಗಳನ್ನು ಪೂರೈಸಲು ಇನ್ನಷ್ಟು ವೇಗವಾಗಿ ನಾವು ಸಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಗಿಲ್ ವಿಜಯ ದಿವಸ್ ಶುಭಾಶಯ
ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸುವ, ಅಂದು ಹುತಾತ್ಮರಾದ ಯೋಧರನ್ನು ಸ್ಮರಿಸಲು ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಗುತ್ತದೆ. ಇಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು, ಕಾರ್ಗಿಲ್ ವಿಜಯ ದಿವಸ್ ಶುಭಾಶಯವನ್ನು ದೇಶದ ಜನರು ಮತ್ತು ಸೇನಾ ಯೋಧರಿಗೆ ಒಂದು ದಿನ ಮುಂಚಿತವಾಗಿ ತಿಳಿಸಿದರು. ಈ ಕಾರ್ಗಿಲ್ ವಿಜಯ್ ದಿವಸ್, ಭಾರತೀಯ ಸೇನೆಯ ಸಂಯಮ ಮತ್ತು ಶೌರ್ಯ ಎಂಥದ್ದು ಎಂಬುದನ್ನು ತೋರಿಸಿದ ದಿನ ಎಂದೂ ಅವರು ಹೇಳಿದರು.
ಪುಟ್ಟ ಹಳ್ಳಿಯಲ್ಲಿ ಶುರುವಾಯ್ತು ಜೀವನ
ದ್ರೌಪದಿ ಮುರ್ಮು ತಮ್ಮ ಬಾಲ್ಯದ ಬಗ್ಗೆಯೂ ಹೇಳಿಕೊಂಡರು. ʼನಾನು ಒಡಿಶಾದ ಒಂದು ಸಣ್ಣ ಬುಡಕಟ್ಟು ಹಳ್ಳಿಯಿಂದ ಬಂದವಳು. ನನಗೆ ಪ್ರಾಥಮಿಕ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಯಾಕೆಂದರೆ ನಮ್ಮ ಕುಟುಂಬ, ಹಿನ್ನೆಲೆಯೇ ಹಾಗಿತ್ತು. ಆದರೂ ಎಲ್ಲ ಅಡೆತಡೆಗಳನ್ನೂ ಮೀರಿ ನಾನು ಶಿಕ್ಷಣ ಪಡೆದೆ. ನನ್ನಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತ ಸಾಗಿಬಂದೆ. ಇಡೀ ನನ್ನ ಹಳ್ಳಿಯಲ್ಲಿ ಕಾಲೇಜು ಮೆಟ್ಟಿಲೇರಿದ ಮೊದಲ ಯುವತಿ ನಾನೇ ಆಗಿದ್ದೆ. ಬಳಿಕ ವಾರ್ಡ್ ಕೌನ್ಸಿಲರ್ ಆದೆ. ಇದೀಗ ದೇಶದ ರಾಷ್ಟ್ರಪತಿ ಹುದ್ದೆಗೆ ಏರಿದ ಬುಡಕಟ್ಟು ಜನಾಂಗದ ಮೊದಲ ವ್ಯಕ್ತಿಯೂ ನಾನೇ. ಒಬ್ಬ ಬುಡಕಟ್ಟು ಜನಾಂಗದ ಸಾಮಾನ್ಯ ಮಹಿಳೆ, ವಾರ್ಡ್ ಕೌನ್ಸಿಲರ್ ಆಗಿದ್ದವಳನ್ನು ದೇಶದ ರಾಷ್ಟ್ರಪತಿ ಮಾಡಿದ್ದು ನಮ್ಮ ಪ್ರಜಾಪ್ರಭುತ್ವದ ಶಕ್ತಿ ಎಂದು ಅಭಿಪ್ರಾಯಪಟ್ಟರು.
ಹುದ್ದೆಯ ಸಂಪ್ರದಾಯ ಉಳಿಸುವೆ
ʼಮೊಟ್ಟಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ರಿಂದ ಹಿಡಿದು ರಾಮನಾಥ ಕೋವಿಂದ್‌ವರೆಗೆ ಅನೇಕರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. ಈ ಸ್ಥಾನಕ್ಕೊಂದು ಸಂಪ್ರದಾಯ ಹಾಕಿಕೊಟ್ಟಿದ್ದಾರೆ. ಅದನ್ನು ಉಳಿಸುವ-ರಕ್ಷಿಸುವ ಜವಾಬ್ದಾರಿ ನನ್ನದು. ಪ್ರಾಮಾಣಿಕತೆಯಿಂದ ನನ್ನ ಕರ್ತವ್ಯ ನಿಭಾಯಿಸುತ್ತೇನೆಂದು ಮಾತುಕೊಡುತ್ತೇನೆ. ದೇಶದ ಪ್ರಜಾಸತ್ತಾತ್ಮಕ ಮತ್ತು ಸಾಂಸ್ಕೃತಿಕ ಸಿದ್ಧಾಂತಗಳು ಮತ್ತು ದೇಶದ ನಾಗರಿಕರೇ ನನಗೆ ಮೂಲ ಬಲ ಎಂದು ನಾನು ನಂಬಿದ್ದೇನೆʼ ಎಂದು ದ್ರೌಪದಿ ಮುರ್ಮು ಹೇಳಿದರು.
ಇದನ್ನೂ ಓದಿ: Draupadi Murmu | 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು