Site icon Vistara News

Budget 2023: ಬಜೆಟ್ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ, ಬಸವಣ್ಣನ ‘ಕಾಯಕವೇ ಕೈಲಾಸ’ ಸ್ಮರಿಸಿದ ರಾಷ್ಟ್ರಪತಿ

Droupadi Murmu

#image_title

ನವದೆಹಲಿ: ”ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಟ್ಟಿದ್ದು, ಜಾಗತಿಕವಾಗಿ ಏಳಿಗೆ ಹೊಂದುತ್ತಿದೆ. ಇನ್ನಷ್ಟು ಆತ್ಮನಿರ್ಭರ ಸಾಧಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದ್ದು, ಎಲ್ಲರೂ ಒಗ್ಗೂಡಿ ದೇಶದ ಏಳಿಗೆ ದೃಷ್ಟಿಯಿಂದ ಶ್ರಮಿಸೋಣ. ಮುಂದಿನ ವರ್ಷಗಳಲ್ಲಿ ಭಾರತದ ಏಳಿಗೆ ಮತ್ತೊಂದು ಹಂತ ತಲುಪಲಿದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Budget 2023) ಹೇಳಿದರು. ಹಾಗೆಯೇ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಉಕ್ತಿಯನ್ನು ನೆನೆದರು.

ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಿದ್ದು, ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದರು. “ದೇಶದ ಜನ ಸದೃಢ ಸರ್ಕಾರವನ್ನು ಆಯ್ಕೆ ಮಾಡಿದೆ. 2047ರ ವೇಳೆಗೆ ಭಾರತದ ಅಭಿವೃದ್ಧಿಯ ಗತಿಯು ಬದಲಾಗಬೇಕು. ಆಧುನಿಕ ಯುಗಕ್ಕೆ ತಕ್ಕ ರೀತಿಯಲ್ಲಿ ಏಳಿಗೆ ಹೊಂದುವ ಜತೆಗೆ ಆತ್ಮನಿರ್ಭರತೆಯನ್ನು ಸಾಧಿಸುವ ಅವಶ್ಯಕತೆ ಇದೆ” ಎಂದರು.

ಕಾಯಕವೇ ಕೈಲಾಸ ತತ್ವ ಅಳವಡಿಸಿಕೊಳ್ಳಲು ಕರೆ

“ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅಂದರೆ, ಕೆಲಸ ಮಾಡುವುದರಲ್ಲೇ ದೇವರನ್ನು ಕಾಣುವುದು ಎಂಬುದು ಅವರ ಮಾತಿನ ತಾತ್ಪರ್ಯವಾಗಿದೆ. ಹಾಗಾಗಿ, ಸರ್ಕಾರ ಹಾಗೂ ದೇಶದ ಜನ ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು” ಎಂದು ಕರೆ ನೀಡಿದರು. “ದೇಶದಲ್ಲೀಗ ಭ್ರಷ್ಟಾಚಾರ ನಿಗ್ರಹವಾಗಿದ್ದು, ಜಿಎಸ್‌ಟಿಯಂತಹ ತೆರಿಗೆ ಸುಧಾರಣೆ ಜಾರಿಗೆ ತರಲಾಗಿದೆ. ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ದೇಶದ ಚಹರೆ ಬದಲಾಗಿದೆ” ಎಂದರು.

ಬಡವರ ಪರ ಸರ್ಕಾರ

“ಸರ್ಕಾರವು ಬಡವರ ಪರವಾಗಿದೆ. ಬಡವರಿಗೆ ಅನುಕೂಲವಾಗಲಿ ಎಂದು ಅಡುಗೆ ಅನಿಲ, ವಿದ್ಯುತ್‌, ನೀರು, ವಸತಿ ಸೌಕರ್ಯ ಕಲ್ಪಿಸಿದೆ. ಜಲಜೀವನ್‌ ಮಿಷನ್‌ ಅಡಿಯಲ್ಲಿ ದೇಶದ 11 ಕೋಟಿ ಜನರಿಗೆ ನೀರು ಒದಗಿಸಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆ ಅನ್ವಯ ಕೋಟ್ಯಂತರ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಬಡವರ ಶ್ರೇಯೋಭಿವೃದ್ಧಿಗೆ ಸಕಲ ರೀತಿಯಲ್ಲೂ ಶ್ರಮಿಸಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: Budget Session 2023: ಜ.31ರಿಂದ ಬಜೆಟ್ ಅಧಿವೇಶನ, ಸರ್ವಪಕ್ಷ ಸಭೆ; ಅದಾನಿ, ಬಿಬಿಸಿ ಸಾಕ್ಷ್ಯಚಿತ್ರ ಪ್ರಕರಣ ಪ್ರತಿಧ್ವನಿ ಸಾಧ್ಯತೆ

ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಛಾತಿ

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ದಿಟ್ಟ ನಿರ್ಧಾರಗಳನ್ನು ದ್ರೌಪದಿ ಮುರ್ಮು ಶ್ಲಾಘಿಸಿದರು. “ದೇಶದಲ್ಲೀಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರವಿದೆ. ಸರ್ಜಿಕಲ್‌ ಸ್ಟ್ರೈಕ್‌, 370ನೇ ವಿಧಿ ರದ್ದು, ತ್ರಿವಳಿ ತಲಾಕ್‌ ರದ್ದು, ಎಲ್‌ಎಸಿ, ಎಲ್‌ಒಸಿಗಳಲ್ಲಿ ಉಪಟಳ ಮಾಡುವವರಿಗೆ ಸರಿಯಾದ ತಿರುಗೇಟು ನೀಡಲಾಗುತ್ತಿದೆ. ದೇಶದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವ ಸರ್ಕಾರದಿಂದ ಉತ್ತಮ ನಿರ್ಧಾರ ತೆಗೆದುಕೊಂಡು ಸಮರ್ಥ ಆಡಳಿತ ನೀಡಲಾಗುತ್ತಿದೆ” ಎಂದರು.

ಬೇರೆ ದೇಶಗಳಿಗಿಂತ ರಾಜಕೀಯ ಸ್ಥಿರತೆ

ಭಾರತದ ರಾಜಕೀಯ ಸ್ಥಿರತೆ ಕುರಿತು ದ್ರೌಪದಿ ಮುರ್ಮು ಪ್ರಸ್ತಾಪಿಸಿದರು. “ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಾಜಕೀಯ ಸ್ಥಿರತೆ ಇದೆ. ದೇಶದ ಹಿತಾಸಕ್ತಿಯನ್ನೇ ಪರಮೋಚ್ಚವನ್ನಾಗಿಟ್ಟುಕೊಂಡು, ನೀತಿಗಳ ಆಧಾರದ ಮೇಲೆ ಸರ್ಕಾರ ಮುನ್ನಡೆಯುತ್ತಿರುವ ಕಾರಣ ಹೆಚ್ಚಿನ ಸ್ಥಿರತೆ ಕಾಣಬಹುದಾಗಿದೆ” ಎಂದು ಹೇಳಿದರು.

Exit mobile version