ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ 3 ಮಿಷನ್ (Chandrayaan 3) ಯಶಸ್ಸು ಸಾಧಿಸಿದ್ದು, ಜಗತ್ತಿನ ಹಲವು ರಾಷ್ಟ್ರಗಳು ಕೂಡ ಇಸ್ರೋ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಇಸ್ರೋಗೆ ತೆರಳಿ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಇಸ್ರೋಗೆ ಸಾಕಷ್ಟು ಅನುದಾನ ನೀಡುತ್ತಿರಲಿಲ್ಲ ಎಂದು ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ (Nambi Narayanan) ದೂರಿದ್ದಾರೆ.
“ಹಿಂದಿನ ಸರ್ಕಾರಕ್ಕೆ ಇಸ್ರೋ ಮೇಲೆ ನಂಬಿಕೆಯೇ ಇರಲಿಲ್ಲ. ನಮಗೊಂದು ಜೀಪ್ ಇರಲಿಲ್ಲ, ಕಾರ್ ಕೂಡ ಕೊಟ್ಟಿರಲಿಲ್ಲ. ಇದರ ಅರ್ಥ ನಮಗೆ ಸರ್ಕಾರದಿಂದ ಸಾಕಷ್ಟು ಅನುದಾನ ನೀಡುತ್ತಿರಲಿಲ್ಲ ಎಂಬುದೇ ಆಗಿದೆ. ಅಷ್ಟರಮಟ್ಟಿಗೆ ಆರಂಭದಲ್ಲಿ ಇಸ್ರೋ ಮೇಲೆ ಸರ್ಕಾರಕ್ಕೆ ನಂಬಿಕೆ ಇರಲಿಲ್ಲ. ಇಸ್ರೋಗೆ ಬಜೆಟ್ ನೀಡಬೇಕು ಎಂದು ವಿಜ್ಞಾನಿಗಳು ಕೇಳುವುದಲ್ಲ, ಅದನ್ನು ಸರ್ಕಾರ ನೀಡಬೇಕು. ಹಾಗಂತ, ನಾನೇನೂ ಹಿಂದಿನ ಸರ್ಕಾರವನ್ನು ದೂರುತ್ತಿಲ್ಲ. ಆದರೆ, ಅವರಿಗೆ ಇಸ್ರೋ ಮೇಲೆ ನಂಬಿಕೆಯೇ ಇರಲಿಲ್ಲ” ಎಂದು ನಂಬಿ ನಾರಾಯಣನ್ ಹೇಳಿದ ವಿಡಿಯೊ ಈಗ ವೈರಲ್ ಆಗಿದೆ.
ಮೋದಿಗೆ ಕ್ರೆಡಿಟ್ ಸಲ್ಲಬೇಕು
ಇಸ್ರೋ ಸಾಧನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರಸ್ತಾಪಿಸಿದ ನಂಬಿ ನಾರಾಯಣನ್, “ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ರೆಡಿಟ್ ಸಲ್ಲಬೇಕು” ಎಂದಿದ್ದಾರೆ. “ಚಂದ್ರಯಾನ 3 ಒಂದು ರಾಷ್ಟ್ರೀಯ ಯೋಜನೆ. ಆ ಯೋಜನೆಯಲ್ಲಿ ಪ್ರಧಾನಿಯವರಿಗೆ ಶ್ರೇಯಸ್ಸು ಸಲ್ಲದೆ, ಯಾರಿಗೆ ಸಲ್ಲಬೇಕು? ನಿಮಗೆ ಮೋದಿ ಇಷ್ಟವಿಲ್ಲ ಎಂದರೆ, ಅದು ನಿಮ್ಮ ಸಮಸ್ಯೆ” ಎಂದು ಹೇಳಿದ್ದಾರೆ.
ಇನ್ನು ನರೇಂದ್ರ ಮೋದಿ ಅವಧಿಯಲ್ಲಿ ಇಸ್ರೋಗೆ ಅನುದಾನ ಕಡಿತವಾಗಿದೆ. ಹಾಗೆಯೇ, ವಿಜ್ಞಾನಿಗಳಿಗೆ 17 ತಿಂಗಳಿಂದ ಸಂಬಳ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದರ ಕುರಿತು ಕೂಡ ನಂಬಿ ನಾರಾಯಣನ್ ಪ್ರತಿಕ್ರಿಯಿಸಿದ್ದು, “ನಾನು ಪ್ರತಿ ತಿಂಗಳು 29ನೇ ತಾರೀಖಿನಂದು ಪಿಂಚಣಿ ಪಡೆಯುತ್ತೇನೆ” ಎಂದು ತಿಳಿಸಿದ್ದಾರೆ. ಇನ್ನು ಚಂದ್ರಯಾನ 3 ಯಶಸ್ಸಿನ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ‘ಕ್ರೆಡಿಟ್ ವಾರ್’ ಶುರುವಾಗಿದೆ.