ಅಯೋಧ್ಯೆ: ಜನವರಿಯಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ (Ram Mandir) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡುವುದು ನಿಶ್ಚಿತವಾಗಿದೆ. ಹಾಗಾಗಿ, ರಾಮಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಆ ಮೂಲಕ ನಿಗದಿತ ಸಮಯದಲ್ಲಿಯೇ ಕಾಮಗಾರಿ ಮುಗಿಸಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಮಂದಿರದ ಅರ್ಚಕರಿಗೆ ನೀಡುವ ವೇತನವನ್ನು ಶೇ.35ರಿಂದ ಶೇ.40ರಷ್ಟು ಏರಿಕೆ ಮಾಡಲಾಗಿದೆ.
ರಾಮಮಂದಿರ ನಿರ್ಮಾಣದಲ್ಲಿ ತೊಡಗಿರುವ, ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರು, ಸಹಾಯಕ ಅರ್ಚಕರು ಹಾಗೂ ವಿವಿಧ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೇತನ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿದೆ. ಸ್ಟೋರ್ ಕೀಪರ್, ಮ್ಯಾನೇಜರ್, ಮಾಲಿಗಳಿಗೂ ವೇತನ ಹೆಚ್ಚಳದ ಸಿಹಿ ಸುದ್ದಿಯನ್ನು ನೀಡಲಾಗಿದೆ.
ರಾಮಮಂದಿರ ನಿರ್ಮಾಣ ಕಾಮಗಾರಿ
जा पर कृपा राम की होई।
— Ashish Mishra / Shriramkiayodhya 🚩 (@meashishmishra) September 9, 2023
ता पर कृपा करहिं सब कोई॥#Rammandir #Ayodhya #JaiShreeRam pic.twitter.com/73Ma2tkYva
ಅರ್ಚಕರ ಸಂಬಳ ಎಷ್ಟು?
ರಾಮಮಂದಿರ ಅರ್ಚಕರಿಗೆ ಇದುವರೆಗೆ ಮಾಸಿಕ 25 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಈಗ ಅವರಿಗೆ 32,900 ರೂ. ನೀಡಲಾಗುತ್ತದೆ. ಹಾಗೆಯೇ, ಸಹಾಯಕ ಅರ್ಚಕರಿಗೆ 20 ಸಾವಿರ ರೂ. ಇದ್ದ ಸಂಬಳವನ್ನು 31 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಆದರೆ, ಮಾಲಿಗಳು, ಮ್ಯಾನೇಜರ್‌ಗಳು ಸೇರಿ ಇತರೆ ಸಿಬ್ಬಂದಿಗೆ ಎಷ್ಟು ಸಂಬಳ ನೀಡಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.
ರಾಮಮಂದಿರಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಉದ್ಘಾಟನೆ ಮಾಡಲಿದ್ದಾರೆ. ಅದ್ಧೂರಿ ಕಾರ್ಯಕ್ರಮದಲ್ಲಿ ದೇಶದ 10 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ರಾಮಮಂದಿರ ಲೋಕಾರ್ಪಣೆಗೂ ಮೊದಲು ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ರಾಮಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ರಾಮಮಂದಿರದ ಲೋಕಾರ್ಪಣೆ ವೇಳೆ ನಾಲ್ಕು ದಿನ ವಿಶೇಷ ಪೂಜೆ ಮಾಡಲಾಗುತ್ತದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ. ಈಗಾಗಲೇ ಗರ್ಭಗುಡಿ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಹೆಚ್ಚಿನ ಕಾರ್ಮಿಕರು ಮಂದಿರ ನಿರ್ಮಾಣ ಕಾರ್ಯದಲ್ಲಿ ಹಗಲು ರಾತ್ರಿ ಎನ್ನದೆ ತೊಡಗಿದ್ದಾರೆ.
ಇದನ್ನೂ ಓದಿ: Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್ ಸಿಟಿʼ ನಿಮಗಾಗಿಯೇ ಇದೆ!
ಆರ್‌ಎಸ್‌ಎಸ್ ಹೆಗಲಿಗೆ ಕಾರ್ಯಕ್ರಮಗಳ ಉಸ್ತುವಾರಿ
ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.