Site icon Vistara News

PM Modi’s Diwali | ಗಡಿಯಲ್ಲಿ ವೀರ ಯೋಧರ ಜತೆಗೆ ಪ್ರಧಾನಿ ಮೋದಿ ಸತತ 9 ವರ್ಷಗಳಿಂದ ದೀಪಾವಳಿ ಆಚರಣೆ

deepavali

ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ 2014ರಿಂದಲೂ ಪ್ರತಿ ವರ್ಷ ದೀಪಾವಳಿಯನ್ನು ದೇಶದ ಗಡಿ ಭಾಗಗಳಲ್ಲಿ ವೀರ ಯೋಧರ ಜತೆಗಿದ್ದು ಆಚರಿಸುತ್ತಾರೆ. ( PM Modi’s Diwali) ಈ ವರ್ಷ ಕಾರ್ಗಿಲ್‌ನಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ಭಾನುವಾರ 15.76 ಲಕ್ಷ ದೀಪಗಳನ್ನು ಬೆಳಗುವ ದೀಪೋತ್ಸವದಲ್ಲಿ ಪ್ರಧಾನಿ ಭಾಗವಹಿಸಿದ್ದರು. ಕಳೆದ ವಾರ ಉತ್ತರಾಖಂಡ್‌ನಲ್ಲಿ ಧಾರ್ಮಿಕ ಕ್ಷೇತ್ರಗಳಾದ ಕೇದಾರನಾಥ ಮತ್ತು ಬದರಿನಾಥದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

ಪ್ರಧಾನಿಯವರು ಪ್ರತಿ ವರ್ಷ ದೀಪಾವಳಿಯ ದಿನ ದೂರದ ಗಡಿಗೆ ತೆರಳಿ, ಅಲ್ಲಿ ದೇಶವನ್ನು ಕಾಯುವ ಯೋಧರ ಜತೆಗೆ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಸಿಹಿ ತಿಂಡಿಗಳನ್ನು ಹಂಚುತ್ತಾರೆ. ಆತ್ಮೀಯವಾಗಿ ಕುಶಲೋಪರಿ ನಡೆಸುತ್ತಾರೆ. 2014-2022ರ 9 ವರ್ಷಗಳಲ್ಲಿ ನಾನಾ ಭಾಗಗಳ ಗಡಿಗಳಲ್ಲಿ ಪ್ರಧಾನಿ ಮೋದಿಯವರು ಆಚರಿಸಿದ ದೀಪಾವಳಿಗಳ ವಿವರ ಇಂತಿದೆ.

2021: ಜಮ್ಮುವಿನ ನೌಶೇರಾದಲ್ಲಿ ಸೈನಿಕರ ಜತೆಗೆ ಕಳೆದ ವರ್ಷ ದೀಪಾವಳಿ ಆಚರಿಸಿದ್ದರು. ಕರ್ತವ್ಯದ ವೇಳೆ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ರಜೌರಿ ಜಿಲ್ಲೆಯಲ್ಲಿರುವ ನೌಶೇರಾದಲ್ಲಿ ಗಡಿ ನಿಯಂತ್ರಣ ರೇಖೆ ಹಾದು ಹೋಗುತ್ತದೆ. ನೌಶೇರಾದಲ್ಲಿ ನಮ್ಮ ವೀರ ಯೋಧರ ಜತೆ ದೀಪಾವಳಿ ಆಚರಿಸಲು ನನಗೆ ಹೆಮ್ಮೆ ಎನಿಸುತ್ತದೆ. ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ, ಬದಲಿಗೆ ಅವರ ಮನೆಯ ಸದಸ್ಯನಾಗಿ ಬಂದಿರುವೆ ಎಂದು ಪಿಎಂ ಮೋದಿ 2021ರಲ್ಲಿ ಟ್ವೀಟ್‌ ಮಾಡಿದ್ದರು.

2020: ಮೋದಿಯವರು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಯೋಧರ ಜತೆಗೆ ದೀಪಾವಳಿ ಆಚರಿಸಿದ್ದರು. ದೀಪಾವಳಿಯನ್ನು ನಾವೆಲ್ಲ ನಮ್ಮ ಮನೆ ಮಂದಿಯ ಜತೆಗೆ ಆಚರಿಸುತ್ತೇವೆ. ಹೀಗಾಗಿ ನಾನು ಕೂಡ ನಿಮ್ಮೊಂದಿಗೆ ಆಚರಿಸುತ್ತೇನೆ. ಏಕೆಂದರೆ ನನಗೆ ನೀವೆಲ್ಲರೂ ನನ್ನ ಸ್ವಂತ ಕುಟುಂಬದವರಾಗಿದ್ದೀರಿ. ನಾನು ನಿಮಗೋಸ್ಕರ ಸಿಹಿ ತಂದಿರುವೆ. ಆದರೆ ಇದು ಕೇವಲ ನನ್ನದಲ್ಲ, ಇದು 130 ಕೋಟಿ ಭಾರತೀಯರದ್ದು ಎಂದು ಪ್ರಧಾನಿ ಮೋದಿ ಹೃದಯಸ್ಪರ್ಶಿಯಾಗಿ ಹೇಳಿದ್ದರು.

2019: ರಜೌರಿಯಲ್ಲಿ ಈ ವರ್ಷವೂ ದೀಪಗಳ ಹಬ್ಬವನ್ನು ಆಚರಿಸಿದ್ದರು.

2018: ಮೋದಿಯವರು ಉತ್ತರಾಖಂಡ್‌ನ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಐಟಿಬಿಪಿ ಜವಾನರ ಜತೆಗೆ ಕಾಲ ಕಳೆದು ದೀಪಾವಳಿಯ ಶುಭ ಹಾರೈಸಿದ್ದರು.

2017: ಕಾಶ್ಮೀರದಲ್ಲಿ ಗುರ್ಜೆ ಸೆಕ್ಟರ್‌ನಕಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಸೈನಿಕರ ಜತೆ ದೀಪಾವಳಿ ಆಚರಿಸಿದ್ದರು.

2016: ಹಿಮಾಚಲ ಪ್ರದೇಶದಲ್ಲಿ ಚೀನಾ ಗಡಿಗೆ ಸಮೀಪದ ಚಾಂಗೊ ಗ್ರಾಮದಲ್ಲಿ ಯೋಧರ ಜತೆಗೆ ದೀಪಾವಳಿ ಆಚರಿಸಿದ್ದರು. ಅತಿ ದೂರದ ಗಡಿ ಪ್ರದೇಶ ಇದಾಗಿತ್ತು.

2015: ಪಂಜಾಬ್‌ನಲ್ಲಿ ಯೋಧರ ಜತೆಗೆ ದೀಪಾವಳಿ ಆಚರಿಸಿದ್ದರು. 1965ರ ಭಾರತ-ಪಾಕ್‌ ಯುದ್ಧಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಈ ಕಾರ್ಯಕ್ರಮ ನಡೆದಿತ್ತು.

2014: ಸಿಯಾಚಿನ್‌ ಹಿಮಶಿಖರದಲ್ಲಿ ಯೋಧರು ಮತ್ತು ಸೇನಾಧಿಕಾರಿಗಳ ಜತೆಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಆಗ ಸುಮಾರು ಹತ್ತು ವರ್ಷಗಳಲ್ಲಿಯೇ ಸಿಯಾಚಿನ್‌ಗೆ ಭೇಟಿ ನೀಡಿದ್ದ ಪ್ರಧಾನಿ ಅವರಾಗಿದ್ದರು.

Exit mobile version