ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನದ ಮೇಲೆ ಭವ್ಯವಾದ ರಾಷ್ಟ್ರೀಯ ಲಾಂಛನವನ್ನು ಸೋಮವಾರ ಅನಾವರಣಗೊಳಿಸಿದರು.
ನೂತನ ಸಂಸತ್ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ೬.೫ ಮೀಟರ್ ಎತ್ತರ ಮತ್ತು ೪.೪ ಮೀಟರ್ ಅಗಲವಿದ್ದು, ೯,೫೦೦ ಕೆ.ಜಿ ತೂಕವಿದೆ.
ರಾಷ್ಟ್ರ ಲಾಂಛನಕ್ಕೆ ಪೂರಕವಾಗಿ ಉಕ್ಕಿನಿಂದ ತಯಾರಿಸಿದ ೬,೫೦೦ ಕೆ.ಜಿ ತೂಕದ ರಚನೆಯನ್ನೂ ಅಳವಡಿಸಲಾಗಿದೆ. ಒಟ್ಟು ಎಂಟು ಹಂತಗಳಲ್ಲಿ ಈ ಲಾಂಛನವನ್ನು ನಿರ್ಮಿಸಲಾಗಿದೆ. ಮಣ್ಣಿನ ಮಾದರಿ, ಕಂಪ್ಯೂಟರ್ ಗ್ರಾಫಿಕ್, ಕಂಚಿನ ಲೋಹದಿಂದ ತಯಾರಿಕೆ, ಪಾಲಿಷಿಂಗ್ ಸೇರಿ ಎಂಟು ಹಂತಗಳಲ್ಲಿ ಸಿದ್ಧಪಡಿಸಲಾಗಿದೆ. ಸಾರನಾಥದಲ್ಲಿನ ಅಶೋಕಸ್ಥಂಭದ ಮೇಲ್ಭಾಗದಲ್ಲಿ ಇರುವ ನಾಲ್ಕು ಸಿಂಹಗಳ ಪ್ರತಿಮೆ ಭಾರತದ ರಾಷ್ಟ್ರ ಲಾಂಛನವಾಗಿದೆ.
೧೫೦ ಬಿಡಿ ಭಾಗಗಳಾಗಿ ವಿಂಗಡಿಸಿ ಜೋಡಣೆ
ಈ ಬೃಹತ್ ರಾಷ್ಟ್ರೀಯ ಲಾಂಛನವನ್ನು ೧೫೦ ಬಿಡಿ ಭಾಗಗಳಾಗಿ ವಿಂಗಡಿಸಿ, ಚಾವಣಿಯಲ್ಲಿ ಜೋಡಿಸಿ ಅಳವಡಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಈ ಕೆಲಸ ಆರಂಭವಾಗಿ ಪೂರ್ಣವಾಗಲು ಎರಡು ತಿಂಗಳಿನ ಸಮಯ ತೆಗೆದುಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಂಛನದ ಅನಾವರಣ ವೇಳೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ ಉಪಸ್ಥಿತರಿದ್ದರು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲಾಂಛನವನ್ನು ಅನಾವರಣಗೊಳಿಸಲಾಯಿತು.
ಚಳಿಗಾಲದ ಅಧಿವೇಶನ ಹೊಸ ಸಂಸತ್ ಭವನದಲ್ಲಿ ಸಂಭವ
ಮುಂಬರುವ ಚಳಿಗಾಲದ ಅಧಿವೇಶನವನ್ನು ಹೊಸ ಸಂಸತ್ ಭವನದಲ್ಲಿ ನಡೆಸಲು ನಾವು ಯತ್ನಿಸುತ್ತಿದ್ದೇವೆ. ಸಮರೋಪಾದಿಯಲ್ಲಿ ಸಿದ್ಧತೆ ನಡೆದಿದೆ. ಇಡೀ ಯೋಜನೆಯನ್ನು ಮುಕ್ತಾಯಗೊಳಿಸಲು ಅಕ್ಟೋಬರ್-ನವೆಂಬರ್ ತನಕ ಕಾಲಾವಕಾಶ ನೀಡಲಾಗಿದೆ. ಚಳಿಗಾಲದ ಅಧಿವೇಶನ ಹೊಸ ಭವನದಲ್ಲಿ ನಡೆಯುವ ವಿಶ್ವಾಸ ಇದೆʼʼ ಎಂದು ಬಿರ್ಲಾ ತಿಳಿಸಿದರು.
ನೂತನ ಸಂಸತ್ ಭವನದಲ್ಲಿ ಭಾರತದ ವೇದ, ಯೋಗ, ಉಪನಿಷತ್ತು, ಜಾನಪದ, ಸೂಫಿ, ಕಬೀರ ಪಥ ಸೇರಿದಂತೆ ಎಲ್ಲ ಸಂಸ್ಕೃತಿಗಳನ್ನು ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು, ವರ್ಣಚಿತ್ರಗಳನ್ನು ಅಳವಡಿಸಲಾಗಿದೆ.
ರಾಷ್ಟ್ರೀಯ ಚಿಹ್ನೆಗಳಾದ ತಾವರೆ, ನವಿಲು, ಆಲದ ಮರದ ಚಿತ್ರಣವನ್ನು ಒಳಾಂಗಣದ ವಿನ್ಯಾಸದಲ್ಲಿ ಅಳವಡಿಸಲಾಗಿದೆ. ನೂತನ ಸಂಸತ್ ಭವನದಲ್ಲಿ ಲೋಕಸಭಾ ಸದನದ ಥೀಮ್ ರಾಷ್ಟ್ರೀಯ ಪಕ್ಷಿ ನವಿಲನ್ನು ಒಳಗೊಂಡಿದೆ. ರಾಜ್ಯಸಭಾ ಸದನದ ಥೀಮ್ ರಾಷ್ಟ್ರೀಯ ಪುಷ್ಪ ತಾವರೆಯ ಥೀಮ್ ಅನ್ನು ಒಳಗೊಂಡಿದೆ. ಸೆಂಟ್ರಲ್ ಲೌಂಜ್ ಮತ್ತು ಆವರಣದ ಥೀಮ್ ರಾಷ್ಟ್ರೀಯ ವೃಕ್ಷ ಆಲದ ಮರವನ್ನು ಒಳಗೊಂಡಿದೆ.
ರಾಷ್ಟ್ರಪತಿ ಭವನದಲ್ಲಿ ಇರುವಂತೆ ಛಾವಣಿಯ ಮೇಲೆ ಸಾಂಪ್ರದಾಯಿಕ ಕಲಾಚಿತ್ರಗಳು, ಕಲಾತ್ಮಕ ವಿನ್ಯಾಸಗಳು ಇರಲಿವೆ. ನೂತನ ಪಾರ್ಲಿಮೆಂಟ್‌ನ ಒಳಾಂಗಣದ ಗೋಡೆಗಳಲ್ಲಿ ಸಂಸ್ಕೃತದ ಶ್ಲೋಕಗಳ ಕೆತ್ತನೆ ಇರಲಿದೆ.
ಶ್ರಮಜೀವಿಗಳ ಜತೆ ಪ್ರಧಾನಿ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ರಾಷ್ಟ್ರೀಯ ಲಾಂಛನ ಅನಾವರಣದ ವೇಳೆಯಲ್ಲಿ, ಭವನದ ನಿರ್ಮಾಣದಲ್ಲಿ ದುಡಿದಿರುವ ಕಾರ್ಮಿಕರ ಜತೆಗೆ ಆತ್ಮೀಯವಾಗಿ ಮಾತನಾಡಿದರು. ದೇಶ ಸೇವೆಯಲ್ಲಿ ನಿಮ್ಮ ಕೊಡುಗೆಯ ಬಗ್ಗೆ ನಮಗೆಲ್ಲ ಬಹಳ ಹೆಮ್ಮೆ ಇದೆ ಎಂದು ಹುರಿದುಂಬಿಸಿದರು.