ನವ ದೆಹಲಿ: ಹತ್ತು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ರೋಜ್‌ಗಾರ್ ಮೇಳ(Rozgar Mela)ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈ ಮೇಳವು ಅಕ್ಟೋಬರ್ 22ರಿಂದ ನಡೆಯಲಿದೆ. ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಕೆಲವು ತಿಂಗಳ ಹಿಂದೆಯೇ ಪ್ರಧಾನಿಗಳು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸೂಚಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ವೇಳೆ, ಹೊಸದಾಗಿ ಕೆಲಸಕ್ಕೆ ನೇಮಕಗೊಂಡಿರುವ ಸುಮಾರು 75 ಸಾವಿರ ಮಂದಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯವು ಅಧಿಕೃತವಾಗಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದ 39 ಇಲಾಖೆ/ಸಚಿವಾಲಯಗಳಿಗೆ ದೇಶಾದ್ಯಂತ ಜನರು ನೌಕರಿಗೆ ಸೇರಿಕೊಳ್ಳಲಿದ್ದಾರೆ. ಗ್ರೂಪ್ ಎ, ಗ್ರೂಪ್ ಬಿ(ಗೆಜೆಟೆಡ್), ಗ್ರೂಪ್ ಬಿ(ನಾನ್ ಗೆಜೆಟೆಡ್) ಮತ್ತು ಗೂಪ್ರ್ ಸಿ ಕೆಟಗರಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಕಳೆದ ಜೂನ್ ತಿಂಗಳಲ್ಲಿ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದರು. ಅದರ ಭಾಗವಾಗಿಯೇ ಈಗ ನೇಮಕಾತಿ ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ | IT Jobs | ಐಟಿ ಕಂಪನಿಗಳಿಂದ 6 ತಿಂಗಳಿನಲ್ಲಿ 1 ಲಕ್ಷ ಹೊಸಬರಿಗೆ ಉದ್ಯೋಗ