ನವ ದೆಹಲಿ: ಮುಂದಿನ 25 ವರ್ಷಗಳನ್ನು ನಾವು ಸಂಕಲ್ಪ ಶಕ್ತಿಯಿಂದ ಮುನ್ನಡೆಯಬೇಕಾಗಿದೆ. ಆ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲೇಬೇಕು. ( Independence Day ) ಅದಕ್ಕಾಗಿ ನಮ್ಮ ಪಂಚಪ್ರಾಣಗಳನ್ನು ಕೇಂದ್ರೀಕರಿಸಬೇಕಾಗಿದೆ. ಅತ್ಯುನ್ನತ ಭಾರತ, ಗುಲಾಮಿ ಮನಸ್ಥಿತಿ ನಿವಾರಣೆ, ದೇಶದ ಪರಂಪರೆಯ ಬಗ್ಗೆ ಹೆಮ್ಮೆ, ವಿವಿಧತೆಯಲ್ಲಿ ಏಕತೆ, ನಾಗರಿಕ ಕರ್ತವ್ಯದಲ್ಲಿ ನಿಷ್ಠೆಗಳು ನಮ್ಮ ಪಂಚಪ್ರಾಣಗಳಾಗಬೇಕು. ಈ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಬೇಕು ಎಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿನ ತಮ್ಮ ಭಾಷಣದಲ್ಲಿ ತಿಳಿಸಿದರು.
ನಮ್ಮ ದೇಶದ ಚರಿತ್ರೆ ಅತ್ಯುನ್ನತವಾದುದು. ನಾವು ಶ್ರೇಷ್ಠವಾದುದರತ್ತ ಗಮನ ಕೊಡಬೇಕು. ನಮ್ಮ ಕನಸು ದೊಡ್ಡದಾಗಿದ್ದರೆ ನಮ್ಮ ಸಾಧನೆಯೂ ದೊಡ್ಡದಾಗುತ್ತದೆ. ದೇಶ ಮುಖ್ಯ ಎಂಬ ಸಂಕಲ್ಪ ನಮ್ಮದಾಗಬೇಕು. ದೇಶ ನೂರಾರು ವರ್ಷಗಳಿಂದ ಇಂಗ್ಲಿಷರಿಂದ ಆಳಿಸಿಕೊಂಡು ಗುಲಾಮಿ ಮನಸ್ಥಿತಿ ನಿವಾರಣೆಯಾಗಬೇಕು. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇದ್ದಾಗಲಷ್ಟೇ ನಾವು ಮುಂದುವರಿಯಲು ಸಾಧ್ಯ. ನಮ್ಮ ಏಕತೆ ನಮ್ಮ ಶಕ್ತಿಯಾಗಿದೆ. ನಾಗರಿಕ ಕರ್ತವ್ಯವು ಪ್ರಧಾನಿಗೂ ಒಂದೇ, ಮುಖ್ಯಮಂತ್ರಿಗೂ ಒಂದೇ, ಸಾಮಾನ್ಯ ನಾಗರಿಕನಿಗೂ ಒಂದೇ ಆಗಿದೆ. ಎಲ್ಲರೂ ಅದನ್ನು ಪಾಲಿಸಬೇಕಿದೆ ಎಂದು ವಿವರಿಸಿದರು.
ನಾವು ದೇಶದ ೧೦೦ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದರು. ಪ್ರಧಾನಿ ಮೋದಿಯವರು ಹೇಳಿದ ೫ ಸಂಕಲ್ಪಗಳು ಇಂತಿವೆ. ಇವುಗಳನ್ನು ಪಂಚಪ್ರಾಣಗಳೆಂದು ಅವರು ಕರೆದಿದ್ದಾರೆ.
ದೃಢ ಮತ್ತು ಉನ್ನತ ಮಟ್ಟದ ನಿರ್ಧಾರ : ಮೊದಲನೆಯದಾಗಿ ನಮ್ಮ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಲು ದೃಢ, ಅತ್ಯುನ್ನತ ಮಟ್ಟದ ನಿರ್ಧಾರ ಕೈಗೊಳ್ಳಬೇಕು.
ವಸಾಹತುಶಾಹಿ, ಗುಲಾಮಗಿರಿ ಮನಸ್ಥಿತಿ ಬೇಡ: ಎರಡನೆಯದಾಗಿ ವಸಾಹತುಶಾಹಿ ಪೂರ್ವಾಗ್ರಹಗಳು ನಮ್ಮನ್ನು ಕಾಡುತ್ತಿವೆ. ಅವುಗಳಿಂದ ಕಳಚಿಕೊಳ್ಳಬೇಕು. ವಸಾಹತುಶಾಹಿ ಕೀಳರಿಮೆಗಳ ಅಗತ್ಯವೂ ನಮಗಿಲ್ಲ. ನಾವು ಇತರರಂತೆ ಅನುಕರಣೆ ಮಾಡಬೇಕಿಲ್ಲ. ಯಾವುದೇ ಬಗೆಯ ಗುಲಾಮಗಿರಿ ಮನಸ್ಥಿತಿ ಬೇಡ. ಕೆಲವೊಮ್ಮೆ ಪ್ರತಿಭೆಗೆ ಭಾಷೆ ಅಡ್ಡಿಯಾಗಬಹುದು. ಆದರೆ ನಮ್ಮ ದೇಶದ ಭಾಷೆಗಳ ಬಗ್ಗೆ ನಾವು ಹೆಮ್ಮೆಪಡಬೇಕು. ಬೇರೆ ಜಗತ್ತಿನ ಮೌಲ್ಯಮಾಪನ ನಮಗೆ ಬೇಡ. ನಮ್ಮ ದೇಶದ ಅಸ್ಮಿತೆಗಳನ್ನು ನಾವು ಉಳಿಸಿಕೊಳ್ಳಲೇಬೇಕು. ಅದುವೇ ನಮ್ಮ ಹೆಮ್ಮೆಯಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಮ್ಮ ಪರಂಪರೆ ಬಗ್ಗೆ ಇರಲಿ ಹೆಮ್ಮೆ: ಮೂರನೆಯದಾಗಿ ನಾವು ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಪಡಬೇಕು. ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಅದು ನಮ್ಮ ಬೇರಿನ ಸಂಪರ್ಕವನ್ನು ಗಳಿಸಿಕೊಡುತ್ತದೆ. ಆಗ ಮಾತ್ರ ನಾವು ಎತ್ತರಕ್ಕೆ ಹಾರಬಹುದು. ಇಡೀ ಜಗತ್ತಿಗೆ ಪರಿಹಾರ ನೀಡಬಹುದು.
ದೇಶ ಮೊದಲು: ನಾಲ್ಕನೆಯದಾಗಿ ಎಲ್ಲರೂ ದೇಶ ಮೊದಲು ಎಂಬ ದಿವ್ಯ ಮಂತ್ರದೊಡನೆ ಸಂಘಟಿತರಾಗಬೇಕು. ಜನರ ನಡುವೆ ತಾರತಮ್ಯ ನೀತಿ ಇರಕೂಡದು. ಎಲ್ಲರಲ್ಲೂ ಸಮಾನತೆಯ ಭಾವ ಇರಬೇಕು. ಏಕತೆಗೆ ಆದ್ಯತೆ ಕೊಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಗೌರವ ನೀಡಬೇಕು. ಇದು ಭಾರತದ ಆಧಾರ ಸ್ಥಂಭ. ಎಲ್ಲರೂ ನಾರಿ ಶಕ್ತಿಯನ್ನು ಬೆಂಬಲಿಸಬೇಕು.
ಮಿತವ್ಯಯ: ಐದನೆಯದಾಗಿ ದೇಶದ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ವಿದ್ಯುತ್, ನೀರು, ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಬೇಕು. ಹಿತ-ಮಿತವಾಗಿ ಬಳಸಬೇಕು. ಇವುಗಳ ಸಂರಕ್ಷಣೆ ನಿರ್ಣಾಯಕ.