Site icon Vistara News

School Bus: ಸ್ಕೂಲ್‌ ಬಸ್‌ ಪಲ್ಟಿಯಾಗಿ 6 ಮಕ್ಕಳ ಸಾವು; ಪ್ರಾಂಶುಪಾಲೆ ಸೇರಿ ಮೂವರ ಬಂಧನ

School Bus

Principal Among 3 Arrested After 6 Students Killed In Haryana Bus Crash

ಚಂಡೀಗಢ: ಹರಿಯಾಣದ ಮಹೇಂದ್ರಗಢ (Mahendragarh) ಜಿಲ್ಲೆಯಲ್ಲಿ ಸ್ಕೂಲ್‌ ಬಸ್‌ (School Bus) ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 17 ಮಕ್ಕಳು ಗಾಯಗೊಂಡಿದ್ದಾರೆ. ರಂಜಾನ್‌ ರಜೆಯ ದಿನವೂ (Ramzan Holiday) ತರಗತಿಗಳಿಗೆ ರಜೆ ಘೋಷಿಸದ ಹಾಗೂ ಶಾಲಾ ವಾಹನದ ಚಾಲಕ ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲೆ (Principal) ಸೇರಿ ಮೂವರನ್ನು ಬಂಧಿಸಲಾಗಿದೆ.

ಜಿಲ್ಲೆಯಲ್ಲಿರುವ ಜಿಎಲ್‌ ಪಬ್ಲಿಕ್‌ ಶಾಲೆಯಲ್ಲಿ ನಾಲ್ಕರಿಂದ 10ನೇ ತರಗತಿವರೆಗೆ ಓದುತ್ತಿರುವ 40 ವಿದ್ಯಾರ್ಥಿಗಳಿದ್ದ ಶಾಲಾ ಬಸ್‌ ಮರಕ್ಕೆ ಡಿಕ್ಕಿಯಾಗಿ, ಮಗುಚಿ ಬಿದ್ದಿದೆ. ಮದ್ಯಪಾನ ಮಾಡಿದ್ದ ಬಸ್‌ ಚಾಲಕನು ನಿಯಂತ್ರಣ ತಪ್ಪಿದಾಗ ಬಸ್‌ನಿಂದ ಜಿಗಿದಿದ್ದಾನೆ. ಇದಾದ ಬಳಿಕ ಆರು ವಿದ್ಯಾರ್ಥಿಗಳು ಮೃತಪಟ್ಟರೆ, 17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದ 14 ವಿದ್ಯಾರ್ಥಿಗಳು ಡಿಸ್‌ಚಾರ್ಜ್‌ ಆಗಿದ್ದರೆ, ಇನ್ನೂ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಶಾಲಾ ಬಸ್‌ ವಾಹನ ಚಾಲಕನನ್ನು ಪೊಲೀಸರು ತಪಾಸಣೆ ಮಾಡಿದ್ದು, ಆತನು ಮದ್ಯಪಾನ ಮಾಡಿರುವುದು ಸಾಬೀತಾಗಿದೆ. ಇನ್ನು, ರಂಜಾನ್‌ ರಜೆ ಇದ್ದರೂ ತರಗತಿಗಳಿಗೆ ರಜೆ ಘೋಷಿಸದ ಕಾರಣ ಶಾಲೆ ಪ್ರಾಂಶುಪಾಲ, ಕಾರ್ಯದರ್ಶಿ ಹಾಗೂ ಪಾನಮತ್ತ ವಾಹನ ಚಾಲಕನನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ, ಆರು ವರ್ಷಗಳ ಹಿಂದೆಯೇ ಸ್ಕೂಲ್‌ ಬಸ್‌ನ ಫಿಟ್‌ನೆಸ್‌ ಸರ್ಟಿಫಿಕೇಟ್‌ನ ಅವಧಿ ಮುಗಿದಿದೆ ಎಂದು ಶಾಲೆಯ ದಾಖಲೆಗಳಿಂದ ತಿಳಿದುಬಂದಿದೆ. ಇದಕ್ಕಾಗಿ ರಸ್ತೆ ಸಾರಿಗೆ ಅಧಿಕಾರಿಯೊಬ್ಬನನ್ನು ಅಮಾನತುಗೊಳಿಸಲಾಗಿದೆ.

“ಸರ್ಕಾರಿ ರಜೆ ದಿನವೂ ತರಗತಿಗಳಿಗೆ ರಜೆ ಘೋಷಣೆ ಮಾಡಿಲ್ಲ. ವಾಹನದ ಫಿಟ್‌ನೆಸ್‌ ಸರ್ಟಿಫಿಕೇಟ್‌ ಇಲ್ಲ. ಚಾಲಕನು ಪಾನಮತ್ತನಾಗಿ ಚಾಲನೆ ಮಾಡಿದ್ದಾನೆ. ಹಾಗಾಗಿ, ಮೋಟಾರು ವಾಹನ ಕಾಯ್ದೆ, ಐಪಿಸಿ ಸೇರಿ ವಿವಿಧ ಕಾಯ್ದೆಗಳ ಅಡಿಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಹನ ಚಾಲಕ ಧರ್ಮೇಂದ್ರ, ಪ್ರಾಂಶುಪಾಲೆ ದೀಪ್ತಿ ಹಾಗೂ ಕಾರ್ಯದರ್ಶಿ ಹೋಶಿಯಾರ್‌ ಸಿಂಗ್‌ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ” ಎಂದು ಡಿಎಸ್‌ಪಿ ಮಹೇಂದ್ರ ರಾಣಾ ತಿಳಿಸಿದ್ದಾರೆ.

ಇದನ್ನೂ ಓದಿ: Bus Accident: ಹೊಸಕೋಟೆಯಲ್ಲಿ ಖಾಸಗಿ ಬಸ್‌ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯ

Exit mobile version