ಭೋಪಾಲ್: ಮಧ್ಯಪ್ರದೇಶದ ಮಾಂಡ್ಲಾದಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೈಸ್ತ ಧರ್ಮ ಗ್ರಂಥ ಬೈಬಲ್ ಬೋಧಿಸುವ (Teaching Bible At School) ಜತೆಗೆ ಮಕ್ಕಳನ್ನು ಚರ್ಚ್‌ಗೆ ಕರೆದುಕೊಂಡು ಹೋದ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆಯೇ, ಹಾಸ್ಟೆಲ್ ಅಧೀಕ್ಷಕರೊಬ್ಬರನ್ನು ಬಂಧಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯಾದ ಬಾಲ ಕಲ್ಯಾಣ ಸಮಿತಿಯ ಯೋಗೇಶ್ ಪರಾಶರ್ ತಂಡವು ಘೋರೆಘಾಟ್ ಪಂಚಾಯಿತಿ ವ್ಯಾಪ್ತಿಯ ಸೇಂಟ್ ಜೋಸೆಫ್ ಶಾಲೆಗೆ ಭೇಟಿ ನೀಡಿದಾಗ ಬೈಬಲ್ ಬೋಧನೆ ಪ್ರಕರಣ ಬಯಲಾಗಿದೆ. ಅದರಂತೆ, ಬಾಲ ಕಲ್ಯಾಣ ಸಮಿತಿಯು ದೂರು ನೀಡಿದೆ.
ಇದನ್ನೂ ಓದಿ: Conversion allegation | ಆಮಿಷ ಒಡ್ಡಿ ಮತಾಂತರ ಆರೋಪ: ಮೂವರು ಕ್ರೈಸ್ತ ಧರ್ಮದ ಪ್ರಚಾರಕರ ಬಂಧನ
ಇದಾದ ಬಳಿಕ ಶಾಲೆಯ ಪ್ರಾಂಶುಪಾಲ ಜಿ.ಬಿ. ಸೆಬಾಸ್ಟಿಯನ್ ವಿರುದ್ಧ ಪ್ರಕರಣ ದಾಖಲಾದರೆ, ಹಾಸ್ಟೆಲ್ ವಾರ್ಡನ್ ಕುನ್ವರ್ ಸಿಂಗ್ ಅವರನ್ನು ಬಂಧಿಸಲಾಗಿದೆ. “ಕುನ್ವರ್ ಸಿಂಗ್ ಎಂಬುವರನ್ನು ಬಂಧಿಸಿದ್ದೇವೆ. ಸೆಬಾಸ್ಟಿಯನ್ ಪರಾರಿಯಾಗಿದ್ದಾರೆ. ಸಿಂಗ್ ಅವರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ” ಎಂದು ಮಾವಾಯಿ ಪೊಲೀಸ್ ಠಾಣೆ ಇನ್‌ಚಾರ್ಜ್ ಸಂತೋಷ್ ಸಿಸೋಡಿಯಾ ತಿಳಿಸಿದ್ದಾರೆ.