ನವದೆಹಲಿ: ಸದನದ ಬಾವಿಗೆ ಪದೇ ಪದೇ ನುಗ್ಗಿ, ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಾರ್ಟಿ(AAP) 12 ಸಂಸದರು ವಿರುದ್ದ ಹಕ್ಕು ಬಾದ್ಯತಾ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ತನಿಖೆ ನಡೆಸುವಂತೆ ಸಂಸದೀಯ ಸಮಿತಿಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ (Jagdeep Dhankhar) ಸೂಚಿಸಿದ್ದಾರೆ. ಈ 12 ಸಂಸದರಲ್ಲಿ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕಾಂಗ್ರೆಸ್‌ನ ಎಲ್ ಹನುಮಂತಯ್ಯ (L. Hanumanthaiah) ಅವರೂ ಇದ್ದಾರೆ.
ರಾಜ್ಯಸಭೆಯ ವಾರ್ತಾಪತ್ರದ ಪ್ರಕಾರ, 12 ಸಂಸದರ ಪೈಕಿ 9 ಜನರು ಕಾಂಗ್ರೆಸ್ ಹಾಗೂ ಮೂವರು ಆಮ್ ಆದ್ಮಿ ಪಾರ್ಟಿಯ ಸಂಸದರಾಗಿದ್ದಾರೆ. ವಿಚಾರಣೆ ಎದುರಿಸಲಿರುವ ಕಾಂಗ್ರೆಸ್ ಸಂಸದರು- ಶಕ್ತಿ ಸಿನ್ಹಾ ಗೋಹಿಲ್, ನರನ್‌ಭಾಯಿ ಜೆ ರತ್ವಾ, ಸೈಯದ್ ನಾಸೀರ್ ಹುಸೇನ್, ಕುಮಾರ್ ಕೇತ್ಕರ್, ಇಮ್ರಾನ್ ಪ್ರತಾಪಗಢಿ, ಎಲ್ ಹನುಮಂತಯ್ಯ, ಪುಲೋ ದೇವಿ ನೇತಮ್, ಜೇಬಿ ಮ್ಯಾಥೇರ್ ಹಿಸಾಮ್ ಮತ್ತು ರಂಜೀತ್ ರಂಜನ್. ಇನ್ನು ಸಂಜಯ್ ಸಿಂಗ್, ಸುಶೀಲ ಕುಮಾರ್ ಗುಪ್ತಾ ಹಾಗೂ ಸಂದೀಪ್ ಕುಮಾರ್ ಪಾಠಕ್ ಅವರು ಆಪ್‌ನ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: Budget Session: ಪ್ರಧಾನಿ ಮೋದಿಯನ್ನು ಮೌನಿಬಾಬಾ ಎಂದ ಖರ್ಗೆ; ಇಂಥ ಮಾತು ಬೇಡ ಎಂದ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್
ಬಜೆಟ್ ಸಂಸತ್ ಅಧಿವೇಶನದಲ್ಲಿ ಅದಾನಿ ಕುರಿತಾದ ವಿಷಯಕ್ಕೆ ಸಂಬಂಧಿಸಿದಂತೆ ಕಲಾಪವು ನಡೆಯಲು ಸಾಧ್ಯವಾಗಿಲ್ಲ. ಅದಾನಿ ಷೇರು ವ್ಯವಹಾರ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚನೆಗೆ ಆಗ್ರಹಿಸಿ, ಪ್ರತಿಪಕ್ಷಗಳು ಆಗ್ರಹಿಸಿದ್ದವು. ಆದರೆ, ಪ್ರತಿಪಕ್ಷಗಳ ಬೇಡಿಕೆಗೆ ಸರ್ಕಾರ ಒಪ್ಪದಿದ್ದಾಗ ಕಲಾಪಗಳು ಪೂರ್ತಿ ಗದ್ದಲದಲ್ಲಿ ಮುಳುಗಿದ್ದವು.