Site icon Vistara News

Priyanka Gandhi | ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಹೊಸ ‘ಎಲೆಕ್ಷನ್ ಸ್ಟಾರ್’ ಪ್ರಿಯಾಂಕಾ ಗಾಂಧಿ!

Priyanka Gandhi to visit karnataka for Vocal for Local campaign

ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲ ಪ್ರದೇಶ ಚುನಾವಣೆಯ ಗೆಲುವು ಆ ಪಕ್ಷದ ಉತ್ಸಾಹವನ್ನು ಹೆಚ್ಚಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹಲವು ಎಲೆಕ್ಷನ್ ಸೋತಿದ್ದ ಕಾಂಗ್ರೆಸ್‌ಗೆ ಈಗ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಹೊಸ ಆಶಾ ಕಿರಣವಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಗೆಲುವಿನಲ್ಲಿ ಪ್ರಿಯಾಂಕಾ ಅವರ ಪಾತ್ರ ಹಿರಿದಾಗಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ನಿರತವಾಗಿದ್ದ ರಾಹುಲ್ ಗಾಂಧಿ ಅವರು ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳಲಿಲ್ಲ. ಆಗ ಪ್ರಿಯಾಂಕಾ ಗಾಂಧಿ ಅವರು ಆ ಹೊಣೆ ಹೊತ್ತುಕೊಂಡರು. ವಿಶೇಷವಾಗಿ ಹಿಮಾಚಲದಲ್ಲಿ ಪೂರ್ಣ ಪ್ರಮಾಣದಲ್ಲಿ ಚುನಾವಣಾ ತಂತ್ರಗಳನ್ನು ಹೆಣೆದು, ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾದರು. ಅದರ ಪರಿಣಾಮ ಈಗ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ರಚಿಸುತ್ತಿದೆ.

ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸುಮಾರು 20 ರ‍್ಯಾಲಿಗಳನ್ನು ನಡೆಸಿದ್ದಾರೆ. ಡೋರ್ ಟು ಡೋರ್ ಪ್ರಚಾರ ಕೈಗೊಂಡಿದ್ದಾರೆ. ಮಹಿಳಾ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಕಾಂಗ್ರೆಸ್‌ಗೆ ಪ್ರಿಯಾಂಕಾ ನೇತೃತ್ವ ಸಹಕಾರಿಯಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಹಿಮಾಚಲದ ಮತದಾರರಿಗೆ ಪ್ರಿಯಾಂಕಾ ಹೊರಗಿನ ನಾಯಕಿ ಎನಿಸಿಕೊಳ್ಳಲಿಲ್ಲ. ಯಾಕೆಂದರೆ, ಮಶೋಬ್ರಾದಲ್ಲಿ ತಮ್ಮ ಕಾಟೇಜ್‌‌ಗೆ ಆಗಾಗ ಅವರು ಬರುತ್ತಿರುತ್ತಿರುತ್ತಾರೆ. ಇಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಲು ಇದು ಒಂದು ಕಾರಣವಾಗಿದೆ.

ಇಷ್ಟು ಮಾತ್ರವೇ ಹಿಮಾಚಲ ಪ್ರದೇಶ ಚುನಾವಣೆ ಗೆಲ್ಲಲು ಸಾಧ್ಯವಾಯಿತೇ? ಖಂಡಿತ ಇಲ್ಲ. ಯಾಕೆಂದರೆ, ಹಿಮಾಚಲದ ಕಾಂಗ್ರೆಸ್‌ನಲ್ಲಿ ಒಳಜಗಳ ಸಾಕಷ್ಟಿದೆ. ಮುಕೇಶ್ ಅಗ್ನಿಹೋತ್ರಿ, ಸುಖ್ವಿಂದರ್ ಸುಖು, ಪ್ರತಿಭಾ ಸಿಂಗ್ ಅವರು ಸಿಎಂ ಸ್ಥಾನಕ್ಕೆ ಚುನಾವಣಾ ಪೂರ್ವವೇ ಟವೆಲ್‌ ಹಾಕಿದ್ದರು. ಹಾಗಾಗಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದಾಗಿ ಪ್ರಚಾರ ನಡೆಸುವುದು ಸಾಮಾನ್ಯ ಕೆಲಸವೇನೂ ಅಲ್ಲ. ಈ ಟಾಸ್ಕ್ ಅನ್ನು ಕೂಡ ಪ್ರಿಯಾಂಕಾ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ | Himachal pradesh Election | ಹಿಮಾಚಲ್‌ನಲ್ಲಿ ನಡೆದಿದ್ದು ಪ್ರಿಯಾಂಕಾ ಕಮಾಲ್‌: ಕಷ್ಟ ಕಾಲದಲ್ಲಿ ಕೈ ಹಿಡಿದು ಮುನ್ನಡೆಸಿದ ನಾಯಕಿ

Exit mobile version