Site icon Vistara News

Congress Party : ಉತ್ತರ ಪ್ರದೇಶ ಉಸ್ತುವಾರಿಯಿಂದ ಪ್ರಿಯಾಂಕಾ ಗಾಂಧಿ ಔಟ್!

Priyanka Gandhi

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರದ ಭಾರೀ ಮುಖಭಂಗ ಅನುಭವಿಸಿದ ಹಿನ್ನೆಲೆ ಮತ್ತು 2024 ರ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಪಕ್ಷ (Congress Party) ತನ್ನ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದೆ. ಹೊಸ ರಚನೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಯುಪಿ ಕಾಂಗ್ರೆಸ್ ಉಸ್ತುವಾರಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಅವರಿಗೆ ಯಾವುದೇ ಹೊಣೆಗಾರಿಕೆ ಕೊಟ್ಟಿಲ್ಲ ಇದಲ್ಲದೆ, ಸಚಿನ್ ಪೈಲಟ್ (Sachin Pilot) ಅವರನ್ನು ಛತ್ತೀಸ್​ಗಢದ ಕಾಂಗ್ರೆಸ್ ಉಸ್ತುವಾರಿಯಾಗಿ ಮತ್ತು ರಮೇಶ್ ಚೆನ್ನಿಥಾಲಾ ಅವರನ್ನು ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿಯಾಗಿ ಕಾಂಗ್ರೆಸ್ ನೇಮಿಸಿದೆ.

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಕುಲ್ ವಾಸ್ನಿಕ್ ಅವರನ್ನು ಗುಜರಾತ್​ನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಜಿತೇಂದ್ರ ಸಿಂಗ್ ಅವರನ್ನು ಅಸ್ಸಾಂ ಮತ್ತು ಮಧ್ಯಪ್ರದೇಶಕ್ಕೆ ನಿಯೋಜಿಸಲಾಗಿದೆ.

ಕರ್ನಾಟಕಕ್ಕೆ ಸುರ್ಜೇವಾಲಾ

ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ದೀಪಕ್ ಬಾಬರಿಯಾ ದೆಹಲಿ ಮತ್ತು ಹರಿಯಾಣವನ್ನು ನೋಡಿಕೊಳ್ಳಲಿದ್ದಾರೆ. ಉತ್ತರ ಪ್ರದೇಶಕ್ಕೆ ಪಕ್ಷವು ಅವಿನಾಶ್ ಪಾಂಡೆ ಅವರನ್ನು ಉಸ್ತುವಾರಿಯಾಗಿ ನೇಮಿಸಿದೆ. ಉತ್ತರಾಖಂಡದ ಉಸ್ತುವಾರಿಯಾಗಿ ಕುಮಾರಿ ಸೆಲ್ಜಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿ ಜಿಎ ಮಿರ್ ಅವರನ್ನು ನೇಮಿಸಲಾಗಿದೆ.

ದೀಪಾ ದಾಸ್ ಮುನ್ಷಿ ಅವರನ್ನು ಕೇರಳ, ಲಕ್ಷದ್ವೀಪ ಮತ್ತು ತೆಲಂಗಾಣದ ಉಸ್ತುವಾರಿಯಾಗಿ ನೇಮಿಸಲಾಗಿದೆ. ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಸಂವಹನ ಉಸ್ತುವಾರಿ ವಹಿಸಲಿದ್ದು, ಕೆ.ಸಿ.ವೇಣುಗೋಪಾಲ್ ಅವರು ಸಂಘಟನೆಗಳ ನೇತೃತ್ವ ವಹಿಸಲಿದ್ದಾರೆ. ಗುರ್ಗೀಪ್ ಸಿಂಗ್ ಸಪ್ಪಲ್ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಇದನ್ನೂ ಓದಿ: Lok Sabha Election: ಉತ್ತರ ಪ್ರದೇಶದಲ್ಲಿ ಟೆಂಪಲ್ ಕಾರಿಡಾರ್; ಬಿಜೆಪಿಗೆ ಮತಗಳ ಹೆದ್ದಾರಿ!

ರಮೇಶ್ ಚೆನ್ನಿತ್ತಲ ಅವರನ್ನು ಮಹಾರಾಷ್ಟ್ರ ಉಸ್ತುವಾರಿಯಾಗಿ, ಮೋಹನ್ ಪ್ರಕಾಶ್ ಅವರನ್ನು ಬಿಹಾರಕ್ಕೆ ಮತ್ತು ಡಾ.ಚೆಲ್ಲಕುಮಾರ್ ಅವರನ್ನು ಮೇಘಾಲಯ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಪಕ್ಷ ನೇಮಿಸಿದೆ.

ಅಲ್ಲದೆ, ಡಾ.ಅಜಯ್ ಕುಮಾರ್ ಅವರು ಒಡಿಶಾ, ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿ ವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರವನ್ನು ಭರತ್ ಸಿಂಗ್ ಸೋಲಂಕಿ, ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ರಾಜೀವ್ ಶುಕ್ಲಾ, ರಾಜಸ್ಥಾನದ ಉಸ್ತುವಾರಿಯನ್ನು ಸುಖ್ಜಿಂದರ್ ಸಿಂಗ್ ರಾಂಧವ, ಪಂಜಾಬ್ ಗೆ ದೇವೇಂದರ್ ಯಾದವ್, ಗೋವಾಕ್ಕೆ ಮಾಣಿಕ್ ರಾವ್ ಠಾಕ್ರೆ, ದಮನ್ ಮತ್ತು ದಿಯು ಮತ್ತು ದಾದರ್ ಮತ್ತು ನಗರ್ ಹವೇಲಿಯನ್ನು ನೋಡಿಕೊಳ್ಳಲಿದ್ದಾರೆ. ತ್ರಿಪುರಾ, ಸಿಕ್ಕಿಂ, ಮಣಿಪುರ ಮತ್ತು ನಾಗಾಲ್ಯಾಂಡ್ಗೆ ಕಾಂಗ್ರೆಸ್ ಗಿರೀಶ್ ಚಿದಂಕರ್ ಅವರನ್ನು ಉಸ್ತುವಾರಿಯಾಗಿ, ಮಾಣಿಕನ್ ಠಾಗೋರ್ ಅವರನ್ನು ಆಂಧ್ರಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಉಸ್ತುವಾರಿಯಾಗಿ ನೇಮಿಸಲಾಗಿದೆ.

Exit mobile version