Site icon Vistara News

ಮೊಹಾಲಿ ಗ್ರೆನೇಡ್‌ ದಾಳಿಯಲ್ಲಿ ಉಗ್ರರ ಕೈವಾಡ?: ಸ್ಥಳದಲ್ಲಿ ಬಿಗಿ ಭದ್ರತೆ, ಶಂಕಿತರು ಪೊಲೀಸ್‌ ವಶಕ್ಕೆ

ಮೊಹಾಲಿ: ಪಂಜಾಬ್‌ನ ಮೊಹಾಲಿಯಲ್ಲಿರುವ ರಾಜ್ಯ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಸೋಮವಾರ ಸಂಜೆ ರಾಕೆಟ್‌ ಚಾಲಿತ ಗ್ರೆನೇಡ್‌ ದಾಳಿಯಾಗಿದೆ. ಅಂದರೆ ರಾಕೆಟ್‌ ಮೂಲಕ ಗ್ರೆನೇಡ್‌ ಹಾರಿಸಿ ದಾಳಿ ನಡೆಸಿಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಪಿ ವಿರೇಶ್‌ ಕುಮಾರ್‌ ಭಾರ್ವಾ, ಗ್ರೆನೇಡ್‌ನಿಂದ ಸ್ಫೋಟವಾಗಿದೆ. ಹಾಗಂತ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಯಾರೂ ಗಾಯಗೊಂಡಿರುವ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಸೋಮವಾರ ಸಂಜೆ 7.45ರ ಹೊತ್ತಿಗೆ ಈ ದಾಳಿಯಾಗಿದ್ದು, ಗುಪ್ತಚರ ಇಲಾಖೆ ಪ್ರಧಾನ ಕಚೇರಿಯ ಒಂದು ಬದಿಯ ಗೋಡೆ ಒಡೆದುಹೋಗಿದೆ. ಗಾಜಿನ ಕಿಟಕಿ ಒಡೆದು, ಅದರ ಚೂರುಗಳೆಲ್ಲ ಕಚೇರಿಯ ಒಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಏಂದೂ ತಿಳಿಸಿದ್ದಾರೆ. ಪ್ರಕರಣದಲ್ಲಿ ಉಗ್ರರ ಕೈವಾಡ ಶಂಕೆ ವ್ಯಕ್ತವಾಗಿದೆ.  

ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ

ಘಟನೆಯ ಬಗ್ಗೆ ಇಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದು, ಮೊಹಾಲಿ ಸ್ಫೋಟದ ತನಿಖೆ ನಡೆಯುತ್ತಿದೆ. ಗ್ರೆನೇಡ್‌ ದಾಳಿ ನಡೆಸುವ ಮೂಲಕ ಪಂಜಾಬ್‌ನ ಶಾಂತಿಯನ್ನು ಹಾಳು ಮಾಡಲು ಪ್ರಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಕೆಲವು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರನ್ನೂ ಬಂಧಿಸುತ್ತಾರೆ ಎಂದು ಹೇಳಿದ್ದಾರೆ. ಹಾಗೆಯೇ, ಪಂಜಾಬ್‌ ಸ್ಫೋಟದ ಬಗ್ಗೆ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿ, ಮೊಹಾಲಿಯಲ್ಲಿ ನಡೆದ ಗ್ರೆನೇಡ್‌ ಸ್ಫೋಟ ಹೇಡಿತನದ ಕೃತ್ಯ. ಪಂಜಾಬ್‌ ಶಾಂತಿಯನ್ನು ಕದಡಲು ಯಾರೇ ಪ್ರಯತ್ನಿಸಿದರೂ ಅವರನ್ನು ಆಪ್‌ ಸರ್ಕಾರ ಖಂಡಿತ ಸುಮ್ಮನೆ ಬಿಡುವುದಿಲ್ಲ. ಆರೋಪಿಗಳು ಯಾರೇ ಆದರೂ ಅವರಿಗೆ ಕಠಿಣ ಶಿಕ್ಷೆಯನ್ನು ಪಂಜಾಬ್‌ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪ್ರತಿಪಕ್ಷಗಳು ಈ ಘಟನೆಯನ್ನು ಖಂಡಿಸುತ್ತಿವೆ. ನಿನ್ನೆ ಸಂಜೆಯೇ ಘಟನೆ ನಡೆದಿದ್ದರೂ ಇಂದು ಬೆಳಗ್ಗೆ 8ಗಂಟೆವರೆಗೆ ಮುಖ್ಯಮಂತ್ರಿ ಭಗಂವತ್‌ ಮಾನ್‌ ಒಂದೂ ಹೇಳಿಕೆ ನೀಡಲಿಲ್ಲ. ಎಂಟು ಗಂಟೆಯ ನಂತರ ಮಾತನಾಡಿದ್ದಾರೆ ಎಂದು ವಿಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ |ಯಾರೊಂದಿಗೂ ಮೈತ್ರಿಯಿಲ್ಲ, ಯಾರನ್ನಾದರೂ ಸೋಲಿಸಬೇಕೆಂಬ ಆಸೆಯೂ ಇಲ್ಲ: ಅರವಿಂದ್‌ ಕೇಜ್ರಿವಾಲ್‌

ಉಗ್ರದಾಳಿಯ ಶಂಕೆ

ಮೊಹಾಲಿಯಲ್ಲಿ ನಡೆದ ಗ್ರೆನೇಡ್‌ ದಾಳಿಯ ಹಿಂದೆ ಉಗ್ರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕಲು ಪಂಜಾಬ್‌ ಪೊಲೀಸರೂ ನಿರಾಕರಿಸಿದ್ದಾರೆ. ಮೊಹಾಲಿ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲೆ ನಡೆದ ರಾಕೆಟ್‌ ಚಾಲಿತ ಗ್ರೆನೇಡ್‌ ದಾಳಿಯ ಹಿಂದೆ ಉಗ್ರರ ಕೈವಾಡವಿಲ್ಲ ಎಂದು ನಾವೀಗಲೇ ಹೇಳಲಾಗುವುದಿಲ್ಲ. ಈ ವಿಚಾರದಲ್ಲಿ ನಿರ್ಲಕ್ಷ ಮಾಡದೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಕೇಸ್‌ಗೆ ಸಂಬಂಧಪಟ್ಟು ವಿಧಿವಿಜ್ಞಾನ ಪರೀಕ್ಷೆಗಳು ನಡೆಯುತ್ತಿವೆ ಎಂದು ಸ್ಥಳೀಯ ಹಿರಿಯ ಪೊಲೀಸ್‌ ಅಧಿಕಾರಿ ರವೀಂದರ್‌ ಪಾಲ್‌ ಸಿಂಗ್‌ ತಿಳಿಸಿದ್ದಾರೆ.  

ಮೊಹಾಲಿಯಲ್ಲಿ ಗುಪ್ತಚರ ಇಲಾಖೆಯ ಪ್ರಧಾನ ಕಚೇರಿ ಇರುವುದು ಜನನಿಬಿಡ ಪ್ರದೇಶದಲ್ಲಿ. ಇದರ ಪಕ್ಕದಲ್ಲೇ ಮಹಾರಾಜ ರಂಜಿತ್ ಸಿಂಗ್ ಸಶಸ್ತ್ರ ಪಡೆಗಳ ಪ್ರಿಪರೇಟರಿ ಅಕಾಡೆಮಿಯಿದೆ. ಸಮೀಪದಲ್ಲೇ ಸಹಾನಾ ಎಂಬ ಆಸ್ಪತ್ರೆಯಿದೆ ಮತ್ತು ಶಾಲೆಯೊಂದಿದೆ. ಅಲ್ಲೇ ಸುತ್ತಮುತ್ತ ವಸತಿ ಕಟ್ಟಡಗಳೂ ಇವೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಈ ಗ್ರೆನೇಡ್‌ ದಾಳಿಯಿಂದ ದೊಡ್ಡ ಅನಾಹುತವೇ ಆಗುತ್ತಿತ್ತು. ಸದ್ಯ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಪರೀಶೀಲನಾ ಕಾರ್ಯ ನಡೆಯುತ್ತಲೇ ಇದೆ. ಇನ್ನು ದಾಳಿ ನಡೆಸಲಾದ ಶಸ್ತ್ರ ಚೀನಾದ್ದು, ಅದರ ಮೇಲೆ ಮೇಡ್‌ ಇನ್‌ ಚೀನಾ ಎಂದು ಬರೆದುಕೊಂಡಿರುವ ಜತೆ, ಚೀನೀ ಅಕ್ಷರಗಳಲ್ಲಿ ವಿವಿಧ ಶಬ್ದಗಳು ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ | ಪಂಜಾಬ್‌ನಲ್ಲಿ ದೆಹಲಿ ಮಾದರಿ: ರಾಜಧಾನಿಗೆ ಭೇಟಿ ನೀಡಿದ ಭಗವಂತ್‌ ಮನ್‌

Exit mobile version