Site icon Vistara News

Project Cheetah: ಇದೇ ತಿಂಗಳು ಇನ್ನೂ ಐದು ಚೀತಾ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ

cheetah at Madhya Pradesh's Kuno National Park

cheetah at Madhya Pradesh's Kuno National Park

ಹೊಸ ದಿಲ್ಲಿ: ಜೂನ್‌ನಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ಐದು ಚೀತಾಗಳನ್ನು ಅವುಗಳು ಈಗಿರುವ ಶಿಬಿರಗಳಿಂದ ಹೊರಗೆ ಬಿಡಲಾಗುವುದು ಎಂದು ಕೇಂದ್ರ ಪರಿಸರ ಸಚಿವಾಲಯ ಸೋಮವಾರ ತಿಳಿಸಿದೆ.

ಇದರಲ್ಲಿ ಮೂರು ಹೆಣ್ಣು ಮತ್ತು ಎರಡು ಗಂಡು ಚೀತಾಗಳಾಗಿವೆ. ಸಾಮಾನ್ಯವಾಗಿ ಮಾನ್ಸೂನ್ ಅವಧಿಯಲ್ಲಿ ಪ್ರಾಣಿಗಳನ್ನು ಕಾಡಿಗೆ ಬಿಡಲಾಗುವುದಿಲ್ಲ. ಏಕೆಂದರೆ ಕಠಿಣ ಹವಾಮಾನ ಪರಿಸ್ಥಿತಿಯಿಂದಾಗಿ ಆಹಾರ ಮತ್ತು ಆಶ್ರಯ ಹುಡುಕಲು ಮತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅವುಗಳಿಗೆ ಕಷ್ಟವಾಗುತ್ತದೆ.

ಚೀತಾಗಳನ್ನು ಕೆಎನ್‌ಪಿಯ ಮುಕ್ತ ಪ್ರದೇಶದಲ್ಲಿ ಬಿಡಲಾಗುತ್ತದೆ. ಗಮನಾರ್ಹ ಅಪಾಯ ಇರಬಹುದಾದ ಪ್ರದೇಶಗಳಿಗೆ ಅವುಗಳು ಹೋದರೆ ಮಾತ್ರ ತಿರುಗಿ ಹಿಡಿಯಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಸಚಿವಾಲಯ ಹೇಳಿದೆ. ಅಪಾಯ ಇರುವ ಪ್ರದೇಶಗಳು ಎಂದರೆ ಅರಣ್ಯದಂಚಿನ, ಜನವಸತಿ ಪ್ರದೇಶಗಳು.

ಇದುವರೆಗೆ, ನಮೀಬಿಯಾದಿಂದ ತರಲಾದ ಎಂಟು ಚೀತಾಗಳಲ್ಲಿ ನಾಲ್ಕನ್ನು ಬೇಲಿಯಿಂದ ಸುತ್ತುವರಿದ ಶಿಬಿರಗಳಿಂದ ವಿಶಾಲ ಕಾಡಿಗೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ನಿರ್ದೇಶನದ ಮೇರೆಗೆ ತಜ್ಞರ ತಂಡ ʼಪ್ರಾಜೆಕ್ಟ್ ಚೀತಾʼದ ಪ್ರಸ್ತುತ ಸ್ಥಿತಿ ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ವಿಶ್ವವಿದ್ಯಾಲಯದ ಪಶುವೈದ್ಯ, ವನ್ಯಜೀವಿ ತಜ್ಞ ಆಡ್ರಿಯನ್ ಟೋರ್ಡಿಫ್, ದಕ್ಷಿಣ ಆಫ್ರಿಕಾದ ಚೀತಾ ಮೆಟಾಪೋಪ್ಯುಲೇಶನ್ ಪ್ರಾಜೆಕ್ಟ್‌ನ ಸದಸ್ಯ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ, ಭಾರತೀಯ ವನ್ಯಜೀವಿ ವಿಜ್ಞಾನಿ ಕಮರ್ ಖುರೇಷಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅರಣ್ಯ ಮಹಾನಿರೀಕ್ಷಕ ಅಮಿತ್ ಮಲ್ಲಿಕ್ ಈ ತಂಡದಲ್ಲಿದ್ದಾರೆ.

ಎಲ್ಲಾ ಚೀತಾಗಳು ಉತ್ತಮ ದೈಹಿಕ ಸ್ಥಿತಿಯಲ್ಲಿವೆ. ನಿಯಮಿತ ಅವಧಿಯಲ್ಲಿ ಬೇಟೆಯಾಡುತ್ತಿವೆ. ನೈಸರ್ಗಿಕ ನಡವಳಿಕೆಯನ್ನು ಪ್ರದರ್ಶಿಸುತ್ತಿವೆ. ಅವುಗಳ ವರ್ತನೆಯ ಆಧಾರದಲ್ಲಿ ಬಿಡುಗಡೆಗೆ ಆಯ್ಕೆ ಮಾಡಲಾಗಿದೆ. ಉಳಿದ ಚೀತಾಗಳು ಮಳೆಗಾಲ ಮುಗಿಯುವವರೆಗೆ ಶಿಬಿರಗಳಲ್ಲಿ ಉಳಿಯಲಿವೆ. ಈ ಆವರಣದಲ್ಲಿ ಗಂಡು- ಹೆಣ್ಣು ಚೀತಾಗಳು ಸೇರಲು ಅವಕಾಶಗಳನ್ನು ಸೃಷ್ಟಿಸಲಾಗಿದೆ.

ಇದನ್ನೂ ಓದಿ: Cheetah: ದಕ್ಷಿಣ ಆಫ್ರಿಕದಿಂದ ತಂದ ಇನ್ನೊಂದು ಚೀತಾ ಸಾವು; ಒಂದು ತಿಂಗಳಲ್ಲಿ ಎರಡನೇ ಚೀತಾ ನಿಧನ

Exit mobile version