ನವ ದೆಹಲಿ: 2014ರಿಂದ ಅಧಿಕೃತವಾಗಿ ಪ್ರಾರಂಭವಾದ ಕಾಂಗ್ರೆಸ್ ಸೋಲು, ಇವತ್ತಿಗೂ ಮುಂದುವರಿದಿದೆ. ಮೊದಮೊದಲು ನಿಧಾನವಾಗಿಯಾದರೂ ನಡೆದಾಡುತ್ತಿದ್ದ ಪಕ್ಷವೀಗ ತೆವಳುವ ಹಂತಕ್ಕೆ ಬಂದಿದೆ ಎಂದರೂ ತಪ್ಪಾಗಲಾರದು. ಅದರಲ್ಲೂ ಇಂದು ಗುಲಾಂ ನಬಿ ಆಜಾದ್ರಂಥ ಒಬ್ಬ ದಿಗ್ಗಜ ನಾಯಕನೇ ಕಾಂಗ್ರೆಸ್ ತೊರೆದ ಮೇಲೆ, ಆ ಪಕ್ಷದಲ್ಲಿ ಆಂತರಿಕ ಸ್ಥಿತಿ ಅದೆಷ್ಟು ದುಃಸ್ಥಿತಿಗೆ ತಲುಪಿದೆ ಎಂಬುದನ್ನು ಬಾಯ್ಬಿಟ್ಟು ಹೇಳಬೇಕಿಲ್ಲ..! ಕಳೆದ 50 ವರ್ಷಗಳಿಂದ ಕಾಂಗ್ರೆಸ್ಗೆ ನಿಷ್ಠೆ ತೋರಿಸಿದ್ದ ಅವರೀಗ ತಮ್ಮ ಅಸಮಾಧಾನಗಳನ್ನು ಹೊರಹಾಕಿಯೇ ಹೊರಬಿದ್ದಿದ್ದಾರೆ. ಅವರು ಸೋನಿಯಾ ಗಾಂಧಿಗೆ ಬರೆದ 5 ಪುಟಗಳ ಪತ್ರವೇ ಎಲ್ಲಕ್ಕೂ ಸಾಕ್ಷಿಯಾಗಿದೆ.
ಗುಲಾಂ ನಬಿ ಆಜಾದ್ 1949ರಲ್ಲಿ ಜಮ್ಮು-ಕಾಶ್ಮೀರದ ಭಲೆಸ್ಸ ಎಂಬಲ್ಲಿ ಹುಟ್ಟಿದವರು. 73 ವರ್ಷದ ಅವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು 1973ರಲ್ಲಿ. ಭಲೆಸ್ಸದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯಾರಂಭ ಮಾಡಿದರು. ಎರಡೇ ವರ್ಷದಲ್ಲಿ ಜಮ್ಮು-ಕಾಶ್ಮೀರ ಯುವ ಕಾಂಗ್ರೆಸ್ ಅಧ್ಯಕ್ಷರಾದರು. 1980ರಲ್ಲಿ ಅಖಿಲ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ನೇಮಕಗೊಂಡರು. ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ವಾಶಿಮ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಷ್ಟ್ರರಾಜಕಾರಣಕ್ಕೆ ಹೆಜ್ಜೆ ಇಟ್ಟರು. ಕೇಂದ್ರದಲ್ಲಿ ಸಚಿವರಾಗಿ ವಿವಿಧ ಇಲಾಖೆಗಳ ಹೊಣೆ ಹೊತ್ತಿದ್ದರು.
ಒಬ್ಬ ಕಾಶ್ಮೀರದವರಾಗಿ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿಂದ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದ ಅವರನ್ನು ಇಂದಿರಾ ಗಾಂಧಿ ಹೊಗಳಿದ್ದರು. ಆಜಾದ್ ಎಂದಿಗೂ ಯಾವುದಕ್ಕೂ ಇಲ್ಲ ಎನ್ನುವುದೇ ಇಲ್ಲ ಎಂಬ ಮಾತುಗಳನ್ನೂ ಮೆಚ್ಚುಗೆಯಿಂದ ಆಡಿದ್ದರು. ಹೀಗೆ ಇಂದಿರಾ ಗಾಂಧಿ ಕಾಲದಿಂದಲೂ ಗುಲಾಂ ನಬಿ ಆಜಾದ್ ಕಾಂಗ್ರೆಸ್ನ ಮತ್ತು ಗಾಂಧಿ ಕುಟುಂಬದ ನಿಷ್ಠಾವಂತರು ಎಂಬ ಟ್ಯಾಗ್ಲೈನ್ ಪಡೆದುಕೊಂಡೇ ಇತ್ತೀಚಿನವರೆಗೂ ಸಾಗಿಬಂದಿದ್ದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಕೊನೆಗೆ ಸೋನಿಯಾ ಗಾಂಧಿಯೊಂದಿಗೂ ಚೆನ್ನಾಗಿಯೇ ಹೊಂದಿಕೊಂಡು ಕೆಲಸ ಮಾಡಿದ ಅವರಿಗೆ ರಾಹುಲ್ ಗಾಂಧಿ ಮತ್ತು ಅವರ ಕಾರ್ಯಶೈಲಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ ಎಂಬುದು ಅವರು ಇಂದು ಬರೆದ ಪತ್ರದಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದಕ್ಕೆ ಬಹುಶಃ ಪೀಳಿಗೆಯ ನಡುವಿನ ಅಂತರವೂ (Generation Gap)ಕಾರಣ ಇರಬಹುದು..!
ಎಲ್ಲರೂ ಹೇಳುವ ಕಾರಣ ಒಂದೇ
2020ರಿಂದ ಇವತ್ತಿನವರೆಗೆ ಕಾಂಗ್ರೆಸ್ಗೆ ಹಲವು ಪ್ರಮುಖ ನಾಯಕರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಎಲ್ಲರೂ ನೀಡುವ ಕಾರಣ ಒಂದೇ. ‘ಕಾಂಗ್ರೆಸ್ನಲ್ಲಿ ನಾವೆಲ್ಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿಲ್ಲ. ನಾಯಕತ್ವ ಸರಿಯಿಲ್ಲ’ ಎಂಬುದೇ ಬಹುಮುಖ್ಯ ಆರೋಪ. ಅಂದು 2020ರಲ್ಲಿ ರಾಜೀನಾಮೆ ಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ, ಇತ್ತೀಚೆಗೆ ಪಕ್ಷ ಬಿಟ್ಟ ಹಾರ್ದಿಕ್ ಪಟೇಲ್, ಜೈವೀರ್ ಶೆರ್ಗಿಲ್ ನಂಥ ಯುವ ನಾಯಕರು, ‘ಕಾಂಗ್ರೆಸ್ನಲ್ಲಿ ನಮ್ಮಂಥ ಯುವ ನಾಯಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇವೆ’ ಎಂದು ಕಿಡಿಕಾರಿದ್ದರೆ, ಇವತ್ತು ರಾಜೀನಾಮೆ ಕೊಟ್ಟ ಗುಲಾಂ ನಬಿ ಆಜಾದ್ರಿಂದ ಹಿಡಿದು, ಈ ಹಿಂದೆ ಪಕ್ಷ ತೊರೆದು ಹೋದ ಕಪಿಲ್ ಸಿಬಲ್, ಸುನೀಲ್ ಜಾಖರ್, ಅಶ್ವನಿ ಕುಮಾರ್, ಆರ್ಪಿಎನ್ ಸಿಂಗ್ ಹೇಳಿದ್ದು, ‘ಕಾಂಗ್ರೆಸ್ನಲ್ಲಿ ನಮ್ಮಂಥ ಹಿರಿಯ ನಾಯಕರಿಗೆ ನೆಲೆ ಇಲ್ಲ. ಇಲ್ಲಿನ ವರಿಷ್ಠರಿಗೆ ಬೇಕಾಗಿರುವುದು ಅನನುಭವಿಗಳು ಮತ್ತು ಮುಖಸ್ತುತಿ ಮಾಡುವ ಭಟ್ಟಂಗಿಗಳು’ ಎಂಬ ಮಾತನ್ನು. ಹಾಗಿದ್ದರೆ ಕಾಂಗ್ರೆಸ್ನಲ್ಲಿ ಯಾರು ನಿರ್ಲಕ್ಷಿತರಲ್ಲ? ಯುವಕರಿಗೂ ಸಲ್ಲದ-ಹಿರಿಯರೂ ಉಳಿಯಲು ಸಾಧ್ಯವಾಗದ ಪಕ್ಷವಾಗಿಬಿಟ್ಟಿತಾ ಕಾಂಗ್ರೆಸ್?
ಕಳೆದ ಎರಡು ವರ್ಷಗಳಿಂದ ಸಾಲುಸಾಲು ರಾಜೀನಾಮೆ ಪತ್ರಗಳು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಎದುರು ಬರುತ್ತಿದ್ದರೂ, ನೇರವಾಗಿ, ಕಠೋರವಾಗಿ ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡಿ ಹೋದ, ‘ಇಡೀ ಕಾಂಗ್ರೆಸ್ ಪಕ್ಷವನ್ನು ಮುಳುಗಿಸಿದ್ದು ನಿಮ್ಮ ಪುತ್ರನೇ. ಜಿ 23 ನಾಯಕರಾದ ನಮಗೆ ನೀವೆಲ್ಲ ಸೇರಿ ಅನ್ಯಾಯ ಮಾಡಿದ್ದೀರಿ’ ಎಂದು ನೇರ-ನಿಷ್ಠುರವಾಗಿ ಹೇಳಿ ಹೋಗಿದ್ದು ಮಾತ್ರ ಗುಲಾಂ ನಬಿ ಆಜಾದ್ ಒಬ್ಬರೇ. ಸದ್ಯ ಸೋನಿಯಾ ಗಾಂಧಿಯಾಗಲೀ, ಅವರ ಮಕ್ಕಳಾಗಲೀ (ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ) ಭಾರತದಲ್ಲಿ ಇಲ್ಲ. ಇದೇ ಹೊತ್ತಲ್ಲಿ ಗುಲಾಂ ಪಕ್ಷದೊಂದಿಗೆ ನಂಟು ಕಳಚಿಕೊಂಡಿದ್ದಾರೆ.
ಅಷ್ಟು ನಿಷ್ಠಾವಂತರಾಗಿದ್ದವರು ರೆಬೆಲ್ ಆಗಿದ್ದೇಕೆ?
ಪಕ್ಷ ಸಿದ್ಧಾಂತಗಳನ್ನು ಹೊರತುಪಡಿಸಿ, ವೈಯಕ್ತಿಕವಾಗಿ ಹೇಳುವುದಾದರೆ ಗುಲಾಂ ನಬಿ ಆಜಾದ್ ಎಲ್ಲ ಪಕ್ಷಗಳ ನಾಯಕರೊಂದಿಗೆ ಒಳ್ಳೆಯ ಸ್ನೇಹ ನಿಭಾಯಿಸಿಕೊಂಡು ಬಂದವರು. ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಅವರು ಅತ್ಯುತ್ತಮ ಸ್ನೇಹಿತ. ಇತ್ತೀಚೆಗೆ ನಬಿಯವರನ್ನು ರಾಜ್ಯಸಭೆಯಿಂದ ಬೀಳ್ಕೊಡುವಾಗ ಪ್ರಧಾನಿ ಮೋದಿ ತುಂಬ ಭಾವನಾತ್ಮಕವಾಗಿ ಮಾತನಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷವೇ ಅವರನ್ನು ಕಡೆಗಣಿಸಿತು. ಈ ಬಗ್ಗೆ ಗುಲಾಂ ನಬಿ ಆಜಾದ್ಗೂ ನೋವಿದೆ ಎಂಬುದನ್ನು ಅದೇ ಪಕ್ಷದ ಪ್ರಮುಖ ನಾಯಕರೇ ಪರೋಕ್ಷವಾಗಿ ಹಿಂದೆ ಕೆಲವು ಬಾರಿ ಹೇಳಿದ್ದಿದೆ. ತಮ್ಮ ಇಡೀ ರಾಜಕೀಯ ಜೀವನವನ್ನು ಕಾಂಗ್ರೆಸ್ಗೇ ಧಾರೆ ಎರೆದಿದ್ದ ಆಜಾದ್ ಇತ್ತೀಚೆಗೆ ರೆಬೆಲ್ ಆಗಲು ಪ್ರಮುಖ ಕಾರಣಗಳು ಇವು..
1. ಗಾಂಧಿ ಕುಟುಂಬದ ಹಿರಿಯರೊಂದಿಗೆ ಇದ್ದಾಗ ಎಲ್ಲ ರೀತಿಯ ಗೌರವ, ಅಧಿಕಾರ ಪಡೆದಿದ್ದ ಗುಲಾಂ ನಬಿಗೆ, ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೇಲೆ ತನ್ನ ಮತ್ತು ತನ್ನಂಥ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಕಾಡುತ್ತಿತ್ತು. ರಾಹುಲ್ ಗಾಂಧಿಗೆ ಹತ್ತಿರವಾದವರು ತನ್ನ ಬಗ್ಗೆ ಚಾಡಿ ಹೇಳಿದ್ದಾರೆ. ಹಾಗಾಗಿಯೇ ನನ್ನನ್ನು ಬದಿಗೊತ್ತಲಾಗುತ್ತಿದೆ ಎಂಬುದು ಅವರ ಅನಿಸಿಕೆಯಾಗಿತ್ತು. ದಿನೇದಿನೇ ಆ ಅನಿಸಿಕೆ ಬಲವಾಗುವಂಥ ಸನ್ನಿವೇಶಗಳು ಅವರಿಗೆ ಪಕ್ಷದಲ್ಲಿ ಎದುರಾಗುತ್ತ ಹೋದವು.
2. ಆಜಾದ್ ಎಂಟು ಅವಧಿಗೆ ರಾಜ್ಯ ಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಆದರೆ 2021ರ ಮಾರ್ಚ್ನಲ್ಲಿ ಅವರ ಅವಧಿ ಮುಗಿದಾಗ ಕಾಂಗ್ರೆಸ್ ವರಿಷ್ಠರು ಮತ್ತೆ ಅವರನ್ನು ಮುಂದುವರಿಸಲಿಲ್ಲ. ಮೇಲ್ಮನೆಗೆ ಮತ್ತೊಮ್ಮೆ ಆಯ್ಕೆ ಮಾಡಲಿಲ್ಲ.
3. ಈ ವರ್ಷದ ಪ್ರಾರಂಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಗುಲಾಂ ನಬಿ ಆಜಾದ್ಗೆ ಪದ್ಮ ಭೂಷಣ ಪ್ರಶಸ್ತಿ ಕೊಟ್ಟಾಗ ಕಾಂಗ್ರೆಸ್ನಲ್ಲಿ ಜೈರಾಮ್ ರಮೇಶ್ ಸೇರಿ ಕೆಲವರು ಟೀಕೆ ಮಾಡಿದ್ದರು. ಬಿಜೆಪಿ ಸರ್ಕಾರ ಅವರಿಗೆ ರಾಷ್ಟ್ರದ ಅತ್ಯುನ್ನತ ಗೌರವ ಕೊಟ್ಟಿದೆ ಎಂದರೆ, ಅವರು ಬಿಜೆಪಿಯತ್ತ ಒಲಿಯುತ್ತಿದ್ದಾರೆ ಎಂದೇ ಅರ್ಥ, ಪ್ರಶಸ್ತಿ ತಿರಸ್ಕರಿಸಿದ್ದರೆ ಚೆನ್ನಾಗಿತ್ತು ಎಂಬ ಮಾತುಗಳು ಪರೋಕ್ಷವಾಗಿ ಕಾಂಗ್ರೆಸ್ ವಲಯದಿಂದಲೇ, ಅದೂ ಗಾಂಧಿ ಕುಟುಂಬದ ಆಪ್ತರಿಂದಲೇ ಕೇಳಿಬಂದಿತ್ತು.
4. 2020ರಲ್ಲಿ ಜಿ 23 ನಾಯಕರೆಲ್ಲ ಸೇರಿ ಸೋನಿಯಾ ಗಾಂಧಿಗೆ ಪತ್ರ ಬರೆದು, ಪಕ್ಷದ ನಾಯಕತ್ವ ಗಟ್ಟಿಯಾಗಬೇಕು, ಸಂಘಟನೆ ಬಲವಾಗಬೇಕು. ರಾಷ್ಟ್ರಾದ್ಯಂತ ಕಾಂಗ್ರೆಸ್ನಲ್ಲಿ ಸಂಪೂರ್ಣ ಬದಲಾವಣೆಯಾಗಬೇಕು ಎಂದು ಆಗ್ರಹಿಸಿದ್ದರು. ಅದರಲ್ಲಿ ಗುಲಾಂ ನಬಿ ಆಜಾದ್ ಕೂಡ ಸೇರಿದ್ದಾರೆ. ಆದರೆ ಇದುವರೆಗೂ ವರಿಷ್ಠರು ಆ ದಿಶೆಯಲ್ಲಿ ಕೆಲಸ ಮಾಡಲಿಲ್ಲ. ಪಕ್ಷ ಪದೇಪದೆ ಎಡವುತ್ತಿದೆ ಎಂಬ ಬೇಸರ ಗುಲಾಂಗೆ ಇದ್ದೇ ಇತ್ತು.
ಬಿಟ್ಟು ಹೋದ ಪ್ರಮುಖರ ಲಿಸ್ಟ್
2019ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಕಳಪೆ ಪ್ರದರ್ಶನ ತೋರಿದ ಮೇಲೆ ಗುಲಾಂ ನಬಿ ಆಜಾದ್ ಸೇರಿ ಹಲವು ಹಿರಿಯ ನಾಯಕರ ಅಸಮಾಧಾನ ತುತ್ತತುದಿಗೆ ಏರಿತ್ತು. ಕೇಳಿದ ಅಧಿಕಾರ ಸಿಗುತ್ತಿಲ್ಲ, ಪಕ್ಷದಲ್ಲಿ ಬದಲಾವಣೆಗಳು ಆಗುತ್ತಿಲ್ಲ ಎಂಬಿತ್ಯಾದಿ ಕಾರಣಗಳನ್ನು ಕೊಟ್ಟು ಒಂದಷ್ಟು ಪ್ರಮುಖರು ಈಗಾಗಲೇ ಜಾರಿಕೊಂಡಿದ್ದಾರೆ. ಹೀಗೆ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಬಿಟ್ಟವರ ಪಟ್ಟಿ ಇಲ್ಲಿದೆ.
1. ಜ್ಯೋತಿರಾದಿತ್ಯ ಸಿಂಧಿಯಾ:
2. ಆರ್.ಪಿ. ಎನ್ ಸಿಂಗ್
3. ಸುನೀಲ್ ಜಾಖರ್
4. ಅಶ್ವನಿ ಕುಮಾರ್
5. ಕಪಿಲ್ ಸಿಬಲ್
6. ಕ್ಯಾಪ್ಟನ್ ಅಮರಿಂದರ್ ಸಿಂಗ್
7. ಹಾರ್ದಿಕ್ ಪಟೇಲ್
8. ಜೈವೀರ್ ಶೆರ್ಗಿಲ್
ಇವರೆಲ್ಲ ರಾಷ್ಟ್ರ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡ ಪ್ರಮುಖರಾಗಿದ್ದರು. ಅದರಾಚೆಗೆ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಪ್ರಮುಖರು ಎನ್ನಿಸಿಕೊಂಡಿದ್ದ ಕಾಂಗ್ರೆಸ್ ನಾಯಕರೂ ಕೂಡ ರಾಜೀನಾಮೆ ಕೊಟ್ಟ ಉದಾಹರಣೆಗಳಿವೆ. 2024ರ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪಕ್ಷ ಸಂಘಟನೆ ಮಾಡಬೇಕು ಎಂದು ಹಲವು ಸಾಂಸ್ಥಿಕ ಹುದ್ದೆಗಳ ಬದಲಾವಣೆ, ನೇಮಕಾತಿ ಪ್ರಕ್ರಿಯೆಯೂ ಕಾಂಗ್ರೆಸ್ನಲ್ಲಿ ಭರದಿಂದ ನಡೆಯುತ್ತಿದೆ. ಅದರ ಮಧ್ಯೆಯೇ ಇಂದು ಗುಲಾಂ ನಬಿ ಆಜಾದ್ ರಾಜೀನಾಮೆ ಕಾಂಗ್ರೆಸ್ಗೆ ಆಘಾತ ಕೊಟ್ಟಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಮತ್ತಷ್ಟು ಹಿನ್ನಡೆ; ಗುಲಾಂ ನಬಿ ಆಜಾದ್ ಬೆನ್ನಲ್ಲೇ ಮತ್ತೂ ಐವರು ಪ್ರಮುಖರ ರಾಜೀನಾಮೆ