Site icon Vistara News

ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ; ಎಲ್ಲೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ

ಶ್ರೀನಗರ: ಕಾಶ್ಮೀರಿ ಪಂಡಿತ್‌ ಕುಟುಂಬದವರಾಗಿದ್ದ, ಸರ್ಕಾರಿ ಉದ್ಯೋಗಿ ರಾಹುಲ್‌ ಭಟ್‌ರನ್ನು ಗುರುವಾರ ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೇ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬದ್ಗಾಮ್‌ ಜಿಲ್ಲೆಯ ಚದೂರಾ ಪಟ್ಟಣದ ತಹಸೀಲ್‌ ಕಚೇರಿಯ ಮೇಲೆ ಗುರುವಾರ ಉಗ್ರರು ದಾಳಿ ನಡೆಸಿದ್ದರು. ಅಲ್ಲಿಯೇ ಕಂದಾಯ ವಿಭಾಗದಲ್ಲಿ ಕ್ಲರ್ಕ್‌ ಆಗಿದ್ದ ರಾಹುಲ್‌ ಭಟ್‌ (36) ಹತ್ಯೆಯಾಗಿದ್ದಾರೆ. ಇವರು 2010-11ರಲ್ಲಿ ವಲಸಿಗರ ವಿಶೇಷ ಉದ್ಯೋಗ ಪ್ಯಾಕೇಜ್‌ನಡಿ ಉದ್ಯೋಗ ಪಡೆದಿದ್ದರು. ಉಗ್ರರ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ರಾಹುಲ್‌ ಭಟ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಕಾಶ್ಮೀರಿ ಪಂಡಿತ್‌ ಸಮುದಾಯದವರು ಕೆಲವೇ ಮಂದಿ ಅಲ್ಲಿದ್ದಾರೆ. ಆದರೆ ಅವರ ಮೇಲೆ ಪದೇಪದೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ನಡೆಸುತ್ತಿರುವ ಮೂರನೇ ದಾಳಿ ಇದಾಗಿದೆ.

ರಾಹುಲ್‌ ಭಟ್‌

ರಾಹುಲ್‌ ಭಟ್‌ ಹತ್ಯೆಯೀಗ ಕಾಶ್ಮೀರದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗೆ ಕಾರಣವಾಗಿದೆ. ಕ್ವಾಜಿಯಾಬಾದ್‌, ಪುಲ್ವಾಮಾ, ಬದ್ಗಾಮ್‌, ಗಂದೇಬಾಲ್‌ ಮತ್ತು ಬಾರಾಮುಲ್ಲಾಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಬಿಜೆಪಿ, ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ವಿರುದ್ಧದ ಘೋಷಣೆಗಳ ಪೋಸ್ಟರ್‌ ಹಿಡಿದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | ಜಮ್ಮು ಕಾಶ್ಮೀರಕ್ಕೆ ₹20,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಪ್ರಧಾನಿ ಮೋದಿ ಚಾಲನೆ

ನಿನ್ನೆಯಿಂದಲೇ ಶುರುವಾದ ಪ್ರತಿಭಟನೆ ಇಂದು ಮತ್ತಷ್ಟು ಹೆಚ್ಚಾಗಿತ್ತು. ಬದ್ಗಾಮ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಇಂದು ಎರಡು ಗುಂಪುಗಳ ನಡುವೆ ಸಂಘರ್ಷವೂ ಏರ್ಪಟ್ಟಿತ್ತು. ಇದರಿಂದಾಗಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಗುಂಪುಗಳನ್ನು ಚದುರಿಸಲು ಮತ್ತು ಪ್ರತಿಭಟನಾಕಾರರು ಬದ್ಗಾಮ್‌ನ ಏರ್‌ಪೋರ್ಟ್‌ ರಸ್ತೆಯಲ್ಲಿ ಸಾಗುವುದನ್ನು ತಡೆಯಲು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.  

ಪ್ರತಿಭಟನಾಕಾರ, ಕಾಶ್ಮೀರಿ ಪಂಡಿತ್‌ ಸಮುದಾಯದ ಅಮಿತ್‌ ಎಂಬುವರು ಮಾಧ್ಯಮಗಳೊಂದಿಗೆ ಮಾತನಾಡಿ, ಇಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಆಡಳಿತ ನಮಗೆ ಭದ್ರತೆಯನ್ನು ನೀಡಬೇಕು. ಅದಿಲ್ಲದಿದ್ದರೆ ನಾವೆಲ್ಲರೂ ನಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತೇವೆ. ಇನ್ನೊಬ್ಬ ಪ್ರತಿಭಟನಾ ನಿರತ ಸರ್ಕಾರಿ ಉದ್ಯೋಗಿ ಮಾತನಾಡಿ, ನಮ್ಮ ಪ್ರತಿಭಟನೆಯನ್ನು ತಡೆಯಲು ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ ಮಾಡುವ ಇಲ್ಲಿನ ಭದ್ರತಾ ಸಿಬ್ಬಂದಿ, ಆಡಳಿತಕ್ಕೆ, ನಿನ್ನೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರನ್ನು ಯಾಕೆ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಘಟನೆಯನ್ನು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ನಾನು ಬದ್ಗಾಮ್‌ಗೆ ಭೇಟಿ ನೀಡಿ, ರಾಹುಲ್‌ ಭಟ್‌ ಕುಟುಂಬದವರೊಂದಿಗೆ ಮಾತನಾಡಲು ಇಚ್ಛಿಸುತ್ತೇನೆ. ಆದರೆ ನನ್ನನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದಿದ್ದಾರೆ. 

ಇದನ್ನೂ ಓದಿ | ಜಮ್ಮು-ಕಾಶ್ಮೀರ ವಿಧಾನಸಭಾ ಕ್ಷೇತ್ರ ಮರುವಿಂಗಡನೆ ಅಂತಿಮ. ಕಾಶ್ಮೀರಕ್ಕೆ 47, ಜಮ್ಮುಗೆ 43 ಕ್ಷೇತ್ರ ನಿಗದಿ

Exit mobile version