ಜೈಪುರ: ರಾಜಸ್ಥಾನದಲ್ಲಿ ಪುಲ್ವಾಮ ಹುತಾತ್ಮ ಯೋಧರ ಪತ್ನಿಯರ ಮೇಲೆ ಹಲ್ಲೆ ನಡೆಸಿದ (Pulwama Widows Row) ಪ್ರಕರಣವನ್ನು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಜೈಪುರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದು, ಇದೇ ವೇಳೆ ಕಲ್ಲು ತೂರಾಟ ಮಾಡಲಾಗಿದೆ. ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿದ್ದಾರೆ.
ಹುತಾತ್ಮ ಯೋಧರ ಪತ್ನಿಯರ ಮೇಲೆ ಪೊಲೀಸರು ಇತ್ತೀಚೆಗೆ ಹಲ್ಲೆ ನಡೆಸಿದ್ದು, ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ಅವರನ್ನು ಸ್ಥಳಾಂತರ ಮಾಡಲಾಗಿದೆ. ಇದನ್ನು ಖಂಡಿಸಿ ಜೈಪುರದಲ್ಲಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ವಾಕ್ಸಮರ ನಡೆದಿದೆ.
ಪೊಲೀಸರ ಜತೆಗಿನ ವಾಗ್ವಾದದ ವೇಳೆಯೇ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಾಟ ನಡೆಸಿದ್ದಲ್ಲದೆ, ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಲಾಗಿದೆ. ಹಾಗಾಗಿ, ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಕೆಗೆ ಆಗ್ರಹಿಸಿ ಹುತಾತ್ಮ ಯೋಧರ ಪತ್ನಿಯರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Pulwama Martyrs: ಪುಲ್ವಾಮಾ ಹುತಾತ್ಮ ಯೋಧರ ಪತ್ನಿಯರ ಮೇಲೆ ರಾಜಸ್ಥಾನ ಪೊಲೀಸರಿಂದ ಹಲ್ಲೆ